
ಮುಳಬಾಗಿಲು ಹೆದ್ದಾರಿ ಸರ್ವಿಸ್ ರಸ್ತೆ ಗುಂಡಿಮಯ, ವಾಹನ ಸವಾರರ ಪರದಾಟ
ಮುಳಬಾಗಿಲು: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಕೆಳಸೇತುವೆ, ಮೇಲ್ಸೇತುವೆ ಮತ್ತಿತರರ ಕಾಮಗಾರಿಗಳು ಪ್ರಾರಂಭವಾಗಿ ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ, ವಾಹನ ಸವಾರರು ಸರ್ವಿಸ್ ರಸ್ತೆಯಲ್ಲಿ ಜೀವ ಹಿಡಿದು ಸಂಚರಿಸುವಂತಾಗಿದೆ.
ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಕಾಮಗಾರಿ ನಡೆಸುವಾಗ ಪ್ರತ್ಯೇಕವಾಗಿ ಸರ್ವಿಸ್ ರಸ್ತೆ ಅಥವಾ ಈಗಾಗಲೇ ಇರುವ ಸರ್ವಿಸ್ ರಸ್ತೆಗೆ ಡಾಂಬರು, ಚರಂಡಿ ನಿರ್ಮಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವುದು ಕಡ್ಡಾಯ. ಆದರೆ, ಹಳೆ ಸರ್ವಿಸ್ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದು, ರಸ್ತೆಗಳು ಗುಂಡಿಮಯವಾಗಿವೆ. ಜೊತೆಗೆ ಸರ್ವಿಸ್ ರಸ್ತೆಯಲ್ಲಿ ಡಾಂಬರೇ ಇಲ್ಲ ಹಾಗೂ ಚರಂಡಿಗಳು ಮಾಯವಾಗಿದ್ದು, ನೀರು ಸರಾಗವಾಗಿ ಹರಿಯದೆ ರಸ್ತೆಯು ಮಳೆ ಬಂದರೆ ಕುಂಟೆಯಂತಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಸರ್ವಿಸ್ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ಡಾಂಬರು ಅಡಿಯಲ್ಲಿ ಹಾಕಿರುವ ಜಲ್ಲಿ ಕಲ್ಲುಗಳು ಮೇಲೆದ್ದು, ಆ ಕಲ್ಲುಗಳು ವಾಹನಗಳು ಸಂಚರಿಸುವಾಗ ಸುತ್ತಮುತ್ತಲಿನ ಜನಕ್ಕೆ ಬಿದ್ದು ಗಾಯಗೊಳಿಸುತ್ತಿವೆ. ಹಾಗಾಗಿ ಕೂಡಲೇ ಸರ್ವಿಸ್ ರಸ್ತೆಗೆ ಡಾಂಬರು ಹಾಕಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಗುಂಡಿ ತಪ್ಪಿಸಲು ಹೋಗಿ ವಾಹನ ಪಲ್ಟಿ: ಸರ್ವಿಸ್ ರಸ್ತೆಯಲ್ಲಿ ಬಿದ್ದಿರುವ ಆಳೆತ್ತರದ ಗುಂಡಿ ತಪ್ಪಿಸಲು ಹೋಗಿ ಈಗಾಗಲೇ ನಂಗಲಿ, ನರಸಿಂಹ ತೀರ್ಥ, ವಡ್ಡಹಳ್ಳಿ ರಸ್ತೆಗಳಲ್ಲಿ ವಾಹನಗಳು ಪಲ್ಟಿಯಾಗಿರುವ ಘಟನೆಗಳು ನಡೆದಿವೆ. ಹೀಗಿದ್ದರೂ ಹೆದ್ದಾರಿ ಅಧಿಕಾರಿಗಳು ಅಥವಾ ಗುತ್ತಿಗೆದಾರರು ಸರ್ವಿಸ್ ರಸ್ತೆಯನ್ನು ನೂತನವಾಗಿ ನಿರ್ಮಿಸಲು ಮುಂದಾಗದೆ ನಿರ್ಲಕ್ಷ್ಯತ ತೋರುತ್ತಿದ್ದಾರೆ.
ಮಳೆ ಬಂದರೆ ರಸ್ತೆ ಕಾಣದೆ ಪರದಾಟ: ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾಡದೆ ಕಾಮಗಾರಿ ನಡೆಸುತ್ತಿರುವ ಪರಿಣಾಮ ಮಳೆ ಬಂದರೆ ರಸ್ತೆಗಳಲ್ಲಿ ನೀರು ಕುಂಟೆಗಳಂತೆ ನಿಂತಿರುತ್ತದೆ. ಇದರಿಂದ ರಸ್ತೆ ಹಾಗೂ ಗುಂಡಿ ಕಾಣದೆ ವಾಹನ ಸವಾರರು ಪರದಾಡುವಂತಾಗಿದೆ.
