
ನಾನು ಆಸೆಪಟ್ಟು ಪರಭಾಷೆಗೆ ಹೋಗುತ್ತಿಲ್ಲ: ನಟ ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಸಿನಿಮಾ ಅ.2ರಂದು ತೆರೆಕಾಣಲಿದೆ. ಪವನ್ ಒಡೆಯರ್ ನಿರ್ದೇಶಿಸಿರುವ ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಚಿತ್ರಲ್ಲಿನ ಪಾತ್ರ, ಸಿನಿಮಾ ಆಯ್ಕೆ ಹಾಗೂ ಹೊಸ ಸಿನಿಮಾಗಳ ಕುರಿತು ಶಿವರಾಜ್‌ಕುಮಾರ್ ಇಲ್ಲಿ ಮಾತನಾಡಿದ್ದಾರೆ.
1. ನಾನು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಮೊದಲೇ ಪವನ್ ಒಡೆಯರ್ ‘ಬೇಲ್’ ಕಥೆಯನ್ನು ಹೇಳಿದ್ದರು. ಸಿನಿಮಾ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಸಣ್ಣ ಅಳುಕು ಒಳಗೊಳಗೆ ಸಂದೇಹ ಮೂಡಿಸಿತ್ತು. ಆಗ ಪವನ್, ‘ನೀವು ಗುಣಮುಖರಾಗಿ ಬರುತ್ತೀರಿ, ನಾವು ಕಾಯುತ್ತೇವೆ’ ಎಂದಿದ್ದರು. ಆ ಮಾತುಗಳು ಖುಷಿ, ನಿರಾಳತೆ ನೀಡಿದ್ದವು. ಅಮೆರಿಕಕ್ಕೆ ಹೊರಡುವ ಎರಡು ದಿನಗಳ ಮುನ್ನ ಅವರು ಒತ್ತಾಯ ಮಾಡಿ ಮುಂಗಡ ಹಣ ನೀಡಿದರು. ಶಸ್ತ್ರಚಿಕಿತ್ಸೆ ಮುಗಿದ ಮೂರು ಗಂಟೆಗಳಲ್ಲಿ ಕುಟುಂಬದವರಿಗೆ ವಿಷಯ ತಿಳಿಸಿ, ಮೊದಲು ಫೋನ್ ಮಾಡಿದ್ದು ಪವನ್ ಅವರಿಗೇ.
2.‘ಬೇಲ್’ ಹಿಂದೆಂದೂ ಬಂದಿರದ ಸಿನಿಮಾ ಎಂದು ಉತ್ಪ್ರೇಕ್ಷಿಸುವುದಿಲ್ಲ. ಹಾಸ್ಯ, ಭಾವನೆ ಮತ್ತು ತನಿಖೆಯ ಮಿಶ್ರಣದ ಪಕ್ಕಾ ಕನ್ನಡ ಸಿನಿಮಾ ಇದು. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆತನ ನೋಟವೇ ಒಂದು ಭಾವನೆ. ಜಯರಾಮ್ ಮತ್ತು ಸಾಯಿಕುಮಾರ್ ಅವರ ಕಾಂಬಿನೇಷನ್‌ನಲ್ಲಿ ನಟಿಸಿದ್ದೇನೆ. ಸಿನಿಮಾದುದ್ದಕ್ಕೂ ಡಾರ್ಕ್ ಕಾಮಿಡಿ ಚೆನ್ನಾಗಿ ಮೂಡಿಬಂದಿದೆ. ಬೆಂಗಳೂರಿನ ಸುತ್ತ ನಡೆಯುವ ಕಥೆ ಇದಾದರೂ, ಭಾರತದಾದ್ಯಂತ ಸಾಗುವ ಸುಂದರ ಪಯಣವೂ ಇದರಲ್ಲಿದೆ. ಪ್ರೇಕ್ಷಕರು ಖಂಡಿತವಾಗಿಯೂ ಸಿನಿಮಾವನ್ನು ಇಷ್ಟಪಡಲಿದ್ದಾರೆ. ಪವನ್ ಜೊತೆ ಕೆಲಸ ಮಾಡುವುದು ಬಹಳ ಸುಲಭ.
