
ಹೆಣ್ಣು ಬಾರ್ಬಿ ಗೊಂಬೆಯಾಗಬೇಕೆ?
ಸೆಪ್ಟೆಂಬರ್ 14, 2026... ದೇಶದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮನೆಯೊಂದರಲ್ಲಿ ಗಣೇಶನ ಪೂಜೆ. ಕ್ರೀಡೆ, ಸಿನಿಮಾ, ಉದ್ಯಮ, ರಾಜಕೀಯ, ಕಲಾಜಗತ್ತು ಹೀಗೆ ನಾನಾ ಕ್ಷೇತ್ರಗಳ ತಾರೆಯರು ಅಲ್ಲಿಗೆ ಬಂದಿದ್ದರು. ಮಗುವಿನ ತಾಯಿಯಾದ ನಂತರ ಹೆಚ್ಚಾಗಿ ಕ್ಯಾಮೆರಾಗಳ ಕಣ್ಣಿಗೆ ಬೀಳದಂತಿದ್ದ ಕತ್ರೀನಾ ಕೈಫ್ ಅವರೂ ಪತಿ ವಿಕಿ ಕೌಶಲ್ ಜೊತೆಗೆ ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದರು. ಹಿಂಜರಿಯುತ್ತಲೇ ಫೋಟೊಗೆ ಪೋಸು ಕೊಟ್ಟ ಕತ್ರೀನಾಗೆ ಬಹುಶಃ ಬರಬಹುದಾದ ಟ್ರೋಲ್‌ಗಳ ಅಂದಾಜಿತ್ತು ಅನ್ನಿಸುತ್ತದೆ. ಟ್ರೋಲ್‌ಗಳ ಸುರಿಮಳೆ ಶುರುವಾಗಿಯೇ ಬಿಟ್ಟಿತು.
ಆಕೆ 2003ರಲ್ಲಿ ಚಿತ್ರರಂಗಕ್ಕೆ ಬಂದಾಗಿನ ಫೋಟೊಗಳಿಂದ ಹಿಡಿದು, ನಾಯಕಿಯಾಗಿ ನಟಿಸಿದ್ದ ಚಿತ್ರಗಳ ಫೋಟೊ ಹಾಕಿ, ‘ನೋಡಿ ನೋಡಿ ಹೇಗಿದ್ದ ಕತ್ರೀನಾ ಹೇಗಾಗಿದ್ದಾಳೆ’ ಎನ್ನುವ ಅವಹೇಳನದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬರಲಾರಂಭಿಸಿದವು. ಇದು ಮೊದಲ ಸಲವಲ್ಲ. ಹಲವು ನಟಿಯರು ಇದನ್ನು ಎದುರಿಸಿದ್ದಾರೆ. ಐಶ್ವರ್ಯಾ ರೈಗೆ ಆಕೆಯ ಎತ್ತರ ಬೆಳೆದ ಮಗಳಿರುವಾಗಲೂ ಆಕೆ ಮಾತ್ರ ವಿಶ್ವಸುಂದರಿಯಾದಾಗಿನ ಮೈಕಟ್ಟನ್ನೇ ಕಾಪಾಡಿಕೊಳ್ಳಬೇಕು ಎಂದು ಬಯಸುವ ಜನ ನಾವು. ಆದರೆ ಈ ಸಲ ಅವಹೇಳನಕ್ಕೆ ಉತ್ತರವಾಗಿ ಹಲವು ದನಿಗಳು ಎದ್ದವು.
ಒಂದು ಕಾಲದಲ್ಲಿ ಕತ್ರೀನಾಳ ಆತ್ಮೀಯರಾಗಿದ್ದ ಸಲ್ಮಾನ್ ಅದನ್ನು ಕಟುವಾಗಿ ಟೀಕಿಸುತ್ತಾ, ‘ಆಕೆ ಈಗ ತಾನೆ ಮಗುವನ್ನು ಹೆತ್ತಿದ್ದಾಳೆ.ಇಂಥ ಈ ಸಂದರ್ಭದಲ್ಲಿ ಹೆಣ್ಣಿನ ತೂಕ ಹೆಚ್ಚಾಗುವುದು ಸಹಜ, ಆಕೆ ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂದುಕೊಂಡರೆ ಆಗ ಆ ಬಗ್ಗೆ ಗಮನಹರಿಸುತ್ತಾಳೆ. ಸದ್ಯಕ್ಕೆ ತನ್ನ ಕುಟುಂಬದೊಡನೆ ನೆಮ್ಮದಿಯಾಗಿರಲು ಬಿಡಿ’ ಎಂದು ಸಿಟ್ಟಿನಿಂದಲೇ ಅಬ್ಬರಿಸಿದರು. ಆನಂತರ ಕೆಲವು ಕ್ಷಮಾಪಣೆಗಳೂ ಬಂದವು.
