
ಕಲಬುರಗಿ | ಹಿಂದುತ್ವದೊಂದಿಗೆ ಬಸವಾದಿ ಶರಣರ ಹೆಸರು ಸೇರ್ಪಡೆಗೆ ತೀವ್ರ ವಿರೋಧ
ಕಲಬುರಗಿ: ಹಿಂದುತ್ವದೊಂದಿಗೆ ಬಸವಾದಿ ಶರಣರ ಹೆಸರು ಸೇರಿಸಿರುವುದನ್ನು ಖಂಡಿಸಿ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಭವನದ ಆವರಣದಲ್ಲಿ ಜಮಾಯಿಸಿದ ನೂರಾರು ಬಸವ ಅಭಿಮಾನಿಗಳು ಬಸವಾದಿ ಶರಣರ ಪರ ಜೈಕಾರ ಮೊಳಗಿಸಿದರು.
'ಸೆಪ್ಟೆಂಬರ್ 27ರಂದು ನಗರದ ಎನ್.ವಿ. ಮೈದಾನದಲ್ಲಿ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಹಿಂದೆ ಹುನ್ನಾರವಿದೆ. ಅಂದು ಶರಣರ ಮಾರಣ ಹೋಮ ನಡೆಸಿದವರೇ ಇದೀಗ ಈ ಸಮಾವೇಶದ ಸೋಗಿನಲ್ಲಿ ಮತ್ತೆ ಬರುತ್ತಿದ್ದಾರೆ. ಲಿಂಗಾಯತ ಮಠಾಧೀಶರಾದ ಕನ್ಹೇರಿ ಸ್ವಾಮೀಜಿಯನ್ನು ಮುಂದೆ ಮಾಡಿಕೊಂಡು ಆಟ ನಡೆಸುತ್ತಿದ್ದಾರೆ. ಕನ್ಹೇರಿ ಸ್ವಾಮೀಜಿ ಲಿಂಗಾಯತ ವಟುಗಳಿಗೆ ಯಜ್ಞೋಪವಿತ್ತ ಸಂಸ್ಕಾರ ನೀಡಿ ಹೋಮ ಹವನ ನಡೆಸಿದ್ದ ವಿಡಿಯೊಗಳು ಹರಿದಾಡಿದ್ದವು. ಹೀಗೆಯೇ ಬಿಟ್ಟರೆ ಇಷ್ಟಲಿಂಗ ತೆಗೆಸಿ ಜನಿವಾರ ಹಾಕುತ್ತಾರೆ' ಎಂದು ಪ್ರತಿಭಟನಕಾರರು ವಾಗ್ದಾಳಿ ನಡೆಸಿದರು.
ಬಸವಾದಿ ಶರಣರನ್ನು ಕೇಂದ್ರವಾಗಿಟ್ಟುಕೊಂಡು ಚಿಂತನ ಮಂಥನ ನಡೆಸುವ ಹಕ್ಕು ಎಲ್ಲರಿಗೂ ಇದೆ. ಅದರಂತೆ ವೈದಿಕರು ತಮ್ಮ ಹಿಂದೂ ಸಮಾವೇಶಗಳನ್ನು ಮಾಡಿಕೊಳ್ಳಬಹುದು. ಆದರೆ, ಬಸವಾದಿ ಶರಣರನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವುದು ಪರಮ ನೀಚತನ. ಆರ್‌ಎಸ್ಎಸ್ ತನ್ನ 100 ವರ್ಷದ ನಡೆಯಲ್ಲಿ ಎಂದಿಗೂ ಬಸವಾದಿ ಶರಣನ್ನು ಸ್ಮರಿಸಿದ್ದಿಲ್ಲ. ಇದೀಗ ಬಸವ ಅನುಯಾಯಿಗಳನ್ನು ಮರಳು ಮಾಡಲು ಬಸವಾದಿ ಶರಣರ ಹೆಸರನ್ನು ಅವರು ಬಳಸಿಕೊಳ್ಳುತ್ತಿದ್ದಾರೆ' ಎಂದು ಪ್ರತಿಭಟನಕಾರರು ಟೀಕಾ ಪ್ರಹಾರ ನಡೆಸಿದರು.
ನಗರದ ಕನ್ನಡ ಭವನದಿಂದ ಶುರುವಾದ ಪ್ರತಿಭಟನಾ ಜಾಥಾ ವು ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಸಾಗಿ ಲಾಹೋಟಿ ಪೆಟ್ರೋಲ್ ಬಂಕ್, ಅನ್ನಪೂರ್ಣ ಕ್ರಾಸ್ ಮೂಲಕ ಜಗತ್ ವೃತ್ತ ತಲುಪಿತು.
ಬಸವ ಅಭಿಮಾನಿಗಳು, ವಿವಿಧ ಸ್ವಾಮೀಜಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.