
ಅಕ್ಷರಗಳ ಆಚೆಗಿನ ಅಕ್ಕರೆ: ಕಲಾ ಕಾಲೇಜಿನ ಕಲ್ಪವೃಕ್ಷ, ನನ್ನ ಬದುಕಿನ ರೂವಾರಿ
ಬದುಕೊಂದು ಖಾಲಿ ಪುಟ, ಅದಕ್ಕೆ ಅರ್ಥ ಕಲ್ಪಿಸುವವರು ಶಿಕ್ಷಕರು. 'ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು' ಎಂಬಂತೆ ಜೀವನದಲ್ಲಿ ಯಶಸ್ಸಿನ ಶಿಖರವೇರಲು ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ಗುರುಗಳೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಪಾಠ ಮಾಡುವವರಲ್ಲ. ಅವರು ವಿದ್ಯಾರ್ಥಿಯ ಭವಿಷ್ಯವನ್ನು ಕೆತ್ತುವ ಶಿಲ್ಪಿಗಳು. ಯಾವುದೇ ಸ್ವಾರ್ಥವಿಲ್ಲದೆ ವಿದ್ಯಾರ್ಥಿಯ ಗೆಲುವನ್ನೇ ತಮ್ಮ ಗೆಲುವೆಂದು ಖುಷಿಯಿಂದ ಸಂಭ್ರಮಿಸುವವರು ಶಿಕ್ಷಕರು ಮಾತ್ರ. ಅವರು ನೀಡುವ ಪ್ರತಿಯೊಂದು ಶಿಕ್ಷೆಯ ಹಿಂದೆಯೂ ಬೆಟ್ಟದಷ್ಟು ಪ್ರೀತಿ ಮತ್ತು ಕಾಳಜಿ ಅಡಗಿರುತ್ತದೆ. ಅಜ್ಞಾನವನ್ನು ತೊಲಗಿಸುವ ಮೂಲಕ ಜ್ಞಾನದ ಧಾರೆ ಹರಿಸುವ ಇಂತಹ ಗುರುವಿನ ಸ್ಥಾನದಲ್ಲಿ ನಿಂತು, ನನ್ನ ಜೀವನದ ದಾರಿಯನ್ನೇ ಬದಲಾಯಿಸಿ, ಗುರಿ ಇಲ್ಲದ ಬದುಕಿಗೆ ದಾರಿ ತೋರಿದವರೇ ನಮ್ಮ ಕಲಾ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ 'ಭವ್ಯ ಮೇಡಂ'
ಕತ್ತಲೆಯಿಂದ ಬೆಳಕಿನೆಡೆಗೆ ಪಯಣ
ನಾನು ಪಿಯುಸಿ ಮುಗಿಸಿ ಬಂದ ಆರಂಭದ ದಿನಗಳವು. ನನ್ನ ಮನಸ್ಸು ಲಗಾಮು ಇಲ್ಲದ ಕುದುರೆಯಂತೆ ಓಡಾಡುತ್ತಿತ್ತು. ಯಾವುದೇ ನಿರ್ದಿಷ್ಟ ಗುರಿಯಾಗಲಿ, ಆಸೆಯಾಗಲಿ ಇರಲಿಲ್ಲ. 'ಓದು' ಎಂದರೆ ನನಗೆ ಪರಮ ಶತ್ರು. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ನಾನು, ಕಲಾ ವಿಭಾಗಕ್ಕೆ ಬಂದಾಗ 'ಮುಂದೇನು?' ಎಂಬ ಪ್ರಶ್ನೆ ಕಾಡತೊಡಗಿತು. 'ಈಗಾಗಲೇ ಉರಿದು ಹೋಗುತ್ತಿರುವ ನನ್ನ ಜೀವನಕ್ಕೆ ನಾನೇ ತುಪ್ಪ ಸುರಿದುಕೊಂಡೆ' ಅನಿಸಿತ್ತು. ಇನ್ನೇನು ನನ್ನ ಜೀವನವೇ ಮುಗಿಯಿತು ಎನ್ನುವ ವೇಳೆ ನನ್ನ ಮಾರ್ಗದರ್ಶಕಿಯಾಗಿ ಸಿಕ್ಕಿದ್ದೇ ಭವ್ಯ ಮೇಡಂ. ಅಲ್ಲಿಂದ ನನ್ನ ಬದುಕಿನ ಹೊಸ ಪಯಣಕ್ಕೆ ಉದ್ಘಾಟನೆಯಾಯಿತು.
