
ಕುಲಕಸುಬನ್ನು ಆಧುನೀಕರಿಸಿಕೊಳ್ಳಿ: ಪಿ. ಸುಜ್ಞಾನಮೂರ್ತಿ
ಅಜ್ಜಂಪುರ: ‘ವಿಶ್ವಕರ್ಮರು, ಕುಲ ಕಸುಬನ್ನು ಸಣ್ಣ ಉದ್ಯಮವಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ತಮ್ಮ ಕರಕುಶಲತೆಯನ್ನು ಇಂದಿನ ಆಧುನಿಕತೆ ಮತ್ತು ತಾಂತ್ರಿಕತೆಗೆ ಬದಲಾಯಿಸಿಕೊಳ್ಳಬೇಕು’ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಸಲಹೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ನಡೆದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಸರ್ಕಾರ, ವಿಶ್ವಕರ್ಮರಿಗಾಗಿ ಪಂಚವೃತ್ತಿ ಅಭಿವೃದ್ಧಿ ನೆರವು, ಸ್ವಯಂ ಉದ್ಯೋಗ ನೇರ ಸಾಲ, ಗಂಗಾ ಕಲ್ಯಾಣ ನೀರಾವರಿ, ಅರಿವು ಶೈಕ್ಷಣಿಕ ಸಾಲ, ಸ್ವಾವಲಂಬಿ ಸಾರಥಿ ವಿದೇಶಿ ವ್ಯಾಸಂಗ, ಸ್ವಾತಂತ್ರ್ಯ ಅಮೃತ ಮುನ್ನಡೆ, ಹೊಲಿಗೆ ಯಂತ್ರ, ಮಹಿಳೆಯರಿಗೆ ಕಿರು ಸಾಲ ಯೋಜನೆ ಜಾರಿಗೊಳಿಸಿದೆ. ಸಮಾಜ ಬಾಂಧವರು ಇವುಗಳ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಡಿ. ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದ ಹಲವು ಜಾತಿ ಸಮುದಾಯಗಳನ್ನು ಬೇರ್ಪಡಿಸಿ ವಿಶ್ವಕರ್ಮ ನಿಗಮ ಸ್ಥಾಪಿಸಿದರು. ಆ ಮೂಲಕ ವಿವಿಧ ಸಮುದಾಯಗಳಿಗೆ ನ್ಯಾಯಬದ್ಧ ಸೌಲಭ್ಯ ಸೌಕರ್ಯ ಕಲ್ಪಿಸಲು ಪ್ರಯತ್ನಿಸಿದ್ದಾರೆ. ಸರ್ಕಾರ ನಿಗಮಕ್ಕೆ ನೀಡುತ್ತಿರುವ ಅನುದಾನದ ಪ್ರಮಾಣವನ್ನು ₹50ರಿಂದ ₹60 ಕೋಟಿಗೆ ಹೆಚ್ಚಿಸಲು ಒತ್ತಡ ತರಲಾಗುವುದು ಎಂದು ತಿಳಿಸಿದರು.
ಕೆಡಿಪಿ ಸದಸ್ಯ ಟಿ. ಮಹೇಂದ್ರಾಚಾರ್, ಸರ್ಕಾರ ವಿಶ್ವಕರ್ಮ ನಿಗಮ ಸ್ಥಾಪಿಸಿದೆ. ವಿಶ್ವಕರ್ಮ ಜಯಂತ್ಯುತ್ಸವ, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಆಯೋಜನೆಗೆ ಒತ್ತು ನೀಡಿದೆ. ಸಮಾಜ ಬಾಂಧವರು ಈ ಆಚರಣೆ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ ಪೂರ್ವಾಚಾರ್ ಉಪನ್ಯಾಸ ನೀಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ, ವಿಶ್ವಕರ್ಮ ಸಮಾಜ ತಾಲ್ಲೂಕು ಉಪಾಧ್ಯಕ್ಷ ಕೋಟೇಶ್ವರ ಆಚಾರ್, ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ಅಧ್ಯಕ್ಷ ಚಂದ್ರಶೇಖರಾಚಾರ್, ನಿಗಮ ಮಂಡಳಿ ನಾಮಿನಿ ಸದಸ್ಯ ಸುರೇಶ್ ಆಚಾರ್ ಮಾತನಾಡಿದರು.
ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರಾಚಾರ್, ಸಮಾಜದ ಹೋಬಳಿ ಅಧ್ಯಕ್ಷ ರವೀಂದ್ರಾಚಾರ್, ಗಣೇಶಾಚಾರ್, ಹನುಮಂತಾಚಾರ್ ಇದ್ದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಕಾಳಿಕಾಂಬ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜ ಬಾಂಧವರು ಇದ್ದರು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ವಿಶ್ವಕರ್ಮ ಸಮಾಜ ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.
260930-126-1589241234