3.ಖುಷಿಯಲ್ಲೇ ಈ ಸಿನಿಮಾವನ್ನು ಪೂರ್ಣಗೊಳಿಸಿದ್ದೇನೆ. ನನ್ನ ಪಾತ್ರದ ಗೆಟ್‌ಅಪ್ ನನಗೇ ಇಷ್ಟವಾಯಿತು. ರಾಮ್‌ಚರಣ್ ಕೂಡ ಇದನ್ನು ಮೆಚ್ಚಿಕೊಂಡರು. ಕಥೆಗೆ ಬೇಕಾದಷ್ಟು ಸಾಹಸ ದೃಶ್ಯಗಳೂ ಇಲ್ಲಿವೆ. ಮೊದಲ ಬಾರಿಗೆ ನನ್ನ ವಯಸ್ಸಿಗಿಂತ ಹಿರಿಯನ ಪಾತ್ರವನ್ನು ‘ಬೇಲ್’ನಲ್ಲಿ ಮಾಡಿದ್ದೇನೆ. ಪಾತ್ರಕ್ಕೆ ದೊಡ್ಡ ಮಗಳೊಬ್ಬಳೂ ಇದ್ದಾಳೆ. ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ನಿರ್ದೇಶಕರು ಬಯಸುತ್ತಿದ್ದಾರೆ. ಇತ್ತೀಚೆಗೆ ಮಲಯಾಳದ ಒಂದು ಸ್ಕ್ರಿಪ್ಟ್ ಕಳುಹಿಸಿದ್ದಾರೆ. ಅದೂ ಚೆನ್ನಾಗಿದೆ. ಯಾರಿಗೆ ಡೇಟ್ಸ್ ಕೊಡಬೇಕು ಎಂಬ ಗೊಂದಲದಲ್ಲಿದ್ದೇನೆ.
4.ಇತ್ತೀಚೆಗೆ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಸಿನಿಮಾ ನೋಡಿದೆ. ಕಣ್ಣೀರು ಬಂತು. ಅಪ್ಪ–ಅಮ್ಮ ನೆನಪಾದರು. ಸಿನಿಮಾ ನೋಡಿದ ಬಳಿಕ ಒಂದು ಗಂಟೆ ನಿದ್ದೆ ಬರಲಿಲ್ಲ. ನಾನು ಸಿನಿಮಾ ಕ್ಷೇತ್ರದಲ್ಲೇ ಇದ್ದರೂ, ಸಿನಿಮಾ ನನ್ನನ್ನು ಅಳಿಸಿತು. ಅದರಲ್ಲಿ ‘ರಿಷಿ’ ಶೇಡ್ ಇದೆ. ಇಂಥದ್ದೇ ಕಥೆ ಬಂದಿದ್ದರೂ, ‘ವಿಶ್ವನಾಥ್ ಆ್ಯಂಡ್ ಸನ್ಸ್’ನಲ್ಲಿ ಒಂದು ವಿಶೇಷ ಶಕ್ತಿ ಇತ್ತು.
5.ಈಗ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಬಹುತೇಕ ಎಲ್ಲದರಲ್ಲೂ ಸಾಹಸ ದೃಶ್ಯಗಳಿವೆ. ಹೇಮಂತ್ ಎಂ. ರಾವ್ ಅವರ ‘ಭೈರವನ ಕೊನೆ ಪಾಠ’ ಸಿನಿಮಾದಲ್ಲಿ ಸಾಹಸವೇ ಪ್ರಮುಖ ಅಂಶ. ಆ ಕಥೆಯ ನಾಯಕ ಯೋಧ. ಹೀಗಾಗಿ ಆ ಸಿನಿಮಾವನ್ನು ಮುಂದೂಡಿದೆವು. ‘ಪಿಕಾಸೊ’ ಕಥೆ ಬಹಳ ಆಕರ್ಷಿಸಿತು. ಅವರೂ ನನಗಾಗಿ ಕಾದರು. ನಾನು ಆಸೆಪಟ್ಟು ಪರಭಾಷೆಯ ಸಿನಿಮಾಗಳಿಗೆ ಹೋಗುತ್ತಿಲ್ಲ; ಅವರು ಆಸೆಪಟ್ಟು ನನ್ನ ಬಳಿ ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 60 ದಿನವಷ್ಟೇ ವಿಶ್ರಾಂತಿ ಪಡೆಯುತ್ತಿದ್ದೇನೆ ಎನ್ನಬಹುದು. ‘ಜೈಲರ್–2’ನಲ್ಲಿ ಕಥೆಗೆ ಎಷ್ಟು ಬೇಕೋ ಅಷ್ಟು ತೆರೆ ಅವಧಿ ನನ್ನ ಪಾತ್ರಕ್ಕಿದೆ. ‘ಡ್ಯಾಡ್’ ಸಿನಿಮಾದ ಡಬ್ಬಿಂಗ್ ನಡೆಯುತ್ತಿದೆ.
