
ಪ್ರಪಂಚಕ್ಕೆ ಮಧ್ವರ ಮಹೋನ್ನತ ಕೊಡುಗೆ: ವಿದ್ಯೇಶತೀರ್ಥ ಸ್ವಾಮೀಜಿ
ಬ್ರಹ್ಮಾವರ: ತತ್ವಜ್ಞಾನದ ಲೋಕದಲ್ಲಿ ಮಾತ್ರವಲ್ಲದೆ, ಬದುಕಿನ ಪ್ರತಿಯೊಂದು ಹಂತದಲ್ಲೂ ಎದುರಾಗುವ ಜಿಜ್ಞಾಸೆ, ಸಂಶಯ ಹಾಗೂ ಸವಾಲುಗಳಿಗೆ ಆಚಾರ್ಯ ಮಧ್ವರು ರಚಿಸಿದ ‘ಮಹಾಭಾರತ ತಾತ್ಪರ್ಯ ನಿರ್ಣಯ’ ಗ್ರಂಥ ಪರಿಹಾರ ನೀಡುತ್ತದೆ ಎಂದು ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ವಿದ್ಯಾಮಾನ್ಯತೀರ್ಥರ ಪೀಠಾ ರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಮಠದಲ್ಲಿ ಆಯೋಜಿಸಿದ್ದ ವಿದ್ವಾಂಸರ ಐದನೇ ಹಂತದ ಸನ್ಮಾನ ಹಾಗೂ ಬಿರುದು ಪ್ರದಾನ ಸಮಾರಂಭದಲ್ಲಿ ಸಂದೇಶ ನೀಡಿದ ಶ್ರೀಗಳು, 18 ವಿದ್ವಾಂಸರನ್ನು ಗೌರವಿಸಿದರು.
ಮೈಸೂರಿನ ವಿದ್ವಾಂಸ ಬಾದರಾಯಣಾಚಾರ್ಯರಿಗೆ ‘ಜಯಶ್ರೀ ಕಂಬುಕಂಠ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ‘ಭಂಡಾರಕೇರಿ ಶ್ರೀಗಳ 47ನೇ ಚಾತುರ್ಮಾಸ್ಯವು ಅಸಾಧಾರಣವಾದುದು. ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವವನ್ನು ವೈಭವದಿಂದ ಆಚರಿಸುವ ಮೂಲಕ ವಿದ್ಯೇಶತೀರ್ಥರು ಸಮಾಜಕ್ಕೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ಮುಖ್ಯ ಅತಿಥಿಯಾಗಿದ್ದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಹರಿನಾರಾಯಣ ಅಸ್ರಣ್ಣ ಮಾತನಾಡಿ, ‘ಭಂಡಾರಕೇರಿ ಮಠವು ಅಂದಿನ ಕಾಲದಲ್ಲೇ ನನ್ನ ತಾಯಿಗೆ ಶಿಕ್ಷಣ ನೀಡಿದ ತಾಣ. ಕಟೀಲು ದೇವಸ್ಥಾನದ ಧಾರ್ಮಿಕ ಆರಾಧನೆಯ ಸಂಶಯಗಳಿಗೆ ವಿದ್ಯಾಮಾನ್ಯತೀರ್ಥರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ವಹಿಸಿದ್ದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ 18 ವಿದ್ವಾಂಸರು 8 ದಿನಗಳ ಕಾಲ 3 ಬಾರಿ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಸಂಪೂರ್ಣ ಪಾರಾಯಣ ನಡೆಸಿದರು.
ವಿದ್ವಾಂಸರಾದ ಪುರಂದ ರಾಚಾರ್ಯ ಹಯಗ್ರೀವ, ಶ್ರೀಕಾಂತಾಚಾರ್ಯ ಪುರೋಹಿತ, ಗುರುಪ್ರಸಾದಾಚಾರ್ಯ ಹನಸೋಗೆ, ರಘುತ್ತಮಾಚಾರ್ಯ ನಾಗಸಂಪಿಗೆ, ವಾಗೀಶಾಚಾರ್ಯ ಮಂತ್ರಾಲಯ, ಪವನಾಚಾರ್ಯ ಕುರುಡಿ, ವೇಣುಗೋಪಾಲಾಚಾರ್ಯ ಪುರೋಹಿತ, ಹೃಷಿಕೇಶಾಚಾರ್ಯ ಮಠದ, ಸಿ. ಜೆ. ವಿಕ್ರಮಸಿಂಹಾಚಾರ್ಯ, ಶ್ರೀಹರಿ ಆಚಾರ್ಯ ಪೂಜಾರ, ನರಸಿಂಹಾಚಾರ್ಯ ಕೊರ್ಲಹಳ್ಳಿ, ಪ್ರತೋಷಾಚಾರ್ಯ, ಆದಿಶೇ ಷಾಚಾರ್ಯ, ಉಡುಪಿ ಕೃಷ್ಣಾಚಾರ್ಯ, ಅಜಯಾಚಾರ್ಯ ಜೋಷಿ, ವೇದೇಶಾಚಾರ್ಯ ನಾಗಸಂಪಿಗೆ ಹಾಗೂ ಐತರೇಯಾಚಾರ್ಯ ಭಾರದ್ವಾಜ ಅವರನ್ನು ಸನ್ಮಾನಿಸಲಾಯಿತು.