
ಶರಣಬಸವೇಶ್ವರ ಕೆರೆಗೆ ಹೊಸ ರೂಪ: ಭರದಿಂದ ಸಾಗಿದ ಕೆಲಸ
ಕಲಬುರಗಿ: ನಗರದ ಹೃದಯಭಾಗದಲ್ಲಿರುವ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ)ಯನ್ನು ಇನ್ನಷ್ಟು ಜನಾಕರ್ಷಣೆ ಮಾಡಲು ಅದಕ್ಕೆ ಹೊಸ ರೂಪ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಮತ್ತು ಟಾಟಾ ಸಿಎಸ್‌ಆರ್ ಅನುದಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕೆಲಸ ಭರದಿಂದ ಸಾಗಿವೆ.
ಟ್ಯಾಂಕ್‌ಬಂಡ್ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಕೆರೆ ದಡದಲ್ಲಿ ನಿರ್ಮಿಸಿದ್ದ 11 ಅಂಕಣ(ಡೆಕ್)ಗಳಿಗೆ ಕೆಕೆಆರ್‌ಡಿಬಿಯ 2025–26ನೇ ಸಾಲಿನ ಮ್ಯಾಕ್ರೋ ಯೋಜನೆಯಡಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ಹೊಸ ರೂಪ ನೀಡಲಾಗುತ್ತಿದೆ. ಈ ಕೆಲಸವನ್ನು ಕರಿಮಾ ಕನ್‌ಸ್ಟ್ರಕ್ಷನ್ಸ್ ಆ್ಯಂಡ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿದೆ.
ಹನ್ನೊಂದು ಅಂಕಣಗಳಲ್ಲಿ ಜನರಿಗೆ ಮುದ ನೀಡುವಂತಹ ವಾತಾವರಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಯೋಗಾಸನ ವ್ಯವಸ್ಥೆ, ಮಕ್ಕಳು ಆಟ ಆಡಲು ಪಝಲ್ ನಿರ್ಮಾಣ, ಕುಳಿತುಕೊಂಡು ಕೆರೆ ವೀಕ್ಷಣೆಗೆ ಆಸನಗಳ ವಿನ್ಯಾಸ, ಅಕ್ಯುಪ್ರೆಶರ್ ಪೆಬಲ್ಸ್(ಸಣ್ಣಕಲ್ಲುಗಳಿಂದ) ನಿರ್ಮಾಣ, ಗುಡಿಸಲು ಮಾದರಿ ಸೇರಿದಂತೆ ಜನರನ್ನು ಆಕರ್ಷಿಸಲು ಬೇಕಾದ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
ಈಗಾಗಲೇ ಕೆಲ ಅಂಕಣಗಳಿಗೆ ಬಣ್ಣ ಹಚ್ಚಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಜೊತೆಗೆ ಗುಲಾಬಿ ಸೇರಿದಂತೆ ಆಲಂಕಾರಿಕ ಸಸಿಗಳನ್ನು ನೆಡಲಾಗಿದೆ. ನೀರಿನ ಜುಳುಜುಳು ನಿನಾದ ಕೇಳಿಸುವ ಸಣ್ಣ ಜಲಪಾತದಂತಹ ಮಾದರಿ ಕೂಡ ನಿರ್ಮಾಣವಾಗಲಿದೆ. ಪಾದಚಾರಿ ಮಾರ್ಗಗಳು ಹಸಿರು ಪರಿಸರ ವಾತಾವರಣದಲ್ಲಿ ಜನ ಬೆಳಿಗ್ಗೆ ಮತ್ತು ಸಂಜೆಯ ವೇಳೆ ವಾಯುವಿಹಾರ ಮಾಡಲು ಅನುಕೂಲವಾಗಲಿವೆ.
ಕೆರೆಯ ದಡದಲ್ಲಿನ ಮಣ್ಣು ಜರಿಯದಂತೆ ಕಾಪಾಡಲು ಕಲ್ಲುಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗಿದೆ. ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಿದ್ದು, ಮಕ್ಕಳು ಸಹಿತ ಯಾರೂ ಕೆರೆಗೆ ಇಳಿಯದಂತೆ ತಡೆಯಲು ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಇನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ(ಕುಡಾ)ದ ವತಿಯಿಂದ ಕೆರೆಯ ಹೊರಭಾಗದ ಪಾದಚಾರಿ ಮಾರ್ಗ ಮತ್ತು ರೇಲಿಂಗ್ ಕಾಮಗಾರಿ ನಿರ್ವಹಿಸಲಾಗಿದೆ.
ಟಾಟಾ ಎಲೆಕ್ಟ್ರಾನಿಕ್ಸ್ ಸಹಕಾರ: ಶರಣಬಸವೇಶ್ವರ ಕೆರೆಯ ಸೌಂದರ್ಯೀಕರಣಕ್ಕೆ ಟಾಟಾ ಎಲೆಕ್ಟ್ರಾನಿಕ್ಸ್ ಕೂಡ ಸಹಕಾರ ನೀಡಿದ್ದು, ಇದಕ್ಕಾಗಿ ತನ್ನ ಸಿಎಸ್‌ಆರ್ ನಿಧಿಯ ₹2.5 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ, ಕಲ್ಲಿನ ಐದು ಆಕರ್ಷಕ ಗೋಪುರಗಳು(ಪರ್ಗೋಲಾ), ಸ್ಟೀಲಿನ ಕಸದ ಡಬ್ಬಿಗಳು, ಪಾದಚಾರಿ ಮಾರ್ಗದ ಸುತ್ತಲೂ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.
ಎಸ್‌ಬಿ ಕೆರೆಯನ್ನು ಕೇವಲ ಸೌಂದರ್ಯೀಕರಣಗೊಳಿಸುವುದಷ್ಟೇ ಅಲ್ಲದೆ, ಜನರ ಜೀವನದೊಂದಿಗೆ ಬೆಸೆದುಕೊಂಡಿರುವ ಹಸಿರು, ಆರೋಗ್ಯಕರ ಹಾಗೂ ಚೈತನ್ಯಮಯ ಸಾರ್ವಜನಿಕ ತಾಣವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. ಭವಿಷ್ಯದಲ್ಲಿ ಇದು ಕಲಬುರಗಿ ನಗರದ ಹೊಸ ಹೆಗ್ಗುರುತಾಗಬೇಕು ಎಂಬುದು ನಮ್ಮ ಆಶಯ
ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
‘ಸಚಿವರ ಆಸಕ್ತಿಯಿಂದ ಅಭಿವೃದ್ಧಿ’
‘ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿಯಿಂದ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಆಗುತ್ತಿದೆ. ಇದಕ್ಕಾಗಿ ಅವರು ಕೆಕೆಆರ್‌ಡಿಬಿ, ಟಾಟಾ ಸಿಎಸ್‌ಆರ್ ಮತ್ತು ಕುಡಾದಿಂದ ಅನುದಾನ ಕೊಡಿಸಿದ್ದಾರೆ’ ಎಂದು ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಮಾಹಿತಿ ನೀಡಿದರು.
‘ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲಾ ವಯಸ್ಸಿನ ಜನರನ್ನು ಆಕರ್ಷಿಸಲು ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಡ, ಮಧ್ಯಮ ವರ್ಗದ ಜನ ಕೂಡ ಸುಂದರವಾದ ನೈಸರ್ಗಿಕ ವಾತಾವರಣವನ್ನು ಆಸ್ವಾದಿಸಲು, ಆನಂದಿಸಲು ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದು ಜನರ ಆರೋಗ್ಯ ವೃದ್ಧಿಯ ತಾಣವೂ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.