
ವಾರ್ಡನ್ ಹೊರಗೆ ಕಳಿಸಿ ಮಕ್ಕಳ ಸಮಸ್ಯೆ ಆಲಿಸಿದ ಸಚಿವ ಶಿವರಾಜ ತಂಗಡಗಿ
ಮೈಸೂರು: ಹಾಸ್ಟೆಲ್‌ಗಳಿಗೆ ವಾರ್ಡನ್‌ಗಳು ನಿಯಮಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದು ಕಡ್ಡಾಯ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ಭೇಟಿ ನೀಡದವರನ್ನು ಅಮಾನತು ಮಾಡಲಾಗುವುದು ಎಂದು ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಎಚ್ಚರಿಕೆ ನೀಡಿದರು.
ಇಲ್ಲಿನ ಕುವೆಂಪುನಗರದ ಬಿಸಿಎಂ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬುಧವಾರ ಭೇಟಿ ನೀಡಿ ವಾರ್ಡನ್‌ಗಳನ್ನು ಹೊರಗೆ ಕಳುಹಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ಕೊಠಡಿ, ಅಡುಗೆಮನೆ, ಊಟದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಸೌಕರ್ಯ ಮೊದಲಾದ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ನಿತ್ಯವೂ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ನಿರ್ವಹಣೆ, ಸ್ವಚ್ಛತೆ ಹಾಗೂ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ. ಎಲ್ಲವೂ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ವಾರ್ಡನ್‌ಗಳು ಮಕ್ಕಳೊಂದಿಗೆ ಊಟ ಮಾಡಿದಾಗ ಮಾತ್ರ ಆಹಾರದ ಗುಣಮಟ್ಟ ಹೇಗಿದೆ ಎಂಬುದು ತಿಳಿಯುತ್ತದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಸಮಸ್ಯೆಗಳನ್ನು ಅರಿಯಬೇಕು. ಪೋಷಕರ ಸ್ಥಾನದಲ್ಲಿ ನಿಂತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ‘ವಿದ್ಯಾ ವಾಹಿನಿ’ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದರಲ್ಲಿ ಹಿರಿಯ ವಿದ್ಯಾರ್ಥಿಗಳು ಪಿಯುಸಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳಲ್ಲಿ ಟ್ಯೂಷನ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.