
ದೇವದುರ್ಗ: ಸೇನಾ ಸಮವಸ್ತ್ರದ ಕನಸಿಗೆ ಕಸರತ್ತಿನ ಹಾದಿ
ಸ್ಟೇಡಿಯಂನ ಟ್ರ್ಯಾಕ್‌ನಲ್ಲಿ ವೇಗವಾಗಿ ಓಡುತ್ತಿರುವ ಯುವಕರು. ಇನ್ನೊಂದೆಡೆ ಲಾಂಗ್‌ಜಂಪ್, ಪುಷ್‌ಅಪ್ ಮಾಡಿಸುತ್ತಿರುವ ತರಬೇತುದಾರ. ಕಸರತ್ತು ನಡೆಸುತ್ತಿರುವ ಹುಡುಗ–ಹುಡುಗಿಯರ ಕಂಗಳಲ್ಲಿ ಸಾಧಿಸುವ ಕನಸು. ಬೆಳಗಿನ ಜಾವ ದೇವದುರ್ಗದ ಕ್ರೀಡಾಂಗಣದಲ್ಲಿ ಕಾಣುವ ಈ ದೃಶ್ಯ, ಇಲ್ಲಿನ ಯುವಕರ ಪಾಲಿಗೆ ದಿನನಿತ್ಯದ ಪಾಠಶಾಲೆಯಾಗಿದೆ.
ಸಮವಸ್ತ್ರ ತೊಟ್ಟು ದೇಶ ಸೇವೆ ಮಾಡಬೇಕೆಂಬ ಕನಸಿನೊಂದಿಗೆ ಇಲ್ಲಿಗೆ ಬರುವ ಯುವಕರಿಗೆ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತಯಾರು ಮಾಡಲಾಗುತ್ತದೆ. ಹಣದ ಕೊರತೆಯಿಂದ ಕನಸು ಕೈಬಿಡಬೇಕಾದ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಆರು ವರ್ಷಗಳಿಂದ ಈ ತರಬೇತಿ ಉಚಿತವಾಗಿ ನಡೆಯುತ್ತಿದೆ.
ಸದ್ಯ ಐವರು ಯುವತಿಯರೂ ಇಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದಾರೆ. ಅವರಲ್ಲಿ ತೇಜಸ್ವಿನಿ ಜಿನ್ನಪುರ ಕೂಡ ಒಬ್ಬರು.
‘ನಮ್ಮ ಅಂಕಲ್ ನೆರವಿನಿಂದ ನಾನು ಇಲ್ಲಿಗೆ ಬಂದು ಸೇರಿದೆ. ಅಗ್ನಿವೀರ ನೇಮಕಾತಿಗಾಗಿ ತರಬೇತಿ ಪಡೆಯುತ್ತಿದ್ದೇನೆ. ಸೇನೆಗೆ ನೇಮಕವಾಗುವ ಭರವಸೆ ಇದೆ. ಸೇನೆ ಸೇರಲು ಬೇಕಾದ ಎಲ್ಲ ರೀತಿಯ ಮಾರ್ಗದರ್ಶನವನ್ನು ಅಕಾಡೆಮಿಯವರು ಮಾಡುತ್ತಿದ್ದಾರೆ. ತರಬೇತಿ ಕಠಿಣ ಎನಿಸಿದರೂ ನಮ್ಮಲ್ಲಿ ಉತ್ಸಾಹ ತುಂಬುತ್ತಿದ್ದಾರೆ’ ಎನ್ನುತ್ತಾರೆ ತೇಜಸ್ವಿನಿ.
ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆಯುತ್ತಿರುವ ಈ ಉಚಿತ ಸೈನಿಕ ತರಬೇತಿ ಕೇಂದ್ರ, ಸೇನೆ ಮಾತ್ರವಲ್ಲದೆ ವಿವಿಧ ಪೊಲೀಸ್ ನೇಮಕಾತಿಗೂ ಯುವ ಜನತೆಯನ್ನು ಸಿದ್ಧಗೊಳಿಸುತ್ತಿದೆ. ಈಗಾಗಲೇ ಇಲ್ಲಿಂದ ಸುಮಾರು 20 ಮಂದಿ ಸೈನಿಕರಾಗಿ, ಅಗ್ನಿವೀರರಾಗಿ ಆಯ್ಕೆಯಾಗಿ ದೇಶದ ಹಲವೆಡೆ ಸೇವೆ ಸಲ್ಲಿಸುತ್ತಿದ್ದಾರೆ.
