
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಪ್ರಜಾಸೌಧಕ್ಕೆ ಎಸ್ಡಿಪಿಐನಿಂದ ಮುತ್ತಿಗೆ ಯತ್ನ
ಮಂಗಳೂರು: ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣದ ಆರೋಪಿಗೆ ಜಾಮೀನು ದೊರೆತಿರುವುದನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್ ಡಿಪಿಐ) ಕಾರ್ಯಕರ್ತರು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ನಗರದ ಪ್ರಜಾಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕಪ್ಪು ಪತಾಕೆ ತೋರಿ ಪ್ರತಿಭಟಿಸಿದರು. ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಪ್ರಜಾಸೌಧದೆಡೆಗೆ ತೆರಳಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪಕ್ಷದ ಸ್ಥಳೀಯ ಪ್ರಮುಖರಾದ ಅನ್ವರ್ ಸಾದತ್, ರಿಯಾಜ್ ಕಡಂಬು, ಮುನೀಶ್ ಅಲಿ ಮೊದಲಾದವರು ಇದ್ದರು.