‘ಕಲ್ಯಾಣ’ದ ಪ್ರಗತಿಗೆ ದಶಸೂತ್ರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

‘ಕಲ್ಯಾಣ’ದ ಪ್ರಗತಿಗೆ ದಶಸೂತ್ರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

‘ಕಲ್ಯಾಣ’ದ ಪ್ರಗತಿಗೆ ದಶಸೂತ್ರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಕಲಬುರಗಿ: ಹಿಂದುಳಿದ ‘ಕಲ್ಯಾಣ ಕರ್ನಾಟಕ’ದ ಅಭಿವೃದ್ಧಿಗಾಗಿ 10 ಅಂಶಗಳ ನೀಲನಕ್ಷೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುರುವಾರ ಇಲ್ಲಿ ಪ್ರಕಟಿಸಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿ‌ನದ ಅಂಗವಾಗಿ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಮುಖ್ಯಮಂತ್ರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ₹1,071.56 ಕೋಟಿ ಮೊತ್ತದ 557 ಕಾಮಗಾರಿಗಳಿಗೆ ಅಡಿಗಲ್ಲು, ₹845.57 ಕೋಟಿ ಮೊತ್ತದ 383 ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ಒಟ್ಟು₹1,917 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಹೂಡಿಕೆಗೆ ವೇಗ ನೀಡಲು ಸೆಕ್ಷನ್–8 ಕಂಪನಿ ಸ್ಥಾಪನೆಗೆ ಅನುಕೂಲ ಕಲ್ಪಿಸಲು ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಅಸ್ತಿತ್ವಕ್ಕೆ ತರಲಾಗುವುದು. ಜೈವಿಕ ಆರ್ಥಿಕ ಮಿಷನ್ ಅನುಷ್ಠಾನದ ಮೂಲಕ ತೊಗರಿಬೇಳೆ, ಕಮಲಾಪುರದ ಕೆಂಪುಬಾಳೆ, ಒಣದ್ರಾಕ್ಷಿ, ಸಿರಿಧಾನ್ಯ ಸೇರಿದಂತೆ ಪ್ರಮುಖ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಲು‌ ಉದ್ದೇಶಿಸಲಾಗಿದೆ’ ಎಂದರು.

‘ರಕ್ತಹೀನತೆ ಮುಕ್ತ ಕಲ್ಯಾಣ ಕರ್ನಾಟಕದ ಗುರಿಯೊಂದಿಗೆ ಮುಂದಿನ ಎರಡು ವರ್ಷ ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಸರ್ಕಾರದಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು. ಐಟಿ ಮತ್ತು ನಾವೀನ್ಯ ಕ್ಷೇತ್ರದ ಬೆಳವಣಿಗೆಯನ್ನು ಬೆಂಗಳೂರಿನಾಚೆಗೂ ವಿಸ್ತರಿಸಲು ಕಲಬುರಗಿಯ 30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ನಾವೀನ್ಯ, ಸ್ಟಾರ್ಟ್‌ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು ‘ಕ್ರಿಯಾ’ (ಕಲಬುರಗಿ ರಿಸರ್ಚ್‌, ಇನೊವೇಷನ್‌ ಆ್ಯಂಡ್‌ ಯೂತ್‌ ಆ್ಯಕ್ಸೆಲರೇಟರ್‌) ಸ್ಥಾಪಿಸಲಾಗುವುದು’ ಎಂದು ಶಿವಕುಮಾರ್ ಹೇಳಿದರು.

‘ಕಲ್ಯಾಣದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಸಾಮರ್ಥ್ಯ ಬಲಪಡಿಸಲು ಮುಂದಿನ ಹತ್ತು ವರ್ಷಗಳಲ್ಲಿ 10 ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು. ಪ್ರತಿ‌ ವರ್ಷವೂ ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಗುರಿಯಿದೆ’ ಎಂದರು.

‘ಎರಡು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಭಾಗಕ್ಕೆ ಕ್ರಿಕೆಟ್ ಸೌಲಭ್ಯ ಒದಗಿಸಲು ಸರ್ಕಾರವು ಕೆಎಸ್‌ಸಿಎ ಜೊತೆ ಒಪ್ಪಂದಕ್ಕೆ ಚಿಂತನೆ ನಡೆಸಿದೆ. ಕಲಬುರಗಿ ತಾಲ್ಲೂಕಿನ ಹಡಗಿಲಹಾರುತಿ ಗ್ರಾಮದಲ್ಲಿ ಕ್ರೀಡಾ ನಗರ ಸ್ಥಾಪಿಸಲಾಗುವುದು. ವಿವಿಧ ಕ್ರೀಡೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ಪ್ರವಾಸೋದ್ಯಮ ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಕಲಬುರಗಿ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ ಮತ್ತು ಗಾಣಗಾಪುರವನ್ನು ಸಂಪರ್ಕಿಸುವ ಪುಣ್ಯಯಾತ್ರಾ ಸರ್ಕ್ಯೂಟ್ ಅಭಿವೃದ್ಧಿಪಡಿಸಲಾಗುವುದು. ಗಾಣಗಾಪುರವನ್ನು ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

1. ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್‌

2. ಜೈವಿಕ ಆರ್ಥಿಕ ಮಿಷನ್

3. ರಕ್ತಹೀನತೆ ವಿರುದ್ಧ ಅಭಿಯಾನ

4. ಕಲಬುರಗಿ ನಗರದ ಮೂಲಸೌಕರ್ಯ ಅಭಿವೃದ್ಧಿ

5. ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ನಿವೇಶನ

6. ಐಟಿ ಪಾರ್ಕ್ ಮತ್ತು ‘ಕ್ರಿಯಾ’ (‌KRIYA)

7. ಎಐ ಆಧಾರಿತ ಸಿ.ಸಿ.ಟಿ.ವಿ. ಕ್ಯಾಮೆರಾ ಜಾಲ

8. ಪ್ರವಾಸೋದ್ಯಮ–ಪಾರಂಪರಿಕ ತಾಣಗಳ ಅಭಿವೃದ್ಧಿ

9. ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ

10. ಕೋಟಿ ವೃಕ್ಷ ಅಭಿಯಾನ

ಸ್ಟಾರ್ಟ್‌ಅಪ್‌ಗೆ ಉತ್ತೇಜನ

‘ಕಲಬುರಗಿಯಲ್ಲಿ ಸದ್ಯ 120ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿಗೆ ನಮ್ಮ ಸರ್ಕಾರ ಉತ್ತೇಜನ ನೀಡಿದೆ. 2030ರ ವೇಳೆಗೆ ಇಲ್ಲಿ 500ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯ ಗುರಿ ಹೊಂದಲಾಗಿದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭಾನ್ವಿತರ ಗುಳೆ ತಡೆಗೆ ಐಟಿ ಪಾರ್ಕ್‌ ಸ್ಥಾಪನೆಗೂ ಕ್ರಮ ವಹಿಸಲಾಗಿದೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