
ಶಾಂತಿ ಇಲ್ಲದಿದ್ದರೆ ಸಮೃದ್ಧಿ ಸಾಧ್ಯವಿಲ್ಲ; ಶ್ರೀ ಶ್ರೀ ರವಿಶಂಕರ್ ಗುರೂಜಿ
ನ್ಯೂಯಾರ್ಕ್: ಶಾಂತಿ ಇದ್ದರಷ್ಟೇ ಸಮೃದ್ಧಿ ನೆಲೆಸಲು ಸಾಧ್ಯ, ಶಾಂತಿ ಇಲ್ಲದಿದ್ದರೆ ಅಭಿವೃದ್ಧಿ ಎನ್ನುವುದು ಅಸಾಧ್ಯ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರತಿಪಾದಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಆರ್ಟ್ ಆಫ್ ಲಿವಿಂಗ್‌ನ 'ದಿ ನೆಕ್ಸ್ಟ್ 3 ಬಿಲಿಯನ್' ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ಆರ್ಥಿಕ ಅವಕಾಶಗಳನ್ನು ಹೇಗೆ ವಿಸ್ತರಿಸಬಹುದು ಎಂಬ ವಿಷಯದ ಕುರಿತು ಚರ್ಚಿಸಲು ವಿವಿಧ ದೇಶಗಳ ಮುಖ್ಯಸ್ಥರು, ಸರ್ಕಾರದ ಪ್ರತಿನಿಧಿಗಳು, ಜಾಗತಿಕ ಸಂಸ್ಥೆಗಳ ವರಿಷ್ಠರು ಮತ್ತು ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕೆನ್ಯಾದ ಅಧ್ಯಕ್ಷ ವಿಲಿಯಂ ರುಟೊ, ಕಾಂಗೊ ಪ್ರಧಾನಿ ಜುಡಿತ್ ಸುಮಿನ್ವಾ, ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕಿ ಡಾ. ಒಕೊಂಜೊ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿದ್ದು, ಇದನ್ನು ಸರಿದೂಗಿಸಲು ಎರಡೂ ಕಡೆಯಿಂದ ಪ್ರಯತ್ನಗಳು ನಡೆಯಬೇಕಿವೆ. ಬಡವರು ‘ನಾವು ಸಂತ್ರಸ್ತರು’ ಎಂಬ ಮಾನಸಿಕತೆಯಿಂದ ಹೊರಬಂದು ತಮ್ಮ ಪ್ರಗತಿಗೆ ತಾವೇ ಮುಂಚೂಣಿಯಲ್ಲಿ ನಿಲ್ಲಬೇಕು. ಅದೇ ರೀತಿ ಕಾರ್ಯಾಚರಿಸಲು ಸಂಪನ್ಮೂಲ ಇರುವವರು ಸಹಾನುಭೂತಿ ಮತ್ತು ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.