ನೀರಾವರಿ, ಶಿಕ್ಷಣ ಚಟುವಟಿಕೆ, ಉದ್ಯಮ ಆರಂಭಕ್ಕೆ ಸಿಗಲಿದೆ ಸೌಲಭ್ಯ; ಏನಿದು ಯೋಜನೆ

ನೀರಾವರಿ, ಶಿಕ್ಷಣ ಚಟುವಟಿಕೆ, ಉದ್ಯಮ ಆರಂಭಕ್ಕೆ ಸಿಗಲಿದೆ  ಸೌಲಭ್ಯ; ಏನಿದು ಯೋಜನೆ

ನೀರಾವರಿ, ಶಿಕ್ಷಣ ಚಟುವಟಿಕೆ, ಉದ್ಯಮ ಆರಂಭಕ್ಕೆ ಸಿಗಲಿದೆ ಸೌಲಭ್ಯ; ಏನಿದು ಯೋಜನೆ

ಬೆಂಗಳೂರು: ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಳ್ಳಲು ಡಿ.ದೇವರಾಜ ಅರಸು ಅಭಿವೃದ್ದಿ ನಿಗಮವು ವೈಯಕ್ತಿಕ ಕೊಳವೆ ಯೋಜನೆಯಡಿ ಆರ್ಥಿಕ ನೆರವನ್ನು ನೀಡಲಿದೆ.

ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿಯಲ್ಲಿ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ₹3.75 ಲಕ್ಷ ಹಾಗೂ ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ₹50 ಸಾವಿರಗಳ ಸಾಲವನ್ನು ಶೇ 4ರ ಬಡ್ಡಿದರದಲ್ಲಿ ಒದಗಿಸಲಾಗುವುದು ಎಂದು ದೇವರಾಜ ಅರಸು ಅಭಿವೃದ್ದಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ₹ 98 ಸಾವಿರ ಮತ್ತು ಪಟ್ಟಣ ಪ್ರದೇಶದವರಿಗೆ ₹ 1.20 ಲಕ್ಷ ಗಳ ಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ಸಿಗಲಿದೆ ಎಂದು ತಿಳಿಸಲಾಗಿದೆ.

2026-27ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಆರಂಭಗೊಂಡಿದೆ. ಸೇವಾ ಸಿಂಧು ತಂತ್ರಾಂಶದ ಮುಖಾಂತರ ಆನ್‍ಲೈನ್ ಅರ್ಜಿ ಸಲ್ಲಿಸಬಹುದು

ಇದಲ್ಲದೇ ಕೃಷಿ, ಗ್ರಾಮೀಣ ಭಾಗ, ನಗರ ಪ್ರದೇಶದ ಯುವಕ ಯುವತಿಯರು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ನೆರವು ಪಡೆದುಕೊಳ್ಳಲು ಅವಕಾಶವಿದೆ.

ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿಗಳು ಕೃಷಿ ಅವಲಂಬಿತ ಚಟುವಟಿಕೆ, ವ್ಯಾಪಾರ, ಕೈಗಾರಿಕೆ, ಸಾರಿಗೆ, ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ ₹2 ಲಕ್ಷಗಳವರೆಗೆ ಆರ್ಥಿಕ ನೆರವು, ₹1 ಲಕ್ಷಗಳವರೆಗಿನ ಸಾಲದಲ್ಲಿ ಶೇ20ರಷ್ಟು ಗರಿಷ್ಠ ₹20 ಸಾವಿರಗಳ ಸಹಾಯಧನ ಸಿಗಲಿದೆ.

₹1.01 ಲಕ್ಷದಿಂದ ₹2 ಲಕ್ಷದವರೆಗೆ ಶೇ 15 ರಷ್ಟು ಕನಿಷ್ಠ ₹20 ಸಾವಿರಗಳಿಂದ ಗರಿಷ್ಠ ₹30 ಸಾವಿರ ಸಹಾಯಧನ ಉಳಿಕೆ ಮೊತ್ತ ಶೇ 4 ರ ಬಡ್ಡಿದರದಲ್ಲಿ ನಿಗಮದಿಂದ ನೇರವಾಗಿ ಸಾಲ ಸೌಲಭ್ಯ ಪಡೆಯಬಹುದು.

ಸೌಲಭ್ಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ₹98 ಸಾವಿರಗಳು, ಪಟ್ಟಣ ಪ್ರದೇಶದವರಿಗೆ ₹1.20 ಲಕ್ಷಗಳ ಒಳಗಿರಬೇಕು, ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು ಎಂದು ತಿಳಿಸಲಾಗಿದೆ.

ಅರಿವು-ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ ಮತ್ತು ನೀಟ್ ಮತ್ತಿತರ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್‌ ವ್ಯಾಸಂಗಕ್ಕೆ ಆರ್ಥಿಕ ನೆರವು ಸಿಗಲಿದೆ.

ವಾರ್ಷಿಕ ₹ 1 ಲಕ್ಷ ಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ₹ 4 ಲಕ್ಷ ಗಳಿಂದ ₹5 ಲಕ್ಷ ರೂ.ಗಳಿಗೆ ವಾರ್ಷಿಕ ಶೇ 2ರ ಬಡ್ಡಿದರಲ್ಲಿ ಸಾಲ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ₹3.50 ಲಕ್ಷಗಳ ಮಿತಿಯಲ್ಲಿರಬೇಕು. ಮತ್ತು ವಯೋಮಿತಿ 30 ವರ್ಷದೊಳಗಿರಬೇಕು.

ಅರಿವು ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಸಾಲ ಮಂಜೂರಾಗಿ ಹಿಂದಿನ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ 2ನೇ ಹಾಗೂ ತದನಂತರದ ಕಂತುಗಳ ಸಾಲ ಪಡೆಯಲು ಹಿಂದಿನ 2 ಸೆಮಿಸ್ಟರ್ ಗಳ ಅಂಕಪಟ್ಟಿ, ಪ್ರಸಕ್ತ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಜಾಮೀನುದಾರರ/ಪೋಷಕರ ಒಪ್ಪಿಗೆ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.

ಸ್ವಾವಲಂಬಿ ಸಾರಥಿ ಯೋಜನೆಯಡಿ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್‍ಗಳು ಮಂಜೂರು ಮಾಡುವ ಘಟಕ ವೆಚ್ಚದ ಶೇ.50 ರಷ್ಟು, ಗರಿಷ್ಟ ₹3 ಲಕ್ಷಗಳ ಸಹಾಯಧನವನ್ನು(ಸಬ್ಸಿಡಿ) ನಿಗಮದಿಂದ ಬಿಡುಗಡೆ ಮಾಡಲಾಗುವುದು.

ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನ ಪರವಾನಗಿಯನ್ನು ಹೊಂದಿರಬೇಕು.

ಈ ಯೋಜನೆಯಡಿ ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಲ್ಲಿ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಈ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. 2024-25 ಮತ್ತು 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