ಪಾಠ ಮಾಡುವ ಪರಿಯೇ ಒಂದು ಅದ್ಭುತ ಕಲೆ
ಭವ್ಯ ಮೇಡಂ ತರಗತಿಗೆ ಬಂದರೆಂದರೆ ವಿದ್ಯಾರ್ಥಿಗಳಲ್ಲಿ ಒಂದು ಹೊಸ ಉತ್ಸಾಹ. ಯಾವುದೇ ಪ್ರಾಕ್ಟಿಕಲ್ ಉಪಕರಣಗಳಿಲ್ಲದಿದ್ದರೂ, ಕೇವಲ ತಮ್ಮ ಮಾತಿನ ಮೋಡಿಯಿಂದಲೇ ಪತ್ರಿಕೋದ್ಯಮದ ಇಡೀ ಜಗತ್ತನ್ನು ಕಣ್ಣ ಮುಂದೆ ತಂದು ನಿಲ್ಲಿಸುವ ಕಲೆ ಅವರಿಗೆ ಕರಗತವಾಗಿದೆ. ಪಠ್ಯಪುಸ್ತಕದ ಕಷ್ಟಕರ ವಿಷಯಗಳನ್ನೂ ದಿನನಿತ್ಯದ ಬದುಕಿಗೆ ಕನೆಕ್ಟ್ ಮಾಡಿ, ಸುಂದರ ಕಥೆಯಂತೆ ವಿವರಿಸುತ್ತಾರೆ. ಪಾಠ ಅರ್ಥವಾಗದಿದ್ದರೆ ನೂರು ಬಾರಿ ಹೇಳಿಕೊಡುವ ಅವರ ಕಾಳಜಿ ನಮ್ಮಲ್ಲಿ ಕಲಿಯುವ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಮಗುವಿನಂಥ ಮುಗ್ಧ ಮನಸ್ಸು, ತಾಳ್ಮೆಯೇ ಆಭರಣ
ಭವ್ಯ ಮೇಡಂ ಎಂದರೆ ಕನ್ನಡಿಯೇ ನಾಚುವಂತಹ ಸೌಂದರ್ಯವತಿ. ಇವರನ್ನು ನೋಡುತ್ತಿದ್ದರೆ ಹುಡುಗಿಯರಿಗೂ ಸಹ ಕ್ರಶ್ ಆಗಿಬಿಡುತ್ತದೆ. ಸದಾ ಹಸನ್ಮುಖಿಯಾಗಿರುವ ಇವರು ಪ್ರೀತಿಯೆಂಬ ಅಕ್ಷಯಪಾತ್ರೆಯನ್ನು ತುಂಬಿಸಿದ್ದಾರೆ. "ಮಾತು ಮುತ್ತು, ಮೌನ ಬಂಗಾರ" ಎಂಬ ಗಾದೆಗೆ ಮತ್ತಷ್ಟು ಸೊಬಗು ತಂದವರು. ಪಾಠ ಅರ್ಥವಾಗದಿದ್ದರೆ ನೂರು ಸಲ ಹೇಳಿಕೊಡುತ್ತಾರೆ, ಆದರೆ ಕ್ಲಾಸ್‌ಗೆ ಸರಿಯಾಗಿ ಬರದಿದ್ದರೆ ಮಾತ್ರ ಚೆನ್ನಾಗಿ ಬಯ್ಯಲೂ ಹಿಂದೇಟು ಹಾಕುವುದಿಲ್ಲ. ಕೋಪವೂ ಇವರ ಅನುಮತಿ ಕೇಳಿ ಬರಬೇಕೇನೋ ಎನ್ನುವಷ್ಟು ತಾಳ್ಮೆ ಇವರಲ್ಲಿದೆ. ವಿದ್ಯಾರ್ಥಿನಿಯರ ಬೆನ್ನೆಲುಬಾಗಿ ಸದಾ ನಿಲ್ಲುತ್ತಾರೆ.