ಇಲ್ಲಿನ ತರಬೇತಿಗೆ ಸಮಯವೇ ಮೊದಲ ಶಿಸ್ತು. ಬೆಳಗ್ಗೆ 4.30ಕ್ಕೆ ದೈಹಿಕ ತರಬೇತಿ ಆರಂಭವಾಗುತ್ತದೆ. ಸೇನಾ ರ‍್ಯಾಲಿಯಲ್ಲಿ ನಡೆಯುವ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನೇ ಇಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ಓಟ, ಉದ್ದಜಿಗಿತ, ಝಿಗ್‌ಝಾಗ್ ನಡಿಗೆ ಸೇರಿದಂತೆ ವಿವಿಧ ಕಸರತ್ತುಗಳು ನಡೆಯುತ್ತವೆ. ಬೆಳಗ್ಗೆ 8.30ರವರೆಗೆ ತರಬೇತಿ ಮುಂದುವರಿಯುತ್ತದೆ.
ಸಂಜೆ ಮತ್ತೆ 4ರಿಂದ 6ರವರೆಗೆ ತರಬೇತಿ. ಸೇನಾ ನೇಮಕಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳನ್ನು ಆಯೋಜಿಸಲಾಗುತ್ತದೆ. ಶಾಲಾ–ಕಾಲೇಜುಗಳಲ್ಲಿಯೂ ತರಗತಿಗಳನ್ನು ನಡೆಸಲಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಸೇನಾ ತರಬೇತಿ ಪಡೆದ ಬಳಿಕ ಇವರು ತಮ್ಮ ಕಾಲೇಜುಗಳಿಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸುತ್ತಾರೆ.
ಸೈನಿಕರಾಗಲು ಆಸಕ್ತಿ ಹೊಂದಿರುವವರನ್ನು ಶಾಲಾ–ಕಾಲೇಜುಗಳಿಗೆ ತೆರಳಿ ಆಹ್ವಾನಿಸುವ ಮೂಲಕ ತರಬೇತಿಗೆ ಸೇರಿಸಿಕೊಳ್ಳಲಾಗುತ್ತದೆ. ನೂರಾರು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಾರೆ. ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆಯ ಅರ್ಹತೆಯನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಊಟ ಮತ್ತು ವಸತಿ ಸೇರಿದಂತೆ ತರಬೇತಿ ನೀಡಲಾಗುತ್ತದೆ. ದೇವದುರ್ಗ ತಾಲ್ಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸ್ಥಳೀಯರಾದ ಭಾನುಪ್ರಕಾಶ ಖೇಣೆದ್, ಬಸವರಾಜ ಮನ್ನಾಪುರ, ನಿವೃತ್ತ ಯೋಧ ಪಂಪಣ್ಣ ಅಕ್ಕರಕ್ಕಿ, ಪ್ರೊ. ಸುಭಾಷಚಂದ್ರ ಪಾಟೀಲ್ ಸೇರಿದಂತೆ ಸಮಾನ ಮನಸ್ಕರು ಸೇರಿ ಯುವಜನರ ಭವಿಷ್ಯಕ್ಕಾಗಿ ‘ಸೋಲ್ಜರ್ ಟ್ರೈನಿಂಗ್ ಅಕಾಡೆಮಿ ರಿಯಲ್ ಟ್ರಸ್ಟ್’ (ಸ್ಟಾರ್ಟ್) ಸ್ಥಾಪಿಸಿದ್ದಾರೆ. ಯಾವುದೇ ಲಾಭ ಅಥವಾ ಸ್ವಾರ್ಥದ ಉದ್ದೇಶವಿಲ್ಲದೆ ನಡೆಯುತ್ತಿರುವ ಈ ಸಂಸ್ಥೆಗೆ ಸ್ಥಳೀಯ ವ್ಯಾಪಾರಸ್ಥರು, ಶಿಕ್ಷಣಪ್ರೇಮಿಗಳು ಹಾಗೂ ಇತರ ದಾನಿಗಳು ನೆರವು ನೀಡುತ್ತಿದ್ದಾರೆ.
ಹಿಂದೆ ಜಾಲಿಗಿಡಗಳಿಂದ ತುಂಬಿದ್ದ ದೇವದುರ್ಗದ ಕ್ರೀಡಾಂಗಣವನ್ನು ತರಬೇತಿಗೆ ಬಂದ ಯುವಕರು ಹಾಗೂ ಸ್ಥಳೀಯ ದೈಹಿಕ ಶಿಕ್ಷಕರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಲಾಂಗ್‌ಜಂಪ್ ಪಿಟ್, ಓಟದ ಟ್ರ್ಯಾಕ್ ನಿರ್ಮಿಸಲಾಗಿದೆ. ಡಬಲ್‌ಬಾರ್, ಚಿನ್‌ಅಪ್ ಬಾರ್ ಸೇರಿದಂತೆ ವಿವಿಧ ಕ್ರೀಡಾ ಸಲಕರಣೆಗಳನ್ನು ಅಳವಡಿಸಲಾಗಿದೆ.