ಅವೈಜ್ಞಾನಿಕ ರಸ್ತೆ ಉಬ್ಬುಗಳು: ಕಾಮಗಾರಿ ನಡೆಯುತ್ತಿರುವ ಎಲ್ಲಾ ಕಡೆಗಳಲ್ಲಿ ವಾಹನಗಳು ನಿಧಾನವಾಗಿ ಚಲಿಸಲು ರಸ್ತೆಯಲ್ಲಿ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಸಿಗ್ನಲ್ ಲೈಟ್, ಕ್ಯಾಟ್ ಐಸ್, ರೇಡಿಯಂ ಅಥವಾ ಎಚ್ಚರಿಕೆಯ ನಾಮಫಲಕಗಳನ್ನು ಅಳವಡಿಸದ ಕಾರಣದಿಂದ ಏಕಾಏಕಿ ಬ್ರೇಕ್ ಹಾಕುವ ವಾಹನಗಳಿಗೆ ಹಿಂಬದಿಯಿಂದ ಇತರೆ ವಾಹನಗಳು ಡಿಕ್ಕಿಯಾಗುತ್ತಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.
ನಂಗಲಿ ಮೇಲ್ಸೇತುವೆ ಒಂದೆರಡು ತಿಂಗಳಲ್ಲಿ ಪೂರ್ಣ
ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಮುಗಿಸಬೇಕು. ಆದರೆ, ಎಲ್ಲಿಯೂ ಪೂರ್ಣವಾಗಿಲ್ಲ. ಗುತ್ತಿಗೆದಾರರು ಹೆಚ್ಚುವರಿ ಕಾಲಾವಕಾಶ ಪಡೆದು ಕಾಮಗಾರಿ ನಡೆಸುತ್ತಿದ್ದಾರೆ. ನಂಗಲಿಯಲ್ಲಿ ಒಂದೆರಡು ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗಲಿದೆ. ನಂತರ ಸರ್ವಿಸ್ ರಸ್ತೆಗೆ ಡಾಂಬರು ಹಾಕಲಿದ್ದಾರೆ.
–ಅಜಿತ್ ಕುಮಾರ್, ಹೆದ್ದಾರಿ ನಿರ್ವಹಣಾ ವ್ಯವಸ್ಥಾಪಕ
ಬೆಂಗಳೂರಿನ ಕೆ.ಆರ್.ಪುರಂನಿಂದ ಆಂಧ್ರಪ್ರದೇಶದ ಗಡಿಗೆ ಪ್ರವೇಶವಾಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಾಲ್ಲೂಕಿನ ನಂಗಲಿ, ತಾಯಲೂರು, ಕೆಜಿಎಫ್ ರಸ್ತೆ, ವಿರೂಪಾಕ್ಷಿ ಕಡೆಗಳಿಗೆ ಹೋಗುವ ರಸ್ತೆಗಳ ಬಳಿ ಮೇಲ್ಸೇತುವೆ. ಎನ್.ವಡ್ಡಹಳ್ಳಿ ಹಾಗೂ ನರಸಿಂಹ ತೀರ್ಥದ ಬಳಿ ಕೆಳಸೇತುವೆ ಹಾಗೂ ವರ್ತುಲ ರಸ್ತೆ ಮಾದರಿಯ ಕಾಮಗಾರಿಗಳು ನಡೆಯುತ್ತಿದೆ. 2021-22ರಲ್ಲಿ ಪ್ರಾರಂಭವಾಗಿರುವ ಈ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಪ್ರಯಾಣಿಸಿ ಕಷ್ಟಪಡುವಂತಾಗಿದೆ.
ಕಾನೂನು ಪ್ರಕಾರ ಗುತ್ತಿಗೆ ಪಡೆದ ಒಂದು ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಆದರೆ, ಇದುವರೆಗೂ ಯಾವುದೇ ಸ್ಥಳದಲ್ಲೂ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿಲ್ಲ. ಹಾಗಾಗಿ ಸರ್ವಿಸ್ ರಸ್ತೆಯಲ್ಲಿ ಭಾರಿ ವಾಹನಗಳು ಬೀಳುವ ಸ್ಥಿತಿಯಲ್ಲಿ ಸಂಚರಿಸಿದರೆ, ಬೈಕ್, ಕಾರು ಮತ್ತಿತರ ವಾಹನಗಳು ಪಲ್ಟಿಯಾಗುವ ಭಯದಲ್ಲಿ ಸಂಚರಿಸುವಂತಾಗಿದೆ.