
ನಾಪೋಕ್ಲು| ಕಾವೇರಿ ತೀರ್ಥೋದ್ಭವ ಸಿದ್ಧತೆ: ಭಗಂಡೇಶ್ವರನ ಪತ್ತಾಯಕ್ಕೆ ಅಕ್ಕಿ
ನಾಪೋಕ್ಲು: ಅಕ್ಟೋಬರ್ 17 ರಂದು ಸಂಜೆ 7.50 ಕ್ಕೆ ನಡೆಯಲಿರುವ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ಭಾನುವಾರ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಿಗೆ ಚಾಲನೆ ನೀಡಲಾಯಿತು.
ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಪತ್ತಾಯಕ್ಕೆ ಅಕ್ಕಿ ಹಾಕುವ ಸಾಂಪ್ರದಾಯಿಕ ಆಚರಣೆಯಲ್ಲಿ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಪತ್ತಾಯಕ್ಕೆ ಅಕ್ಕಿ ಹಾಕಿ ಚಾಲನೆ ನೀಡಿದರು.
ಬಳ್ಳಡ್ಕ ಕುಟುಂಬಸ್ಥರು ಐನ್ ಮನೆಯಲ್ಲಿ ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸಿ, ನಂತರ ಅಕ್ಕಿಯೊಂದಿಗೆ ಭಗಂಡೇಶ್ವರ ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಸಾಂಪ್ರದಾಯಿಕ ಆಚರಣೆ ನೆರವೇರಿಸಿದರು.
ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಣಾಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಬಳ್ಳಡ್ಕ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು.
ಇಂದಿನಿಂದ ಕಾವೇರಿ ತುಲಾ ಸಂಕ್ರಮಣದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ ಐದರಂದು ಸೋಮವಾರ ಬೆಳಗ್ಗೆ 10:35ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮಹೂರ್ತ ನೆರವೇರಲಿದೆ. ಅಕ್ಟೋಬರ್ 15ರಂದು ಗುರುವಾರ ಮದ್ಯಾಹ್ನ 12.35 ಕ್ಕೆ ಅಕ್ಷಯ ಪಾತ್ರೆಗೆ ಅಕ್ಕಿ ಹಾಕಲಾಗುವುದು.
ಅಕ್ಟೋಬರ್ 15ರಂದು ಗುರುವಾರ ಸಂಜೆ 6.03 ಗಂಟೆಗೆ ಕಾಣಿಕೆ ಡಬ್ಬಿಗಳನ್ನು ಇರಿಸಲಾಗುವುದು.
ಅಕ್ಟೋಬರ್ 17ರಂದು ಶನಿವಾರ ರಾತ್ರಿ 7.50ಕ್ಕೆ ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವ ಜರುಗಲಿದೆ.