ಚಿತ್ರರಂಗದವರೇ ಆದ ಸಮೀರಾ ರೆಡ್ಡಿ, ಪರಿಣೀತಿ ಚೋಪ್ರಾ, ಹೃತಿಕ್ ರೋಷನ್, ವಿವೇಕ್ ಒಬೆರಾಯ್ ಸೇರಿದಂತೆ ಹಲವರು ಈ ಆನ್‌ಲೈನ್ ಪೀಡನೆಯನ್ನು ವಿರೋಧಿಸಿದರು. ಆರೋಗ್ಯಕರ ಮನಸ್ಥಿತಿಯನ್ನು ಇಟ್ಟುಕೊಂಡ ಹಲವರು ಇದನ್ನು ವಿರೋಧಿಸಿ ಹೇಳಿಕೆಗಳನ್ನೂ ಕೊಟ್ಟರು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಹೆಣ್ಣು ಗರ್ಭಿಣಿಯಾಗಿ, ಮಗು ಹೆತ್ತು ಬಾಣಂತನ ಪೂರೈಸುವಷ್ಟರಲ್ಲಿ ಆಕೆಯ ಶಾರೀರಿಕ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುವುದು ತೀರಾ ಸಹಜವಾದ ಕ್ರಿಯೆ. ಪ್ರಸವದ ನಂತರ ಮಹಿಳೆಯರಲ್ಲಿ ಹಾರ್ಮೋನುಗಳ ಏರುಪೇರು ವಿಪರೀತವಾಗಿ ಉಂಟಾಗುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವ (elasticity) ಮತ್ತು ಕೊಬ್ಬಿನ ಶೇಖರಣೆಯ ಮೇಲೆಯೂ ಪರಿಣಾಮ ಬೀರುತ್ತದೆ.
ಗರ್ಭ ಧರಿಸಿದಾಗಿನಿಂದ ಗರ್ಭಾಶಯದ ಹಿಗ್ಗುವಿಕೆ ಹಾಗೂ ಹೊಟ್ಟೆಯ ಸ್ನಾಯುಗಳು ಹಿಗ್ಗುತ್ತವೆ. ಮಗುವಾದ ಬಳಿಕ ಇದು ಸಹಜ ಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಮಗುವಿಗೆ ಎದೆಹಾಲುಣಿಸಲು ಹೆಚ್ಚಿನ ಶಕ್ತಿ ವ್ಯಯವಾಗುವ ಕಾರಣ ಹೊಟ್ಟೆ, ಸೊಂಟ, ತೊಡೆಯ ಭಾಗದಲ್ಲಿ ಹೆಚ್ಚುವರಿ ಕೊಬ್ಬು ಶೇಖರವಾಗುವುದು ಕೂಡ ಸಹಜವೇ. ಮಗು ಹಾಲು ಕುಡಿಯುವುದು ನಿಂತ ಬಳಿಕವೇ ಹೆಣ್ಣು ಸಹಜ ಮೈಕಟ್ಟನ್ನು ಹೊಂದಲು ಸಾಧ್ಯ ಎಂಬುದು ವೈಜ್ಞಾನಿಕ ಸತ್ಯ. ಬಸುರಿ– ಬಾಣಂತನದ ಹಂತದಲ್ಲಿ ಹೆಣ್ಣುಮಕ್ಕಳಿಗೆ ರೂಪಾಂತರವೆಂಬುದು ಸಹಜವಾಗಿರುತ್ತದೆ. ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂಬುದನ್ನು ಮರೆತು, ಸದಾ ಅವಳ ಮುಂದೆ ‘ಮಾಪನ’ವೊಂದನ್ನು ಹಿಡಿದು ‘ನೋಡು, ಹಿಂದೆ ಹೀಗಿದ್ದೆ, ಈಗ ಹೀಗಾಗಿದ್ದಿಯಾ’ ಎಂಬ ಮಾತುಗಳನ್ನಾಡಿ ನೋಯಿಸಲಾಗುತ್ತದೆ.
ಅಂದ, ದೇಹದ ಆಕಾರದಿಂದಲೇ ಅವಳ ಅಸ್ತಿತ್ವ ಅಂದುಕೊಂಡ ಮನಸ್ಥಿತಿಯಿಂದ ಮಾತ್ರ ಇಂಥ ಚುಚ್ಚುಮಾತುಗಳು ಬರಲು ಸಾಧ್ಯ.
ಮತ್ತೆ ಕತ್ರೀನಾ ವಿಷಯಕ್ಕೆ ಬಂದರೆ, ನಾವು ಗಮನಿಸಬೇಕಾದ ಅಂಶವೇನೆಂದರೆ; ಅದೇ ಮಹಿಳೆಯ ದೇಹದ ಸೋ ಕಾಲ್ಡ್ ಸ್ವೀಕಾರಾರ್ಹತೆ (acceptability) ಕುರಿತಂತೆ ಇರುವ ಸಾಮಾಜಿಕ ಗೀಳು ಮತ್ತು ಹೇರಲಾದ ಕಟ್ಟುನಿಟ್ಟಿನ ಮಾನದಂಡಗಳು. ಹೆಣ್ಣಿನ ದೇಹ ನಮ್ಮ ಕಣ್ಣಿನ ಸಂತೋಷಕ್ಕೆ ಎನ್ನುವ ಹೀನ ಮನೋಭಾವ ಇದರ ಹಿಂದೆ ಕೆಲಸ ಮಾಡುತ್ತದೆ. ಇದು ಮಹಿಳೆಯರ ಮನಸ್ಸಿನಲ್ಲಿ ಸುಲಭಕ್ಕೆ ಮುಟ್ಟಲಾಗದ ಗುರಿಯನ್ನು ಕಟ್ಟಿ ಅವರು ನಿರಂತರವಾಗಿ ಆ ಮಾಯಾಜಿಂಕೆಯ ಹಿಂದೆ ಓಡುವಂತೆ ಮಾಡಿ, ದೈಹಿಕ ಮತ್ತು ಮಾನಸಿಕವಾಗಿ ಅವರನ್ನು ದಣಿಸುತ್ತದೆ.
ಇದೇ ವಿಷಯದ ಚರ್ಚೆಯೊಂದರಲ್ಲಿ ಭಾಗವಹಿಸಿದ ಇಂಡಿಯಾ ಟುಡೆ ಪತ್ರಕರ್ತೆ ಪ್ರೀತಿ ಚೌಧರಿ ಹೇಳುವ ಪ್ರಕಾರ, ‘ಕತ್ರೀನಾ ಬಾಣಂತಿ, ಹಾಗಾಗಿ ಪಾಪ ದಪ್ಪವಾಗಿದ್ದಾಳೆ, ಆಮೇಲೆ ಕರಗಿಸುತ್ತಾಳೆ’ ಎಂದು ಸಮಜಾಯಿಷಿ ಹೇಳುವುದೇ ಒಂದು ಟ್ರ್ಯಾಪ್. ಏಕೆಂದರೆ ಇದು ಸಮಜಾಯಿಷಿ ಕೊಡಬೇಕಾದ ಅಪರಾಧ ಅಥವಾ ಅನಾಹುತ ಅಲ್ಲ.
