
ಉತ್ತರ ಕನ್ನಡ | ಜಿಲ್ಲಾ ರಂಗಮಂದಿರ ಸ್ಥಳಾಂತರಕ್ಕೆ ಪರ ವಿರೋಧ
ಕಾರವಾರ: ನಿರ್ಮಾಣಗೊಂಡ ನಾಲ್ಕು ದಶಕ ಪೂರೈಸುವುದರೊಳಗೆ ಆಯಸ್ಸು ಕಳೆದುಕೊಂಡ ಜಿಲ್ಲಾ ರಂಗಮಂದಿರ ಈಗ ಇದ್ದ ಸ್ಥಳದಿಂದ ಸ್ಥಳಾಂತರಗೊಳ್ಳುವುದು ನಿಚ್ಚಳವಾಗಿದೆ.
ಇಲ್ಲಿನ ಮಾಲಾದೇವಿ ಮೈದಾನದ ಒಂದು ಬದಿಯಲ್ಲಿ 1986ರಲ್ಲಿ ನಿರ್ಮಾಣಗೊಂಡಿದ್ದ ವಿಶಾಲ ಕಟ್ಟಡ ಸಾರ್ವಜನಿಕರ ಬಳಕೆಗೆ ಸಿಗದೆ ಎರಡು ವರ್ಷ ಕಳೆದಿದೆ. ಶಿಥಿಲಗೊಂಡಿರುವ ಕಂಬಗಳು, ಮುರಿದು ಬೀಳುವ ಚಾವಣಿಯ ಕಟ್ಟಡದಲ್ಲಿ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ನಡೆಯುತ್ತಿದೆ.
ನಾಲ್ಕು ದಶಕದಿಂದ ಸಾಂಸ್ಕೃತಿಕ ಚಟುವಟಿಕೆ, ಸರ್ಕಾರಿ ಕಾರ್ಯಕ್ರಮ, ವಸ್ತು ಪ್ರದರ್ಶನ, ಚಿತ್ರಕಲೆ ಪ್ರದರ್ಶನ ಸೇರಿದಂತೆ ವಿವಿಧ ಚಟುವಟಿಕೆಗೆ ಬಳಕೆ ಆಗುತ್ತಿದ್ದ ಕಟ್ಟಡವನ್ನು ಹೊಸದಾಗಿ ಇದ್ದ ಸ್ಥಳದಲ್ಲೇ ಮರುನಿರ್ಮಿಸಬೇಕು ಎಂಬ ಅಭಿಪ್ರಾಯ ಹಲವರಲ್ಲಿದೆ.
ಶಿಥಿಲಗೊಂಡಿರುವ ಕಟ್ಟಡ ಬಳಕೆಗೆ ಸಿಗದೆ ಎರಡು ವರ್ಷ ಮುಗಿದಿದೆ. ಇದ್ದ ಜಾಗದಲ್ಲೇ ನಿರ್ಮಿಸುವ ಬದಲು ಸೂಕ್ತವಾದ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೆಲವರದ್ದು.
2011ರಲ್ಲಿ ನವೀಕರಣ ಗೊಂಡಿದ್ದರೂ ಕೇವಲ ದಶಕದಲ್ಲೇ ಕಟ್ಟಡ ಸಂಪೂರ್ಣ ಹಾಳಾಗಿದೆ. 2023ರಲ್ಲಿ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ತಂಡವು ಕಟ್ಟಡ ತೆರವಿಗೆ ವರದಿ ನೀಡಿತ್ತು. ಆದಾಗ್ಯೂ ಒಂದು ವರ್ಷ ಇದೇ ಕಟ್ಟಡದಲ್ಲಿ ಹಲವು ಕಾರ್ಯಕ್ರಮ ನಡೆದಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲೇ ಸರ್ಕಾರಿ ಕಾರ್ಯಕ್ರಮಗಳು ಇಲ್ಲಿ ಆಯೋಜನೆಗೊಂಡಿದ್ದವು. 2024ರ ಬಳಿಕ ರಂಗಮಂದಿರ ಬಳಕೆ ಸ್ಥಗಿತಗೊಳಿಸಲಾಯಿತು.
ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಎಂ.ಜಿ.ರಸ್ತೆಯಲ್ಲಿನ ಪ್ರಜಾಸೌಧ ಕಟ್ಟಡದ ಎದುರಿನ ಜಾಗ ಸೂಕ್ತವಿದೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ಯೋಜನೆ ರೂಪಿಸಿ, ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಈಚೆಗೆ ನಡೆದ ಜಿಲ್ಲಾ ರಂಗಮಂದಿರ ನಿರ್ವಹಣೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
‘ಈಗಿರುವ ಕಟ್ಟಡ ಶಿಥಿಲಗೊಂಡಿರುವುದಾಗಿ ವರದಿ ಸಲ್ಲಿಕೆಯಾಗಿದ್ದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ₹8.5 ಕೋಟಿ ಮೊತ್ತದ ಅನುದಾನ ಕೋರಿ ಎರಡು ವರ್ಷದ ಹಿಂದೆಯೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಪ್ರಸ್ತಾವಕ್ಕೆ ಒಪ್ಪಿಗೆ ಸಿಗದ ಕಾರಣ ನನೆಗುದಿಗೆ ಬಿದ್ದಿದೆ. ಜಿಲ್ಲಾಧಿಕಾರಿ ಸೂಚನೆ ಆಧರಿಸಿ ಮರುಪ್ರಸ್ತಾವ ಸಿದ್ಧಪಡಿಸಿ, ಶೀಘ್ರದಲ್ಲಿ ಸಲ್ಲಿಸಲಾಗುವುದು’ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಹೇಳುತ್ತಾರೆ.
‘ಜಿಲ್ಲಾ ರಂಗಮಂದಿರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ನಿರ್ದೇಶನದಂತೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಪ್ರಜಾಸೌಧದ ಎದುರಿನಲ್ಲಿರುವ, ಈಗ ಸಬ್ ರಿಜಿಸ್ಟ್ರಾರ್ ಕಚೇರಿ ಇರುವ ಜಾಗದಲ್ಲಿ 24 ಗುಂಟೆ ನಿವೇಶನವನ್ನು ಗುರುತಿಸಿ ವರದಿ ನೀಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯು ಆಡಳಿತ ಸೌಧ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ಕಾರಣಕ್ಕೆ ಆ ಜಾಗ ಸೂಕ್ತವಿದೆ. ಇದಲ್ಲದೆ ಇನ್ನೂ ಮೂರು ಕಡೆಗಳಲ್ಲಿ ಜಾಗ ಗುರುತಿಸುವ ಕೆಲಸ ನಡೆದಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನಿರ್‍ಹೋನಾ ಮಾಹಿತಿ ನೀಡಿದರು.
‘ರಂಗಮಂದಿರ ಈಗಿರುವ ಜಾಗದಲ್ಲಿ ವಾಹನ ನಿಲುಗಡೆಗೆ ವಿಶಾಲ ಸ್ಥಳಾವಕಾಶ ಇದೆ. ಮೈದಾನವೂ ಪಕ್ಕದಲ್ಲಿರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸಲು ಇದೇ ಸೂಕ್ತ ಸ್ಥಳ. ಶಿರವಾಡದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಜಾಗ ಗುರುತಿಸಿದ್ದರಿಂದ ಅಲ್ಲಿ ದೊಡ್ಡ ಮೈದಾನ ಸಿಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಅನುಕೂಲವಾಗಲು ಇದ್ದ ಜಾಗದಲ್ಲೇ ಹೊಸದಾಗಿ ಕಟ್ಟಡ ನಿರ್ಮಿಸುವುದು ಸೂಕ್ತ’ ಎನ್ನುತ್ತಾರೆ ರಂಗಭೂಮಿ ಕಲಾವಿದ ಗಜಾನನ ನಾಯ್ಕ.
