
ನಟಿ ಸಮಂತಾ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ದ ಮಹತ್ವವೇನು?
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಮಂತಾ ಅವರು ಇತ್ತೀಚೆಗೆ ತಮಿಳು ಸಾಂಪ್ರದಾಯದಂತೆ ಸೀಮಂತ ಮಾಡಿಕೊಂಡಿದ್ದಾರೆ.
ಅವರ ಸೀಮಂತದಲ್ಲಿ ನೆರವೇರಿದ ‘ಉದಕಶಾಂತಿ ಸ್ನಾನ’ (Udakashanthi Snanam) ಎಂಬ ಪವಿತ್ರ ಧಾರ್ಮಿಕ ವಿಧಿವಿಧಾನದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಕುತೂಹಲ ಮೂಡಿದೆ.
ಸೀಮಂತದ ಫೋಟೊಗಳನ್ನು ಹಂಚಿಕೊಂಡಿದ್ದ ಸಮಂತಾ, ‘ಮಂತ್ರಗಳ ಶಬ್ದ, ಜಪದಿಂದ ಸೃಷ್ಟಿಯಾಗುವ ಧನಾತ್ಮಕ ಶಕ್ತಿ ಹಾಗೂ ತಲೆಮಾರುಗಳಿಂದ ಸಾಗಿಬಂದಿರುವ ಈ ಪ್ರಾಚೀನ ಆಚರಣೆಗಳ ಹಿಂದೆ ಭವ್ಯವಾದ ತತ್ತ್ವವಿದೆ’ ಎಂದು ಬರೆದುಕೊಂಡಿದ್ದರು.
ತಮಿಳು ಸಂಪ್ರದಾಯದ ಸೀಮಂತದ ಪ್ರಮುಖ ಹಂತಗಳಿವು...
ಕಲಶ ಸ್ಥಾಪನೆ ಮತ್ತು ವೈದಿಕ ಮಂತ್ರೋಚ್ಚಾರಣೆ: ಪೂಜೆಯ ಆರಂಭದಲ್ಲಿ ನೀರಿನಿಂದ ತುಂಬಿದ ಕಲಶವನ್ನು ಮಂತ್ರೋಚ್ಚಾರಣೆಯೊಂದಿಗೆ ಸ್ಥಾಪಿಸಲಾಗುತ್ತದೆ. ಗಿಡಮೂಲಿಕೆಗಳು ಹಾಗೂ ಮಂತ್ರದಂಡಗಳಿಂದ ಪವಿತ್ರಗೊಳಿಸಿದ ಈ ನೀರು, ತಾಯಿ ಮತ್ತು ಮಗುವಿಗೆ ಧನಾತ್ಮಕ ಶಕ್ತಿ ಹಾಗೂ ರಕ್ಷಣೆ ನೀಡುತ್ತದೆ ಎಂಬ ನಂಬಿಕೆಯಿದೆ.
ಉದಕಶಾಂತಿ ಸ್ನಾನ: ಇದು ಸೀಮಂತದ ಅತ್ಯಂತ ಮುಖ್ಯವಾದ ಪವಿತ್ರ ಸ್ನಾನದ ಶಾಸ್ತ್ರ. 'ಉದಕ' ಎಂದರೆ ನೀರು, 'ಶಾಂತಿ' ಎಂದರೆ ಮನಸ್ಸಿಗೆ ನೆಮ್ಮದಿ. ತಾಯಿಯಾಗುತ್ತಿರುವ ಮಹಿಳೆಗೆ ಮಾನಸಿಕ ಧೈರ್ಯ, ಶಾಂತಿ ಹಾಗೂ ಹುಟ್ಟಲಿರುವ ಮಗುವಿಗೆ ಪೂರ್ಣ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸಿ ಈ ಧಾರ್ಮಿಕ ಸ್ನಾನ ನೆರವೇರಿಸಲಾಗುತ್ತದೆ.
ಅಲಂಕಾರ ಹಾಗೂ ಮುತ್ತೈದೆ ಶಾಸ್ತ್ರ: ಮಂಗಳಸ್ನಾನದ ನಂತರ ಗರ್ಭಿಣಿಗೆ ಹೊಸ ರೇಷ್ಮೆ ಸೀರೆ ಉಡಿಸಿ, ಬಂಗಾರದ ಆಭರಣಗಳು ಹಾಗೂ ಮಲ್ಲಿಗೆ ಹೂವಿನಿಂದ ಅಲಂಕರಿಸಲಾಗುತ್ತದೆ. ನಂತರ ಅರಿಶಿನ-ಕುಂಕುಮ ಹಚ್ಚಿ, ಹಸಿರು ಬಳೆಗಳನ್ನು ತೊಡಿಸಿ ಹಿರಿಯರು ಆಶೀರ್ವದಿಸುತ್ತಾರೆ.
ಇನ್ನು, ಸಮಂತಾ ಅವರ ಈ ಸುಂದರ ಫೋಟೊಗಳಿಗೆ ದಕ್ಷಿಣ ಭಾರತದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೋನಿಡೇಲಾ, ‘ಬಹಳ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ‘ಬೆಳ್ಳಿಪರದೆ ಮೇಲೆ ನಮ್ಮ ಮನ ಗೆದ್ದ ನೀವು, ಈಗ ಜೀವನದ ಅತ್ಯಂತ ಸುಂದರ ಪಾತ್ರಕ್ಕೆ ಕಾಲಿಡುತ್ತಿದ್ದೀರಾ’ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.