
ಶ್ರಾವಣ ಸಂಪನ್ನ: ಕೋಲಾಟದ ಸೊಬಗು ಕೋಟೂರು ಗ್ರಾಮದಲ್ಲಿ
ಧಾರವಾಡ: ಕೋಲುಗಳಿಂದ ಹೊರಹೊಮ್ಮುವ `ಠಣ್ ಠಣ್' ನಾದ, ಡಿಜೆ ಸಂಗೀತಕ್ಕೆ ತಕ್ಕಂತೆ ಚುರುಕಿನಿಂದ ಹೆಜ್ಜೆ ಹಾಕುವ ಯುವಕರು ಹಾಗೂ ಗ್ರಾಮೀಣ ಸೊಗಡಿನ ಜನಪದ ಭಕ್ತಿಗೀತೆಗಳ ಗಾಯನ...
ತಾಲ್ಲೂಕಿನ ಕೋಟೂರ ಗ್ರಾಮದಲ್ಲಿ ಚಾಂಗದೇವ ಭಜನಾ ಮಂಡಳಿ ವತಿಯಿಂದ ನಡೆದ ಶ್ರಾವಣ ಅಮಾವಾಸ್ಯೆ ಪ್ರಯುಕ್ತ ‘ಶ್ರಾವಣ ಸಂಪನ್ನ’ ಕಾರ್ಯಕ್ರಮದ ಮೆರವಣಿಗೆಯಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು.
ಶುಕ್ರವಾರ ಬೆಳಿಗ್ಗೆ ಚಾಂಗದೇವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. ಬಳಿಕ ವಿಶೇಷ ಹೂವು, ಬಲೂನ್‍ಗಳಿಂದ ಸಿಂಗರಿಸಿದ ಎತ್ತಿನ ಚಕ್ಕಡಿಯಲ್ಲಿ ಅಲಂಕೃತ ಮಂಟಪದಲ್ಲಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಚಾಂಗದೇವ ದೇವಸ್ಥಾನದ ಆವರಣದಿಂದ ಕೋಲಾಟ ಮೇಳಕ್ಕೆ ಚಾಲನೆ ನೀಡಲಾಯಿತು. ಕೋಲಾಟದ ಆಕರ್ಷಣೆಯನ್ನು ಹೆಚ್ಚಿಸಲು ಹಳದಿ ಮತ್ತು ನೀಲಿ ಬಣ್ಣದ ಸಮವಸ್ತ್ರ ಧರಿಸಿದ ಸುಮಾರು 20 ಯುವಕರು ಕೈಯಲ್ಲಿ ಕೋಲು ಹಿಡಿದು ಸಾಲುಗಟ್ಟಿ ನಿಂತರು.
ಡಿಜೆಯಲ್ಲಿ `ಜನಪದ ರೀಮಿಕ್ಸ್' ಮೊಳಗುತ್ತಿದ್ದಂತೆ ಲಯಬದ್ಧ ಹೆಜ್ಜೆಯೊಂದಿಗೆ ಹಾಡಿಗೆ ತಕ್ಕಂತೆ ಕೋಲು ಕುಟ್ಟುತ್ತಾ ನೃತ್ಯ ಪ್ರದರ್ಶಿಸಿದರು. ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಕೋಲಾಟ ಮೇಳವು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಿ ಸಂಪನ್ನಗೊಂಡಿತು. ಮೆರವಣಿಗೆ ಸಾಗಿದ ಪ್ರತಿ ಬೀದಿಯಲ್ಲೂ ಮಹಿಳೆಯರು ಬಸವೇಶ್ವರ ದೇವರಿಗೆ ನೀರು ಹಾಕಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.
ಮಧ್ಯಾಹ್ನ ದೇವಸ್ಥಾನದಲ್ಲಿ ಪ್ರಸಾದ ವಿತರಿಸಲಾಯಿತು. ಭಜನಾ ಮಂಡಳಿಯ ಸದಸ್ಯರಾದ ಫಕ್ಕೀರಪ್ಪ ದರಗದ, ಯಲ್ಲಪ್ಪ ಮಾಳಗಿ, ಚಿದಾನಂದ ಕ್ಯಾರವಾಡ, ಮಡಿವಾಳೆಪ್ಪ ಜೀವೋಜಿ, ಚನ್ನಪ್ಪ ಕಬ್ಬನೂರ, ಹನುಮಂತ ಮಾಳಗಿ, ಮಹಾದೇವಪ್ಪ ಜೀವೋಜಿ ಇದ್ದರು.
ಹಿರಿಯರ ಕಾಲದಿಂದಲೂ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಿತ್ಯ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬಂದಿದ್ದೇವೆ. ಕಳೆದ ಹಲವು ವರ್ಷಗಳಿಂದ ಭಜನಾ ಮೆರವಣಿಗೆಯೊಂದಿಗೆ ಕೋಲಾಟ ಮೇಳ ಆರಂಭಿಸಿರುವುದು ಶ್ರಾವಣ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ ಶಿವಪ್ಪ ಗಿರಿಯಾಲ, ಭಜನಾ ಮಂಡಳಿ ಮುಖಂಡ