ಕಲಬುರಗಿ: ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

ಕಲಬುರಗಿ: ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

ಕಲಬುರಗಿ: ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

ಕಲಬುರಗಿ: ಜಿಲ್ಲೆಯಲ್ಲಿ ‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌’ನಿಂದ (ಪಿಒಪಿ) ಸಿದ್ಧಪಡಿಸುವ ‌ಗಣೇಶ ಮೂರ್ತಿಗಳ ಹಾವಳಿಯ ನಡುವೆಯೂ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುದುರುತ್ತಿದೆ.

ಪರಿಸರಕ್ಕೆ ಮಾರಕವಾದ ಪಿಒಪಿ ಮೂರ್ತಿಗಳ ಬಳಕೆಯನ್ನು ವರ್ಷಗಳ ಹಿಂದೆಯೇ ಸರ್ಕಾರ ನಿಷೇಧಿಸಿದೆ. ಪರಿಸರಸ್ನೇಹಿ ಮೂರ್ತಿ ಉಪಯೋಗಿಸುವಂತೆ ಸಲಹೆ ನೀಡಿದೆ. ಆದರೂ, ಅವುಗಳ ಬಳಕೆ ನಿಂತಿಲ್ಲ. ಅದರ ನಡುವೆ ಪರಿಸರ ಪ್ರೇಮಿಗಳು, ಪ್ರಕೃತಿಯ ಕಾಳಜಿವುಳ್ಳ ಜನ, ಸಂಘ–ಸಂಸ್ಥೆಗಳ ಶ್ರಮದಿಂದ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯ ಕ್ರಾಂತಿ ಶುರುವಾಗಿದೆ.

ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ, ಸೂಪರ್‌ ಮಾರ್ಕೆಟ್‌, ಸೇಡಂ ರಸ್ತೆ ಸೇರಿದಂತೆ ಹಲವೆಡೆ ಮಣ್ಣಿನ ಗಣಪತಿ ವಿಗ್ರಹಗಳ ಮಾರಾಟ ಕಂಡು ಬರುತ್ತಿದೆ. ಪಿಒಪಿ ಮೂರ್ತಿಗಳಿಗೆ ಹೋಲಿಸಿದರೆ, ಮೃತಿಕೆಯ (ಮಣ್ಣಿನ) ಮೂರ್ತಿಗಳ ತೂಕ ಹೆಚ್ಚು ಹಾಗೂ ದರ ತುಸು ದುಬಾರಿ. ಆರು ಇಂಚಿನಿಂದ ಎರಡ್ಮೂರು ಅಡಿ ಎತ್ತರದ ಮಣ್ಣಿನ ಗಣಪತಿ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

‘ನಾವು 11 ವರ್ಷಗಳಿಂದ ಕಲಬುರಗಿಯಲ್ಲಿ ಪರಿಸರಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ಮಾರುತ್ತಿದ್ದೇವೆ. ಮೊದಲ ವರ್ಷ 250ರಷ್ಟು ಮೂರ್ತಿಗಳು ಮಾರಾಟವಾಗಿದ್ದವು. ವರ್ಷದಿಂದ ವರ್ಷಕ್ಕೆ ಪರಿಸರದ ಕಾಳಜಿಯು ಕ್ರಾಂತಿಯ ಸ್ವರೂಪದಲ್ಲಿ ಬೆಳೆದಿದೆ. ಕಳೆದ ವರ್ಷ ಆರು ಸಾವಿರದಷ್ಟು ಗಣಪತಿ ಮೂರ್ತಿಗಳನ್ನು ಮಾರಿದ್ದೇವೆ. ಈ ಸಲ ಎಂಟು ಸಾವಿರ ಗೌರಿಸುತನ ಮೂರ್ತಿಗಳನ್ನು ತರಿಸಿದ್ದೇವೆ. ಅದರಲ್ಲಿ ಈಗಾಗಲೇ ಐದೂವರೆ ಸಾವಿರದಷ್ಟು ಮೂರ್ತಿಗಳನ್ನು ಭಕ್ತರು ಖರೀದಿಸಿದ್ದಾರೆ’ ಎನ್ನುತ್ತಾರೆ ಸೇಡಂ ರಸ್ತೆಯ ಸ್ವದೇಶಿ ಸ್ವಾಭಿಮಾನ ಮಳಿಗೆಯ ಸಹಮಾಲೀಕ ಅಕ್ಷಯ ಕುಲಕರ್ಣಿ.

