ಹಿರಿಯ ನಾಗರಿಕರ ಹಿತಕ್ಕೆ ಕಾನೂನು ಅಸ್ತ್ರ ಬಳಸಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಹಿರಿಯ ನಾಗರಿಕರ ಹಿತಕ್ಕೆ ಕಾನೂನು ಅಸ್ತ್ರ ಬಳಸಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಹಿರಿಯ ನಾಗರಿಕರ ಹಿತಕ್ಕೆ ಕಾನೂನು ಅಸ್ತ್ರ ಬಳಸಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಚಿಕ್ಕಬಳ್ಳಾಪುರ: ಹಿರಿಯ ನಾಗರಿಕರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ನಾಗರಿಕರನ್ನು ಅವರ ಮಕ್ಕಳು, ಅಳಿಯ, ಸೊಸೆ ಅಥವಾ ಕುಟುಂಬದ ಇತರ ಸದಸ್ಯರು ಪಾಲನೆ–ಪೋಷಣೆ ಮಾಡದಿರುವ ಕುರಿತು ದೂರುಗಳು ಬಂದಲ್ಲಿ, ಅಂತಹ ಪ್ರಕರಣಗಳನ್ನು ಗುರುತಿಸಿ ಸಂಬಂಧಪಟ್ಟ ಕುಟುಂಬದ ಸದಸ್ಯರನ್ನು ಕರೆಸಿ ಹಿರಿಯ ನಾಗರಿಕರನ್ನು ಗೌರವಯುತವಾಗಿ ಪಾಲನೆ–ಪೋಷಣೆ ಮಾಡುವಂತೆ ಮನವೊಲಿಸಬೇಕು. ಮನವೊಲಿಕೆ ಮೂಲಕ ಸಮಸ್ಯೆ ಬಗೆಹರಿಯದಿದ್ದಲ್ಲಿ, ಕಾನೂನಿನಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ನಾಗರಿಕರ ಪಾಲನೆ, ಪೋಷಣೆಗೆ ಸಂಬಂಧಿಸಿದಂತೆ ಮಕ್ಕಳ ಅಥವಾ ಸಂಬಂಧಪಟ್ಟವರ ಸಂಬಳ ಅಥವಾ ಇತರ ಆದಾಯ ಮೂಲದಿಂದ ಹಣ ಕಡಿತಗೊಳಿಸುವುದು, ಆಸ್ತಿ ದಾಖಲೆಗಳಲ್ಲಿ ಬಾಕಿ ನಮೂದಿಸುವುದು ಸೇರಿದಂತೆ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ವಾಪಸ್ ಪಡೆಯಲು ಇರುವ ಕಾನೂನು ಬಗ್ಗೆಯೂ ಮಾರ್ಗದರ್ಶನ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಉಚಿತ ಕಾನೂನುನೆರವು ದೊರಕುವಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರ ಇಂತಹ ಸಮಸ್ಯೆಗಳಿಗೆ ಉಪವಿಭಾಗಾಧಿಕಾರಿ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಪ್ಯಾನಲ್ ವಕೀಲರ ಸಹಕಾರ ಪಡೆದು ಅರ್ಹ ಹಿರಿಯ ನಾಗರಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಮೂಲಕ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆಯುಳ್ಳ ಅರ್ಹರು ಉಚಿತ ಕಾನೂನು ನೆರವು ಪಡೆಯಬಹುದು. ಈ ಕುರಿತು ಸಾರ್ವಜನಿಕರು ಜಾಗೃತಿ ಹೊಂದಬೇಕು. ಸಮಸ್ಯೆ ಎದುರಾದ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಗಳ ಮೊರೆ ಹೋಗದೆ, ಕಾನೂನು ಸೇವಾ ಸಂಸ್ಥೆಗಳ ಮೂಲಕ ಸೂಕ್ತ ಪರಿಹಾರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಹಿರಿಯ ನಾಗರಿಕರಿಗಾಗಿ ಕ್ರೀಡಾಕೂಟ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ನ್ಯಾಯಾಧೀಶರಾದ ಪ್ರೇಮಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚೇತನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜ್ಯೋತಿ ಲಕ್ಷ್ಮಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಕೀಲರು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

‘2 ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಿ’

ಜಿಲ್ಲೆಯಲ್ಲಿ ಎರಡು ತಿಂಗಳಿಗೆ ಒಮ್ಮೆಯಂತೆ ನಿರಂತರವಾಗಿ ಹಿರಿಯ ನಾಗರಿಕರ ಕುಂದುಕೊರತೆಗಳ ಸಭೆಗಳನ್ನು ಆಯೋಜಿಸಿ, ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಬೇಕು. ಯಾವ ಸಮಸ್ಯೆಯನ್ನು ಯಾವ ಇಲಾಖೆ ಮೂಲಕ ಪರಿಹರಿಸಬಹುದು ಎಂಬುದನ್ನು ಗುರುತಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗೆ ಸೂಚಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