ಇಲ್ಲಿ ನಾವು ಮತ್ತೊಂದು ಟ್ರ್ಯಾಪ್ ಬಗ್ಗೆಯೂ ಮಾತನಾಡಬೇಕು. ಅದೇ ಮಾಧ್ಯಮಗಳು ಮುಂದಿಟ್ಟ ‘ಸೂಪರ್ ವುಮನ್’ ಪರಿಕಲ್ಪನೆ. ಇದರ ಪ್ರಕಾರ ಹೆಣ್ಣಿನ ಯಶಸ್ಸಿರುವುದು ಆಕೆ ಒಳ್ಳೆಯ ವಿದ್ಯಾವಂತಳಾಗಿ, ಕೆಲಸವನ್ನು ಲೀಲಾಜಾಲವಾಗಿ ನಿರ್ವಹಿಸುತ್ತಲೇ ಮನೆಯನ್ನು ಮಾದರಿ ಮನೆಯಾಗಿ ಇಟ್ಟುಕೊಳ್ಳುವುದು. ಮಕ್ಕಳಿಗೆ ಪಾಠ ಹೇಳಿ, ಮನೆಯ ಸದಸ್ಯರಿಗೆ ಬೇಕಾದುದನ್ನು ಅಡುಗೆ ಮಾಡಿ ಬಡಿಸಿ, ಗಂಡ ಸ್ನೇಹಿತರೊಂದಿಗೆ ಮನೆಗೆ ಬಂದರೆ ಅವರೊಡನೆ ಚರ್ಚೆಯಲ್ಲಿ ಭಾಗವಹಿಸುವಷ್ಟು ಸುತ್ತಲಿನ ಸುದ್ದಿಗಳ ಕಡೆಗೆ ಗಮನವಿಟ್ಟು ಮತ್ತು ಇದೆಲ್ಲಾ ಮಾಡುವಾಗ ತನ್ನ ದೇಹವನ್ನು ಸಹ ಮಾಟವಾಗಿ ಇಟ್ಟುಕೊಳ್ಳುವುದರಲ್ಲಿ. ಈ ನಿರೀಕ್ಷೆ ನಮ್ಮ ಮೇಲೆ ಹೇರುತ್ತಿರುವ ಹೊರೆಯನ್ನು ಗಮನಿಸಿ.
60-70-80ರ ದಶಕಗಳಲ್ಲಿ ಸಾಮಾನ್ಯರಿಗಿರಲಿ, ಸಿನಿಮಾ ತಾರೆಯರಿಗೂ ಈ ಒತ್ತಡವಿರಲಿಲ್ಲ. ಬಾರ್ಬಿ ಬೊಂಬೆ ಮೈಕಟ್ಟು ಆಗ ಅವರಿಗೂ ಮಾದರಿ ಆಗಿರಲಿಲ್ಲ. ಆದರೆ ಈಗ ಈ ಮಾಯಾಕುದುರೆಯ ಕಾರಣಕ್ಕೆ ಗಲ್ಲಿ ಗಲ್ಲಿಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಸುವ ಕ್ಲಿನಿಕ್‌ಗಳಿವೆ, ಮೈತೂಕ ಇಳಿಸಿಕೊಳ್ಳಲು ಕೇವಲ ಸೆಲೆಬ್ರಿಟಿಗಳು ತೆಗೆದುಕೊಳ್ಳುತ್ತಿದ್ದ ಮಾತ್ರೆ ಈಗ ಹಲವು ರೂಪಾಂತರಗಳಲ್ಲಿ ಮನೆಮನೆಗಳ ಕದ ತಟ್ಟುತ್ತಲಿದೆ.
ಗಂಡಸರ ಮೇಲೂ ಈ ‘ಫಿಟ್ ಬಾಡಿ’ಯ ಒತ್ತಡ ಇದೆ. ಜಿಮ್‌ಗಳಲ್ಲಿ ಬೆವರು ಬಸಿಯುತ್ತಾ ಆ ಹೃದಯಗಳೂ ಬಸವಳಿಯುತ್ತಿವೆ. ಆದರೆ ನೈಸರ್ಗಿಕ ಕಾರಣಗಳಾದ ಋತುಚಕ್ರ, ಋತುಬಂಧ, ಗರ್ಭಾವಸ್ಥೆ, ಮಗುವಿನ ಜನನ ಎಲ್ಲವೂ ಹೆಣ್ಣಿನ ದೇಹದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಹಾಗಾಗಿಯೇ ಆಕೆ ಈ ನಿರೀಕ್ಷೆಯನ್ನು ಮುಟ್ಟಲು ತನ್ನ ದೇಹ ಹಾಗೂ ಆರೋಗ್ಯ ಎರಡರೊಂದಿಗೂ ಹೋರಾಡಬೇಕಾಗುತ್ತದೆ. ಇದನ್ನು ಎದುರಿಸಲು ಬೇಕಾಗಿರುವುದು ಸಾಮಾಜಿಕ ಎಚ್ಚರ ಮತ್ತು ಹೆಣ್ಣುಮಕ್ಕಳಲ್ಲಿ ‘ನಮ್ಮ ದೇಹ ನಿಮ್ಮ ಅನುಮೋದನೆಯನ್ನು ಬೇಡುವುದಿಲ್ಲ’ ಎನ್ನುವ ಆತ್ಮವಿಶ್ವಾಸ. v