‘ನಮ್ಮಲ್ಲಿ 6 ಇಂಚು ಎತ್ತರದಿಂದ ಹಿಡಿದು 6 ಅಡಿ ಎತ್ತರದಷ್ಟು ಮಣ್ಣಿನ ಗಣಪ ಮೂರ್ತಿಗಳಿವೆ. ಗಾತ್ರ, ವಿನ್ಯಾಸದ ಆಧಾರದಲ್ಲಿ ₹100ರಿಂದ ₹20 ಸಾವಿರದವರೆಗೂ ದರವಿದೆ. ಶಾಲೆ, ಕಾಲೇಜುಗಳು, ಸಂಘ–ಸಂಸ್ಥೆಗಳು ಇತ್ತೀಚೆಗೆ ಪರಿಸರ ಸ್ನೇಹಿ ಗಣಪನ ಮೂರ್ತಿಗಳತ್ತ ಆಕರ್ಷಿತ್ತರಾಗುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

‘ಜಿಲ್ಲೆಯಲ್ಲಿ ನಿಧಾನಕ್ಕೆ ಪರಿಸರಸ್ನೇಹಿ ವಕ್ರತುಂಡನ ಮೂರ್ತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬರೀ ನಾವಷ್ಟೇ ಅಲ್ಲದೇ ನಗರದ ಹತ್ತಾರು ಕಡೆ ಮಣ್ಣಿನ ಮೂರ್ತಿಗಳ ಮಾರಾಟ ಭರದಿಂದ ಸಾಗಿದೆ. ಇದು ಖುಷಿಯ ವಿಚಾರ. ನಿಧಾನಕ್ಕಾದರೂ ಜನರು ಪರಿಸರದ ಕಾಳಜಿ ಮೆರೆಯುತ್ತಿರುವುದು ಸಂತಸ ಸಂಗತಿ’ ಎಂದು ಅಕ್ಷಯ ಕುಲಕರ್ಣಿ ಹೇಳುತ್ತಾರೆ.

ಮಣ್ಣಿನ ಗಣಪನ ಆಕರ್ಷಣೆ...

ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬರೀ ಮನೆ, ಶಾಲೆಗಳಿಗೆ ಸೀಮಿತವಾಗಿಲ್ಲ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಲ್ಲೂ ಮೃತಿಕೆಯ ಮೂರ್ತಿ ಬಳಕೆಯಾಗುತ್ತಿದೆ.

ಕಲಬುರಗಿಯ ಶಹಾಬಜಾರ್‌ನ ರಾಮಮಂದಿರ ಗಣೇಶ ಮಂಡಳವು ಕಳೆದ 11 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸುತ್ತಿದೆ. ಸ್ವಯಂ ಪರಿಸರಸ್ನೇಹಿ ಮೂರ್ತಿ ನಿರ್ಮಿಸುವುದು ಹಾಗೂ ಎತ್ತಿನ ಬಂಡಿಯಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ನಡೆಸುವುದು ಈ ಗಣೇಶ ಮಂಡಳದ ವಿಶೇಷ. ಈ ಗಣೇಶ ಮಂಡಳಕ್ಕೆ 28 ವರ್ಷಗಳ ಇತಿಹಾಸವಿದೆ.

‘ಈ ಸಲ 9 ಅಡಿ ಎತ್ತರ ಮಹಾರಾಜರು ವಿರಾಜಮಾನವಾದ ಭಂಗಿಯಲ್ಲಿರುವ ಗಣೇಶ ಮೂರ್ತಿ ಸಿದ್ಧಗೊಳ್ಳುತ್ತಿದೆ. ಭತ್ತದ ಹುಲ್ಲು, ಹತ್ತಿ, 150 ಕೆ.ಜಿಯಷ್ಟು ಮಣ್ಣು, 5 ಕೆ.ಜಿಯಷ್ಟು ತೆಂಗಿನ ನಾರು, ಗೋಣಿ ಚೀಲಗಳು, ಹತ್ತಿ ಬಟ್ಟೆ, ಕಬ್ಬಿಣದ ಆ್ಯಂಗಲ್‌ ಬಳಸಲಾಗಿದೆ. ಅಂತಿಮ ಸ್ಪರ್ಶ ನೀಡುವುದಷ್ಟೇ ಬಾಕಿ ಇದೆ’ ಎಂದು ಗಣೇಶಮೂರ್ತಿ ಸಿದ್ಧಪಡಿಸುತ್ತಿರುವ ಕಲಾವಿದ ರಾಜು ಗಣಪತರಾವ್ ಪಂಚಭಾಯಿ ಹೇಳುತ್ತಾರೆ.

ಕಲಬುರಗಿಯ ಕೋಟೆ ಎದುರಿನ ಹಿಂದೂ ಮಹಾಗಣಪತಿಯ ಮೂರ್ತಿಯೂ ಈ ಸಲ ಮಣ್ಣಿನದ್ದೇ ಆಗಿರಲಿದೆ. ಕೇದಾರಲಿಂಗವನ್ನು ಪೂಜಿಸುವ ಮಾದರಿಯನ್ನು ಗಣಪನ ಮೂರ್ತಿಯನ್ನೂ ಕಲಾವಿದ ರಾಜು ಅವರೇ ರೂಪಿಸುತ್ತಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