
ವಿದ್ಯಾರ್ಥಿಗಳು ಪರಿಸರದ ಮಹತ್ವ ಅರಿಯಬೇಕು - ಸುನೀತಾ ಬಿ.ಎಂ.
ಮುಂಡಗೋಡ: ವಿದ್ಯಾರ್ಥಿಗಳು ಪರಿಸರದ ಮಹತ್ವ ಅರಿತು, ಹೆಚ್ಚು ಗಿಡಗಳನ್ನು ಬೆಳೆಸುತ್ತ, ಇತರರಿಗೆ ಪ್ರೇರಣೆ ಆಗಬೇಕು ಎಂದು ಉಪವಲಯ ಅರಣ್ಯಧಿಕಾರಿ ಸುನೀತಾ ಬಿ.ಎಂ. ಹೇಳಿದರು.
ತಾಲ್ಲೂಕಿನ ಚಿಗಳ್ಳಿಯ ಪಿಎಂಶ್ರೀ ಕೆಪಿಎಸ್ ಶಾಲೆಯಲ್ಲಿ ಸುಭಾಷಚಂದ್ರ ಬೋಸ್ ಇಕೋ ಕ್ಲಬ್ ವತಿಯಿಂದ ಶುಕ್ರವಾರ ನಡೆದ, ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಇಒ ಸುಮಾ ಜಿ. ಮಾತನಾಡಿ, ಪ್ರತಿಯೊಂದು ಜೀವಿಗಳು ಬದುಕಲು ಪರಿಸರ ಅಗತ್ಯ. ಪರಿಸರ ನಾಶವಾದರೆ ಮನುಷ್ಯ ಸಂಕುಲ ಅವನತಿಯಾಗುತ್ತದೆ. ಉತ್ತಮ ಪರಿಸರದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದರೆ, ಮನೆ, ಶಾಲೆ ಸೇರಿದಂತೆ ಸುತ್ತಲೂ ಗಿಡಗಳನ್ನು ಬೆಳೆಸಿ, ಪೋಷಿಸಬೇಕು ಎಂದರು.
ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಸರಿ, ತಪ್ಪು ಗುರುತಿಸುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಹೆಚ್ಚಿದೆ ಎಂದು ಅವರು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪರುಶುರಾಮ ಹನಕನಹಳ್ಳಿ, ಮುಖ್ಯ ಶಿಕ್ಷಕ ಕೆ.ಕೆ.ಕರುವಿನಕೊಪ್ಪ, ಸಿಆರ್ ಪಿ ಪ್ರಕಾಶ ಬಾಳಮ್ಮನವರ, ಗೋಪಾಲ ನಾಯ್ಕ, ಬಸವರಾಜ ಬೆಂಡ್ಲಗಟ್ಟಿ ಇದ್ದರು.