6.‘ಗುಮ್ಮಡಿ ನರಸಯ್ಯ’ ಸಿನಿಮಾದ ನಿರ್ಮಾಪಕರು ಅಮೆರಿಕದವರು. ಮೂರ್ನಾಲ್ಕು ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಕೆಲವೊಮ್ಮೆ ಸಿನಿಮಾ ಮಾಡಲು ಬಹಳ ಉತ್ಸುಕತೆಯಿಂದ ಬರುತ್ತಾರೆ. ಆದರೆ ಸಮಯ ಉರುಳಿದಂತೆ ಆ ಉತ್ಸಾಹವೂ ಕಳೆದುಹೋಗುತ್ತದೆ. ಇದು ಸಿನಿಮಾ ಕ್ಷೇತ್ರದೊಳಗಿನ ಒಂದು ಕೊಳಕು ಆಟ. ಅದರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಆ ಆಟ ನನಗೂ ಅರ್ಥವಾಯಿತು. ಹೀಗಾಗಿ ಅದರಿಂದ ಹೊರಬಂದೆ. ಈಗ ನೇರ ಮಾತುಕತೆ ಮೂಲಕವೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ನಿಂತಿದ್ದ ಕಾರ್ತಿಕ್ ನಿರ್ದೇಶನದ ‘#131’ ಸಿನಿಮಾ ಮತ್ತೆ ಆರಂಭವಾಗಲಿದೆ.
7.ನಮ್ಮ ನಿರ್ಮಾಣದ ‘ಎ ಫಾರ್ ಆನಂದ್’ ಸಿನಿಮಾದ ಶೂಟಿಂಗ್ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ. ನಾನೇ ಈ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ. ಇದರಲ್ಲಿ ಪಾತ್ರಕ್ಕಾಗಿ ಮಾಧುರಿ ದೀಕ್ಷಿತ್ ಅವರನ್ನೂ ಸಂಪರ್ಕಿಸಿದ್ದೆವು. ಆದರೆ, ತಮ್ಮ ಸಿನಿಮಾಗಳಿಗೆ ತಾವೇ ಡಬ್ಬಿಂಗ್ ಮಾಡುವ ಕಾರಣ ಅವರು ನಟಿಸಲು ಸಾಧ್ಯವಾಗುವುದಿಲ್ಲ ಎಂದರು. ‘ಪಬ್ಬಾರ್’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ.
ಪರಭಾಷೆಯ ಸಿನಿಮಾ ನಿರ್ಮಾಣದ ಅವಕಾಶಗಳು ಬಂದರೂ, ಕನ್ನಡದವರಿಗೇ ಅವಕಾಶ ನೀಡುತ್ತಿದ್ದೇವೆ. ‘ಫೈರ್‌ಫ್ಲೈ’ ಬಳಿಕ ನಿವೇದಿತಾ ಕೊಂಚ ನಿರಾಶೆಯಲ್ಲಿದ್ದಳು. ಆಕೆಗೆ ಧೈರ್ಯ ತುಂಬಿದ್ದೇನೆ. ಆಕೆ ಒಂದೊಳ್ಳೆಯ ಸಿನಿಮಾ ಮಾಡಿದ್ದಳು. ಆ ಜಾನರ್ ಬಹಳ ಭಿನ್ನವಾಗಿತ್ತು. ತನ್ನ ಪ್ರೊಡಕ್ಷನ್ಸ್ ಮೂಲಕ ಯುವ ಪೀಳಿಗೆಯ ದನಿಯೊಂದಿಗೆ ಕೆಲಸ ಮಾಡಲು ಆಕೆ ಉತ್ಸುಕಳಾಗಿದ್ದಾಳೆ.