
ಉಡುಪಿ: ತೋಡಿಗೆ ಕೊಳಚೆ ನೀರು ಹರಿಸುತ್ತಿರುವುದರಿಂದ ರೋಗ ಭೀತಿ
ಉಡುಪಿ: ನಗರದ ಗುಂಡಿಬೈಲು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮಳೆ ನೀರು ಹರಿಯುವ ತೋಡಿಗೆ ವಾಣಿಜ್ಯ ಕಟ್ಟಡಗಳ ಹಾಗೂ ಒಳಚರಂಡಿಯ ತ್ಯಾಜ್ಯ ನೀರನ್ನು ಹರಿಸಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ಒಳಚರಂಡಿ ನೀರು ತೋಡಿನಲ್ಲಿ ಹರಿಯುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಬಾವಿ ನೀರು ಕಲುಷಿತಗೊಂಡು, ರೋಗ ಭೀತಿ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದೆ ಈ ತೋಡಿನ ನೀರನ್ನು ಭತ್ತದ ಕೃಷಿಗೆ ಬಳಸಲಾಗುತ್ತಿತ್ತು ಅಂತಹ ತೋಡು ಈಗ ಕೊಳಚೆ ಗುಂಡಿಯಾಗಿ ಮಾರ್ಪಾಡಾಗಿದೆ. ಮಳೆ ಬರುವಾಗ ನೀರಿನ ಪ್ರಮಾಣ ಜಾಸ್ತಿ ಇರುವುದರಿಂದ ಅಷ್ಟೇನೂ ಸಮಸ್ಯೆ ಕಾಡುವುದಿಲ್ಲ. ಮಳೆ ನಿಂತ ಕೂಡಲೇ ಈ ತೋಡಲ್ಲಿ ಕೊಳಚೆ ನೀರು ಮಾತ್ರ ಹರಿದು ಸಮಸ್ಯೆಯಾಗುತ್ತಿದೆ ಎಂದೂ ಹೇಳುತ್ತಾರೆ.
ತೋಡಿನ ನೀರು ದುರ್ವಾಸನೆ ಬೀರುತ್ತಿದ್ದು, ಸಮೀಪದ ನಿವಾಸಿಗಳು ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಒಂದು ತಿಂಗಳಿಂದ ಈ ಸಮಸ್ಯೆ ಉಲ್ಬಣಿಸಿದೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ತಿಳಿಸಿದ್ದಾರೆ.
ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯೂ ಅಧಿಕವಾಗಿ ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ. ಗುಂಡಿಬೈಲು ಪ್ರದೇಶದ ಅನೇಕ ಮನೆಯವರು ಬಾವಿ ನೀರನ್ನೇ ಆಶ್ರಯಿಸಿದ್ದಾರೆ. ಇದೀಗ ಕೆಲವು ಬಾವಿಗಳ ನೀರೂ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ಗುಂಡಿಬೈಲು–ನಿಟ್ಟೂರು ಪ್ರದೇಶದ ಸುಮಾರು 30ಕ್ಕೂ ಹೆಚ್ಚು ಮನೆಯವರಿಗೆ ಸಮಸ್ಯೆಯಾಗಿದೆ. ಒಳಚರಂಡಿಯಲ್ಲಿ ಸರಿಯಾಗಿ ನೀರು ಹರಿದುಹೋಗದೆ ಮಳೆ ನೀರು ಹರಿಯುವ ತೋಡು ಸೇರುತ್ತಿದೆ ಎಂದೂ ಕೆಲವರು ತಿಳಿಸಿದ್ದಾರೆ.
ಈ ತೋಡಿನಲ್ಲಿ ಕಲುಷಿತ ನೀರು ಹರಿದು ನದಿಯನ್ನು ಸೇರುತ್ತದೆ. ಆ ಮೂಲಕ ನದಿಯ ನೀರೂ ಕಲುಷಿತವಾಗುತ್ತದೆ ಎನ್ನುತ್ತಾರೆ ಜನರು. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಳೆ ನೀರು ಹರಿಯುವ ಚರಂಡಿಗೆ ಕೊಳಚೆ ನೀರನ್ನು ಬಿಡುವವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಜನರು ಒತ್ತಾಯಿಸಿದ್ದಾರೆ.