‘ರಂಗಮಂದಿರ ಇರುವ ಕಾರಣದಿಂದ ಮೈದಾನದ ಅಭಿವೃದ್ಧಿಗೆ ತೊಡಕಾಗಿದೆ. ಎರಡು ವರ್ಷದಿಂದ ಕಟ್ಟಡ ಬಳಕೆಗೂ ಸಿಗುತ್ತಿಲ್ಲ. ನಗರ ವ್ಯಾಪ್ತಿಯಲ್ಲೇ ಬೇರೆ ಕಡೆಗೆ ಸೂಕ್ತವೆನಿಸುವ ಜಾಗದಲ್ಲಿ ರಂಗಮಂದಿರ ನಿರ್ಮಿಸಿದರೆ ಮೈದಾನ ವಿಸ್ತರಿಸಲು ಅವಕಾಶವಾಗುತ್ತದೆ’ ಎಂಬುದು ನಗರಸಭೆ ಮಾಜಿ ಸದಸ್ಯ ರತ್ನಾಕರ ನಾಯ್ಕ ಒತ್ತಾಯ.
ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ
‘ಮಾಲಾದೇವಿ ಮೈದಾನದ ಆವರಣದಲ್ಲೇ ಜಿಲ್ಲಾ ರಂಗಮಂದಿರ ಇದ್ದರೂ ಕಟ್ಟಡವಿರುವ 7 ಗುಂಟೆ ಜಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ್ದು. ಆದರೆ, 1980ರ ದಶಕದಲ್ಲಿ ನಿರ್ಮಿಸುವ ಕಟ್ಟಡ 21 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡಿದೆ. ಈಚೆಗೆ ನಡೆಸಿದ ಪರಿಶೀಲನೆ ವೇಳೆ ಇದು ದೃಢಪಟ್ಟಿದೆ’ ಎಂಬುದಾಗಿ ತಹಶೀಲ್ದಾರ್ ನಿಶ್ಚಲ್ ನೊರ್‍ಹೋನಾ ಹೇಳುತ್ತಾರೆ.
ಆದರೆ, ರಂಗಮಂದಿರದ ಕಟ್ಟಡವಿರುವ ಜಾಗ ತಮ್ಮ ಇಲಾಖೆಗೆ ಸೇರಿದ್ದು ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾದ. ಈ ಹಿಂದೆ ಇದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯನ್ನೂ ಮಾಡಲಾಗಿತ್ತು.
‘ರಂಗಮಂದಿರ ಕಟ್ಟಡದ ಕಾರಣಕ್ಕೆ ಮಾಲಾದೇವಿ ಮೈದಾನದಲ್ಲಿ 400 ಮೀಟರ್ ಉದ್ದದ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಿಸಲು ಈವರೆಗೆ ಸಾಧ್ಯವಾಗಿಲ್ಲ. ಒಂದು ವೇಳೆ ರಂಗಮಂದಿರ ಕಟ್ಟಡವನ್ನು ತೆರವುಗೊಳಿಸಿದರೆ ಮೈದಾನದಲ್ಲಿ ನಿರಾತಂಕವಾಗಿ 400 ಮೀಟರ್ ಉದ್ದದ ಟ್ರ್ಯಾಕ್ ನಿರ್ಮಿಸಬಹುದು. ಅಲ್ಲದೇ ಮೈದಾನದಲ್ಲಿನ ಹಲವು ಕೊರತೆಗಳನ್ನು ನೀಗಿಸಲು ಅನುಕೂಲ ಆಗುತ್ತದೆ. ಈಗ ಮೈದಾನದಲ್ಲಿ ಕೇವಲ 200 ಮೀಟರ್ ಉದ್ದದ ಟ್ರ್ಯಾಕ್ ಮಾತ್ರವೇ ಇದೆ’ ಎಂಬುದಾಗಿ ಕ್ರೀಡಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಪರ್ಯಾಯ ಜಾಗ ಗುರುತಿಸಿದ್ದು, ಅಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಿದ್ಧಪಡಿಸಲು ಸೂಚಿಸಲಾಗಿದೆ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