
ಕೆಜಿಎಫ್| ನಿವೇಶನ ರಹಿತರಿಗೆ ನಿವೇಶನ ನೀಡಲು ಜಮೀನು ಗುರುತಿಸಿ: ಶಾಸಕಿ ರೂಪಕಲಾ
ಕೆಜಿಎಫ್: ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗುವ ಸರ್ಕಾರಿ ಜಾಗವನ್ನು ಗುರುತಿಸಿ ಮೀಸಲು ಇಡಬೇಕೆಂದು ಶಾಸಕಿ ಎಂ.ರೂಪಕಲಾ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಆಡಳಿತದಲ್ಲಿ ಶುಕ್ರವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕಣ್ಣೂರು, ರಾಜೇಶ್ ಕ್ಯಾಂಪ್, ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಮೀನು ಮೀಸಲು ಮಾಡಲಾಗಿದೆ. ಅದೇ ರೀತಿ ಕಮ್ಮಸಂದ್ರ, ಕ್ಯಾಸಂಬಳ್ಳಿ, ಟಿ.ಗೊಲ್ಲಹಳ್ಳಿ ಮುಂತಾದ ಪಂಚಾಯಿತಿ ವ್ಯಾಪ್ತಿಯಲ್ಲಿ ಐದಾರು ಎಕರೆ ಜಮೀನನ್ನು ಗುರುತಿಸಬೇಕು. ನಂತರ ಅದನ್ನು ನಿವೇಶನಗಳಿಗಾಗಿ ಮೀಸಲು ಇಡಬೇಕು’ ಎಂದರು.
ಕಂದಾಯ ಅಧಿಕಾರಿಗಳು ಮನಸ್ಸಿಗೆ ತೃಪಿ ನೀಡುವಂತೆ ಕೆಲಸ ಮಾಡಬೇಕು. ಯಾರನ್ನೋ ಖುಷಿ ಪಡಿಸಲು, ಇಲ್ಲವೇ ಇತರ ಅಧಿಕಾರಿಗಳನ್ನು ಹೆದರಿಸಲು ಕೆಲಸ ಮಾಡಬಾರದು. ದರಖಾಸ್ತು ಜಮೀನು ವಿತರಣೆಗೆ ಸಂಬಂಧಿಸಿದಂತೆ ಕೆಲವರು ದೊಡ್ಡ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇಂತಹ ವಿವಾದ ಸೃಷ್ಟಿಯಾಗಲು ಏಕೆ ಅವಕಾಶ ನೀಡಬೇಕು. ಈ ಹಿಂದೆ ದರಖಾಸ್ತು ಸಮಿತಿಯಲ್ಲಿ ನಡೆದಿದ್ದ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ವಿಚಾರ ಇಟ್ಟುಕೊಂಡು ಇತ್ತೀಚೆಗೆ ದರಖಾಸ್ತು ಜಮೀನು ಹಂಚಿಕೆ ತಡೆಹಿಡಿಯುವುದು ಬೇಡ. ಫಲಾನುಭವಿಗಳನ್ನು ಸುಮ್ಮನೆ ಕಚೇರಿಗೆ ಅಲೆಸದೆ ನ್ಯಾಯ ಒದಗಿಸಿ ಎಂದು ಹೇಳಿದರು.
‘ಕೆಲ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಿಕೊಂಡು ಕಂದಾಯ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಮಾಡುವ ಎಲ್ಲಾ ಬ್ಲಾಕ್ ಮೇಲ್ ಕೆಲಸಗಳ ಬಗ್ಗೆ ಮಾಹಿತಿ ಬರುತ್ತಿದೆ’ ಎಂದರು.
₹10 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಿಸಲಾಗಿದೆ. ಆದರೆ, ಸದುಪಯೋಗ ಆಗುತ್ತಿಲ್ಲ. ಇಲ್ಲಿರುವ ಇಲಾಖೆಯ ಅಧಿಕಾರಿಗಳು ಒಗ್ಗೂಡಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಾರ್ಮಿಕ ಇಲಾಖೆ ಈ ಸಂಕೀರ್ಣಕ್ಕೆ ಬರುವುದಕ್ಕೆ ಸಿದ್ಧವಿರಲಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿ ಬಂಗಾರಪೇಟೆ ಬಿಟ್ಟು ಕೆಜಿಎಫ್‌ಗೆ ಬರಲು ಒಪ್ಪಲಿಲ್ಲ. ಕಚೇರಿಯನ್ನು ಇಲ್ಲಿಗೆ ತರಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಕೆಲವರಿಗೆ ಬರೀ ದೂರು ಕೊಡುವುದೇ ಕೆಲಸವಾಗಿದೆ. ಅಧಿಕಾರಿಗಳು ಗಟ್ಟಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಗಾಯತ್ರಿ ಹಾಜರಿದ್ದರು.