
ಕೆಜಿಎಫ್: ನೇಮಕಾತಿಯಲ್ಲಿ ಅನ್ಯಾಯ ಆರೋಪಿಸಿ ಗುತ್ತಿಗೆ ಕಾರ್ಮಿಕರ ಮುಷ್ಕರ
ಕೆಜಿಎಫ್: ಪೌರ ಕಾರ್ಮಿಕರ ನೇಮಕಾತಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗುತ್ತಿಗೆ ಕಾರ್ಮಿಕರು ಮಂಗಳವಾರ ಕೆಲಸಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು.
ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಕನಿಷ್ಠ ಒಂದು ವರ್ಷ ಹೊರಗುತ್ತಿಗೆ, ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕ, ಲೋಡರ್ಸ್, ಯುಜಿಡಿ ಹೆಲ್ಪರ್ಸ್, ಕ್ಲೀನರ್ಸ್ ಮತ್ತು ಹೆಲ್ಪರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ನೇರ ನೇಮಕಾತಿ ಮಾಡಲು ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿತ್ತು. ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 130 ತಾತ್ಕಾಲಿಕ ಪೌರ ಕಾರ್ಮಿಕರು ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 40 ಮಂದಿಯನ್ನು ತಾತ್ಕಾಲಿಕ ಪಟ್ಟಿಯಲ್ಲಿಟ್ಟು ಪ್ರಕಟಣೆ ಹೊರಡಿಸಿತ್ತು. ತಾತ್ಕಾಲಿಕ ಪಟ್ಟಿಯಲ್ಲಿ ಏನಾದರೂ ಆಕ್ಷೇಪಣೆ ಇದ್ದಲ್ಲಿ ಕಾರ್ಮಿಕರು ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಜಿಲ್ಲಾಡಳಿತ ಪ್ರಕಟಿಸಿದ ಪ್ರಕಟಣೆಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಆದ್ಯತೆ ಸಿಕ್ಕಿಲ್ಲ. ಕೆಲಸ ಮಾಡುತ್ತಿರುವವರಿಗೆ ದೃಢೀಕರಣ ಪತ್ರವನ್ನು ಅಧಿಕಾರಿಗಳು ಲಗತ್ತಿಸಿಲ್ಲ. ತಾರತಮ್ಯ ಮಾಡಲಾಗಿದೆ. ನಮ್ಮ ತಿಳುವಳಿಕೆ ಕೊರತೆಯನ್ನು ದುರುಪಯೋಗ ಪಡಿಸಿಕೊಂಡು ಅನ್ಯಾಯ ಮಾಡಿದ್ದಾರೆ. ಅರ್ಹರಿಗೆ ನೇರ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಹಾಗಾಗಿ ನಗರದಲ್ಲಿ ಟ್ರಾಕ್ಟರ್, ಟೆಂಪೊ, ಕಸ ಒಯ್ಯುವ ವಾಹನಗಳು ಬೀದಿಗೆ ಇಳಿಯಲಿಲ್ಲ.
ನಗರಸಭೆ ಮುಂಭಾಗದಲ್ಲಿ ಜಮಾಯಿಸಿದ ಕಾರ್ಮಿಕರು ಹಿರಿಯ ಆರೋಗ್ಯ ನಿರೀಕ್ಷಕಿ ಮಂಗಳಾ ಗೌರಿ ವಿರುದ್ಧ ಹರಿಹಾಯ್ದು, ಅವರೊಂದಿಗೆ ವಾಗ್ವಾದ ನಡೆಸಿದರು. ನಂತರ ಆಯುಕ್ತ ಶ್ರೀಧರ್ ಪ್ರತಿಭಟನಾ ನಿರತರೊಂದಿಗೆ ಮಾತನಾಡಿದರು. ನಗರಸಭೆಯಿಂದ 130 ಮಂದಿಯ ಪಟ್ಟಿ ಕಳಿಸಲಾಗಿದೆ. ಅವುಗಳ ಪೈಕಿ 40 ಮಂದಿ ಆಯ್ಕೆಯ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ. ಕಾರ್ಮಿಕರು ನೀಡುವ ಆಕ್ಷೇಪಣೆಗಳನ್ನು ಸ್ವೀಕರಿಸಿ, ಅದನ್ನು ಪರಿಗಣಿಸಲಾಗುವುದು. ಇದಕ್ಕಾಗಿ ಸಮಿತಿ ರಚನೆ ಮಾಡಲಾಗುವುದು. ನಂತರ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.