
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ರಕ್ಷಣಾ ಕಾರ್ಯಾಚರಣೆ ವೇಳೆ ಘಟನೆ
ದಾವಣಗೆರೆ: ಇಲ್ಲಿನ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆಯೊಂದು, ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ.
ಸೋಮವಾರ ರಾತ್ರಿ 11 ಗಂಟೆ ವೇಳೆಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಚಿರತೆಯು ಹೆದ್ದಾರಿ ಬದಿಯ ಚರಂಡಿಯಲ್ಲಿ ನರಳಾಡುತ್ತಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಿದ್ದರು.
ಈ ವೇಳೆ ಏಕಾಏಕಿ ದಾಳಿ ನಡೆಸಿದ ಚಿರತೆಯು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಚಿರತೆ ದಾಳಿಯಿಂದ ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಪೇಟೆಯಿಂದ ಬಂದ ವನ್ಯಜೀವಿ ಪಶುವೈದ್ಯರು ಚಿರತೆಗೆ ಅರವಳಿಕೆ ನೀಡಿದರು. ಪ್ರಜ್ಞೆ ತಪ್ಪಿದ ನಂತರ ಬಲೆ ಹಾಕಿ ಚಿರತೆಯನ್ನು ಸೆರೆಹಿಡಿಯಲಾಗಿದೆ.