ಬದುಕಿನ ದಿಕ್ಕು ಬದಲಿಸಿದ ಸ್ಪೂರ್ತಿಯ ಸೆಲೆ
ಪತ್ರಿಕೋದ್ಯಮದ ಗಂಧ-ಗಾಳಿಯೇ ಗೊತ್ತಿಲ್ಲದ ನನಗೆ, ಇಂದು ಪತ್ರಿಕೋದ್ಯಮವಿಲ್ಲದೆ ಭವಿಷ್ಯವನ್ನು ಕಟ್ಟಿಕೊಳ್ಳಲು ಅಸಾಧ್ಯವೆಂಬ ಭಾವನೆ ಹುಟ್ಟಲು ಅವರೇ ಕಾರಣ. ಯಾವುದೇ ಭೇದ-ಭಾವ ಮಾಡದೆ ಎಲ್ಲರೊಂದಿಗೂ ಸ್ನೇಹದಿಂದ ಬೆರೆಯುವುದನ್ನು ನೋಡಿದರೆ, ನಮ್ಮ ಅಮೂಲ್ಯವಾದ ಕ್ಷಣವನ್ನು ಖುಷಿಯಿಂದ ಕಳೆಯಬೇಕು ಅನಿಸಿಬಿಡುತ್ತದೆ. ನಾನು ಎಷ್ಟೋ ಬಾರಿ 'ನನ್ನ ಕೈಯಲ್ಲಿ ಆಗಲ್ಲ' ಎಂದು ಕೈಕಟ್ಟಿ ಕುಳಿತಾಗ, ನನ್ನ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿ ನನ್ನ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಕಾಲೇಜಿಗೆ ಬಂಕ್ ಮಾಡುವುದೇ ಖುಷಿ ಎಂದು ತಿಳಿದ ನನಗೆ, ಕಾಲೇಜಿನೊಳಗಿರುವ ಖುಷಿಯನ್ನು ತಿಳಿಸಿ ನನ್ನ ಡಿಗ್ರಿ ಜೀವನವನ್ನು ಮರೆಯಲಾಗದ ದಿನಗಳಾಗಿ ಪರಿವರ್ತಿಸುತ್ತಿದ್ದಾರೆ.
ಕೆಲವು ವ್ಯಕ್ತಿಗಳು ನಮ್ಮ ಬದುಕಿನಲ್ಲಿ ಬಂದು ಹೋಗುತ್ತಾರೆ, ಆದರೆ ಭವ್ಯ ಮೇಡಂ ನನ್ನ ಪಾಲಿಗೆ ದಿಕ್ಸೂಚಿಯಾಗಿಬಿಟ್ಟಿದ್ದಾರೆ. ನನ್ನ ಈ ಸುಂದರ ಕಾಲೇಜು ದಿನಗಳು, ಅವರು ಪ್ರತಿದಿನ ಕಲಿಸುತ್ತಿರುವ ಬದುಕಿನ ಪಾಠಗಳು ಮತ್ತು ತೋರುತ್ತಿರುವ ವಾತ್ಸಲ್ಯ ನನ್ನ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಿವೆ. ನನ್ನ ಜೀವನ ಶೈಲಿಯ ಬದಲಾವಣೆಗೆ ಕಾರಣಕರ್ತೆಯಾಗಿರುವ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ ಭವ್ಯ ಮೇಡಂಗೆ ಹೃದಯಪೂರ್ವಕ ಅಭಿನಂದನೆಗಳು ಹಾಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
(ಲೇಖಕಿ: ನಲ್ಯಶ್ರೀ ಹೆಚ್. ಬಿಎ ಪತ್ರಿಕೋದ್ಯಮ ವಿದ್ಯಾರ್ಥಿನಿ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ. ಹಾಸನ