
ಕನಕಗಿರಿ: ಬೆಳಕಿನಲ್ಲಿ ಕಂಗೊಳಿಸಿದ ಗರುಡ ಉಚ್ಚಾಯ ಗಣೇಶ
ಕನಕಗಿರಿ: ಪಟ್ಟಣದ ವಿವಿಧ ಗಜಾನನ ಸಮಿತಿ ವತಿಯಿಂದ ಗಣೇಶ ಮೂರ್ತಿಯನ್ನು ಎಲ್ಲೆಡೆ ಪ್ರತಿಷ್ಠಾಪಿಸಿ ಗೌರಿ ಗಣೇಶಕ್ಕೆ ಮೆರುಗು ತರಲಾಗಿದೆ.
ಗರುಡೋತ್ಸವದ ಉಚ್ಚಾಯದ ಮಾದರಿಯಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಎಂ.ಜಿ. ರಸ್ತೆ ಸಾಮ್ರಾಟ್ ಯುವಕರ ಬಳಗದವರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ಗಮನ ಸೆಳೆಯುತ್ತಿದೆ. ಈ ಗಣೇಶ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು ಕಣ್ಮನ ಸೆಳೆಯುತ್ತಿದೆ.
ಪಟ್ಟಣ ಪಂಚಾಯಿತಿ ಬೃಹತ್ ಗರುಡ ಪ್ರಭಾವಳಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ಗಣೇಶ ಕಂಗೊಳಿಸುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ರಾತ್ರಿ ವೇಳೆ ಗಣಪತಿಯ ಸುತ್ತಲೂ ಹಾಕಿರುವ ವರ್ಣರಂಜಿತ ವಿದ್ಯುತ್ ದೀಪಾಲಂಕಾರ, ಗರುಡನ ಆಕೃತಿಯ ಬೆಳಕಿನ ಅಲಂಕಾರದಿಂದ ಇಡೀ ರಸ್ತೆಯೇ ವೈಭವಯುತವಾಗಿ ಕಾಣುತ್ತಿದೆ. ಕನಕಾಚಲಪತಿ ಜಾತ್ರೆಯ ಗರುಡೋತ್ಸವದ ಪರಂಪರೆಯನ್ನು ಗಣೇಶೋತ್ಸವದಲ್ಲೂ ಮುಂದುವರಿಸಿರುವ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದ್ದು, ಭಕ್ತಿ-ಸಂಭ್ರಮ ಮನೆ ಮಾಡಿದೆ. ಪಟ್ಟಣದ 14ನೇ ವಾರ್ಡಿನ ಯುವಕರು ಪ್ರತಿಷ್ಠಾಪಿಸಲಾಗಿರುವ ಅಂಬಿಗರ ಚೌಡಯ್ಯನ ಅವತಾರದ ಗಣೇಶ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ದೋಣಿಯಲ್ಲಿ ನಿಂತು ಹುಟ್ಟು ಹಿಡಿದು, ಕಾವಿ ಪಂಚೆ, ರುಮಾಲು ಧರಿಸಿರುವ ಗಣಪನ ರೂಪದಲ್ಲಿ ಅಂಬಿಗರ ಚೌಡಯ್ಯನನ್ನು ಬಿಂಬಿಸಲಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಗಳ ಬೆಳಕಿನಲ್ಲಿ ಈ ಮೂರ್ತಿ ಕಂಗೊಳಿಸುತ್ತಿದ್ದು, ಭಕ್ತರು ಸಾಲಾಗಿ ನಿಂತು ವೀಕ್ಷಿಸುತ್ತಿರುವುದು ಕಂಡು ಬಂತು. ಮೀನುಗಾರ ಸಮುದಾಯದ ಕಾಯಕ ಸಂಸ್ಕೃತಿಯನ್ನು ಗಣೇಶೋತ್ಸವದ ಮೂಲಕ ತೋರಿಸಿರುವ ಯುವಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕನಕಗಿರಿ ಎಂದರೆ ಗರುಡೋತ್ಸವಕ್ಕೆ ಪ್ರಸಿದ್ಧಿ. ಅದೇ ಪರಂಪರೆಯನ್ನು ಗಣೇಶೋತ್ಸವದಲ್ಲೂ ತೋರಿಸಬೇಕು ಎಂಬ ಉದ್ದೇಶದಿಂದ ಈ ಬಾರಿ ಗರುಡ ಉಚ್ಚಾಯ ಮಾದರಿಯಲ್ಲಿ ಅಲಂಕಾರ ಮಾಡಿಸಿದ್ದೇವೆ. ಸುಮಾರು 40 ದಿನಗಳಿಂದ ಶ್ರಮ ವಹಿಸಿ ಸಿದ್ಧಪಡಿಸಲಾಗಿದೆ ಎಂದು ಎಂಜಿ ರಸ್ತೆ ಗಣೇಶ ಸಮಿತಿಯ ಆನಂದಕುಮಾರ ತಿಳಿಸಿದರು.
ಬಳಿಗೇರ ಓಣಿ, ಶಿವಾಜಿ ನಗರ, ಡಾ.ಬಾಬು ಜಗಜೀವರಾವ್ ವೃತ್ತ, ಭಾವಸಾರ ಕ್ಷತ್ರಿಯ ಸಮಾಜ,ಪೇಟೆ ಬಸವೇಶ್ವರ, ವಾಲ್ಮೀಕಿ ನಗರ, ಕನಕಾಚಲಪತಿ ಗಜಾನನ ಸಮಿತಿ ಸೇರಿದಂತೆ ಪಟ್ಟಣದ ಇತರೆ ವಾರ್ಡ್ ಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಗಮನ ಸೆಳೆದಿದ್ದು ದಿನಲೂ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ.