
ಬಿಜೂರು ರೈಲು ನಿಲ್ದಾಣ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಬೈಂದೂರು: 30 ವರ್ಷಗಳಿಂದ ಬಿಜೂರು ರೈಲು ನಿಲ್ದಾಣವು ಲೂಪ್ಲೈನ್ ಸೇರಿದಂತೆ ಎಲ್ಲ ರೀತಿಯಲ್ಲೂ ಸುಸಜ್ಜಿತವಾಗಿದ್ದರೂ ಕಡೆಗಣಿಸಲಾಗಿದೆ. ಈ ನಿಲ್ದಾಣವು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಬೇಕು. ಮುಂಬೈ ಮತ್ತು ಬೆಂಗಳೂರಿಗೆ ತೆರಳುವ ರೈಲುಗಳಿಗೆ ಇಲ್ಲಿ ನಿಲುಗಡೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ, ಮನವಿ ನೀಡಿದ್ದರೂ ಪ್ರಯೋಜನೆಯಾಗಿಲ್ಲ ಎಂದು ಬಿಜೂರು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸುನಿಲ್ ಪೂಜಾರಿ ಬೇಸರ ವ್ಯಕ್ತಪಡಿಸಿದರು.
ಉಪ್ಪುಂದ, ಕೆರ್ಗಾಲು, ನಂದನ ವನ, ಕಂಚಿಕಾನು, ಕಂಬದಕೋಣೆ, ಹೇರಂಜಾಲು ಹಾಗೂ ಬಿಜೂರು ಗ್ರಾಮಕ್ಕೆ ಹತ್ತಿರವಿರುವ ಗ್ರಾಮಸ್ಥರು ಮತ್ತು ವಿವಿಧ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬಿಜೂರು ರೈಲು ನಿಲ್ದಾಣದಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬಿಜೂರು ಭಾಗದ ರೈತರ ಸುಮಾರು 48 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಕಡಿಮೆ ದರದಲ್ಲಿ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು, ಆದರೆ, ಅದು ಈಗ ನಿಷ್ಪ್ರಯೋಜಕವಾಗಿದೆ. ಈ ನಿಲ್ದಾಣ ಅಭಿವೃದ್ಧಿಪಡಿಸಿ, ಮೇಲ್ದರ್ಜೆಗೇರಿಸಿ. ಇಲ್ಲದಿದ್ದರೆ ಈ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಕೃಷಿಭೂಮಿ ರೈತರಿಗೆ ಹಿಂತಿರುಗಿಸಿ ಎಂದು ಆಕ್ರೋಶ ಹೊರಹಾಕಿದರು.
ಈಗಾಗಲೇ ಪ್ರತಿದಿನ ಹಲವು ಪ್ಯಾಸೆಂಜರ್ ರೈಲುಗಳು ಬಿಜೂರು ನಿಲ್ದಾಣದಲ್ಲಿ ಕ್ರಾಸಿಂಗ್ಗಾಗಿ ನಿಲ್ಲುತ್ತವೆ. ಆ ರೈಲುಗಳನ್ನು ಹತ್ತಲು ಇಳಿಯಲು ಪ್ರಯಾಣಿಕರಿಗೆ ಅವಕಾಶ ನೀಡಿದರೆ ಬಿಜೂರು ನಿಲ್ದಾಣ ಸದುಪಯೋಗವಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಬಿಜೂರು ನಿಲ್ದಾಣ ಸದುಪಯೋಗ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರ ಬೇಡಿಕೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದರು.
ರೈಲ್ವೆ ಹಿರಿಯ ಟ್ರಾಫಿಕ್ ಇನ್ಸ್ಪೆಕ್ಟರ್ ರಾಜೇಶ ಶೆಟ್ಟಿ ಅವರಿಗೆ ಮನವಿ ನೀಡಲಾಯಿತು.
ಸ್ಟೇಷನ್ ಮಾಸ್ಟರ್ ಸಂತೋಷ್, ರೈಲ್ವೆ ಹೋರಾಟ ಸಮಿತಿಯ ಮುಖಂಡರಾದ ಪುಂಡಲೀಕ ಕಿಣಿ ಕಂಚಿಕಾನ್, ಡಾ.ಸುಬ್ರಹ್ಮಣ್ಯ ಭಟ್, ಶ್ರೀಶ ಭಟ್, ಹೊಸ್ಕೋಟೆ ವೆಂಕಟೇಶ ರಾವ್, ಮಂಜುನಾಥ ದೇವಾಡಿಗ ಭಾಗವಹಿಸಿದ್ದರು.