
ಮುಳಬಾಗಿಲು: ಗಲಾಟೆ ತಡೆಯಲು ಹೋದ ಕಾನ್‌ಸ್ಟೆಬಲ್‌ನನ್ನು ಕಚ್ಚಿದ ಕುಡುಕ
ಮುಳಬಾಗಿಲು: ಬಾರ್ ಮತ್ತು ರೆಸ್ಟೋರೆಂಟ್ ಒಂದರಲ್ಲಿ ತಾಲ್ಲೂಕಿನ ಎನ್.ಚಮಕಲಹಳ್ಳಿಯ ಮೋಹನ ರೆಡ್ಡಿ ಹಾಗೂ ಎನ್.ಗಡ್ಡೂರು ಗ್ರಾಮದ ಗೌತಮ್ ಮದ್ಯಪಾನ ಮಾಡಿ ಬಾರ್ ಕ್ಯಾಷಿಯರ್ ಮೇಲೆ ಗಲಾಟೆ ಮಾಡುತ್ತಿದ್ದವರನ್ನು ತಡೆಯಲು ಹೋದ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಮೋಹನ ರೆಡ್ಡಿ ಕಚ್ಚಿ ಗಾಯಗೊಳಿಸಿದ್ದಾರೆ.
ಗುರುವಾರ ಸಂಜೆ ಇಬ್ಬರು ಕುಡಿದು ಬಾರ್ ಕ್ಯಾಷಿಯರ್ ಗುರುಶೇಖರ್‌ನನ್ನು ನಿಂದಿಸಿ ಜಗಳ ಮಾಡುತ್ತಿದ್ದರು. ಇದರಿಂದ ಬೇಸತ್ತ ಕ್ಯಾಷಿಯರ್ ನಂಗಲಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣ ಸಬ್ ಇನ್‌ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ಹಾಗೂ ಜೀಪ್ ಚಾಲಕ ನಾರಾಯಣಸ್ವಾಮಿ ಸ್ಥಳಕ್ಕೆ ಆಗಮಿಸಿ ಗಲಾಟೆ ನಿಯಂತ್ರಿಸಲು ಯತ್ನಿಸಿದರು. ಮೋಹನ ರೆಡ್ಡಿ ಅವರನ್ನು ಹೊರ ಹೋಗುವಂತೆ ತಿಳಿಸುತ್ತಿದ್ದಂತೆ ಕಾನ್‌ಸ್ಟೆಬಲ್ ನಾರಾಯಣಸ್ವಾಮಿ ಅವರ ಬಲಗೈಯನ್ನು ಕಚ್ಚಿದ್ದಾರೆ.
ಕಾನ್‌ಸ್ಟೆಬಲ್ ನೋವಿನಿಂದ ಕಿರುಚಾಡುವುದನ್ನು ಗಮನಿಸಿ ಬಾರಿನಲ್ಲಿದ್ದವರು ಕೂಡಲೇ ದಾವಿಸಿ ಕಚ್ಚುವುದನ್ನು ಬಿಡಿಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಂತರ ಮೋಹನ ರೆಡ್ಡಿ ಹಾಗೂ ಗೌತಮ್ ಎಂಬುವರನ್ನು ಬಂಧಿಸಿ, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.