ಕಲ್ಯಾಣ ಕರ್ನಾಟಕ ಉತ್ಸವ: ಕೊಪ್ಪಳದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ತಂಗಡಗಿ
ಕೊಪ್ಪಳ: ಹೈದರಾಬಾದ್ ನವಾಬರ ಕಪಿಮುಷ್ಠಿಯಿಂದ ಮುಕ್ತಿ ಪಡೆದು ಸ್ವಾತಂತ್ರ್ಯ ಗಳಿಸಿದ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 79ನೇ ವರ್ಷದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಜ್ಯ ಸರ್ಕಾರದ 100 ದಿನಗಳ ಸಂಭ್ರಮದ ವಿಷಯವನ್ನು ಪ್ರಸ್ತಾಪಿಸಿದ ಸಚಿವ ತಂಗಡಗಿ ನೂರು ದಿನಗಳ ಅವಧಿಯಲ್ಲಿ ಸರ್ಕಾರ ಜನರಿಗೆ ಪಂಚ ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿ ತಲುಪಿಸುವ ನಿಟ್ಟಿನಲ್ಲಿ ಅನೇಕ ಕೆಲಸಗಳನ್ನು ಮಾಡಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2026-27ರ ಸಾಲಿನಲ್ಲಿ ಜಿಲ್ಲೆಗೆ ಮೈಕ್ರೊ ವಲಯದಲ್ಲಿ ₹231.36 ಕೋಟಿ ಹಾಗೂ ಮ್ಯಾಕ್ರೊ ವಲಯದಲ್ಲಿ ₹99.11 ಕೋಟಿ ಸೇರಿ ಒಟ್ಟು ₹330.37 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜ್ಯಮಟ್ಟದ ತನಕ ಜನರ ಕುಂದುಕೊರತೆ ಆಲಿಸಲು ಪ್ರತ್ಯೇಕ ಪ್ರಜಾ ಸೇವಾ ಇಲಾಖೆ ಆರಂಭಿಸಲಾಗಿದೆ. 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ಮೂರು ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯವ ಮಹತ್ವಾಕಾಂಕ್ಷೆಯ ಗುರಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು 80ನೇ ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿದ್ದಾರೆ. ಯುವ ಸಶಕ್ತೀಕರಣ, ಯುವ ಕರ್ನಾಟಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಪಾಲ್ಗೊಂಡಿದ್ದರು.