ದೈಹಿಕ ತರಬೇತಿಯ ಬಳಿಕ ಲಿಖಿತ ಪರೀಕ್ಷೆಗೂ ಸಿದ್ಧತೆ ಮಾಡಲಾಗುತ್ತದೆ. ನುರಿತ ಶಿಕ್ಷಕರು, ಉಪನ್ಯಾಸಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಚಿತವಾಗಿ ತರಗತಿ ನಡೆಸುತ್ತಾರೆ. ಕೊರೊನಾ ಅವಧಿಯಲ್ಲಿ ಆನ್‌ಲೈನ್ ತರಗತಿಗಳ ಮೂಲಕವೂ ಪರೀಕ್ಷೆಗೆ ತರಬೇತಿ ನೀಡಲಾಗಿತ್ತು.
ಈ ತರಬೇತಿಯ ಹಿಂದೆ ನಿವೃತ್ತ ಯೋಧ ಪಂಪಣ್ಣ ಅಕ್ಕರಕ್ಕಿ ಅವರ ಅನುಭವವೂ ಇದೆ. ಭೂಸೇನೆಯಲ್ಲಿ ಹವಾಲ್ದಾರ್ ಆಗಿ 24 ವರ್ಷ ಸೇವೆ ಸಲ್ಲಿಸಿರುವ ಅವರು, ಗುವಾಹಟಿ, ಅಸ್ಸಾಂ, ದೆಹಲಿ, ಶ್ರೀನಗರ, ಮಧ್ಯಪ್ರದೇಶ, ಕೇರಳ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಫಿಸಿಕಲ್ ಎಫಿಷಿಯನ್ಸಿ ಟ್ರೇನರ್, ಡ್ರಿಲ್ ಇನ್‌ಸ್ಟ್ರಕ್ಟರ್ ಹಾಗೂ ಶಸ್ತ್ರಾಸ್ತ್ರ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಸೇವೆಯಿಂದ ನಿವೃತ್ತರಾದ ಬಳಿಕ ಹಟ್ಟಿ ಚಿನ್ನದ ಗಣಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೇನೆಯಲ್ಲಿ ಕಲಿತ ಕೌಶಲಗಳು ತಮ್ಮಲ್ಲಷ್ಟೇ ಉಳಿಯಬಾರದು ಎಂಬ ಆಲೋಚನೆ ಅವರನ್ನು ಇಲ್ಲಿಗೆ ಕರೆತಂದಿತು.
‘ನಮ್ಮ ಭಾಗದ ಯುವಜನತೆ ಯಾವುದಕ್ಕೂ ಕಡಿಮೆ ಇಲ್ಲ. ಅವರಿಗೆ ಮಾರ್ಗದರ್ಶನದ ಕೊರತೆಯಿದೆ ಅಷ್ಟೆ. ನಾನು ದೇಶ ಸೇವೆ ಸಲ್ಲಿಸಿದ ನಂತರ ನನ್ನ ಅನುಭವದ ಆಧಾರದ ಮೇಲೆ ಯುವಕ, ಯುವತಿಯರಿಗೆ ಉಚಿತವಾಗಿ ಸೇನಾ ತರಬೇತಿ ನೀಡಲು ಮುಂದಾದೆ. ನನ್ನಲ್ಲಿರುವ ಕೌಶಲಗಳು ವ್ಯರ್ಥವಾಗದೆ ಯುವಜನತೆಗೆ ಧಾರೆ ಎರೆಯಬೇಕು. ಅವರೂ ದೇಶ ಸೇವೆ ಮಾಡಲು ಅರ್ಹರಾಗಬೇಕು ಎಂಬುದು ನನ್ನ ಉದ್ದೇಶ’ ಎನ್ನುತ್ತಾರೆ ಪಂಪಣ್ಣ.
‘ಸೈನಿಕನಾಗಬೇಕು’ ಎಂಬ ಕನಸು ಹೊತ್ತಿರುವ ರಮೇಶ ಚಿಕ್ಕಹೊನ್ನಕುಣಿ ಅವರಿಗೂ ಈ ಕ್ರೀಡಾಂಗಣವೇ ಈಗ ನಿತ್ಯದ ಪಾಠಶಾಲೆ.
‘ಈ ಹಿಂದೆ ಇಲ್ಲಿ ತರಬೇತಿ ಪಡೆದು ಸೇನೆ ಸೇರಿದ ನಮ್ಮೂರಿನವರಿಂದ ಪ್ರೇರಣೆಯಾಗಿ ನಾನು ಇಲ್ಲಿ ಬಂದು ಸೇರಿದ್ದೇನೆ. ಸೇನೆಯಲ್ಲಿ ಇರುವ ತರಬೇತಿಯನ್ನೇ ಇಲ್ಲಿ ನಮಗೆ ನೀಡಲಾಗುತ್ತಿದೆ. ನಿಗದಿತ ವೇಳಾಪಟ್ಟಿಯಂತೆ ಶಿಸ್ತಿನಿಂದ ತರಬೇತಿ ಕೊಡುತ್ತಿದ್ದಾರೆ. ನಮ್ಮಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಇದರಿಂದ ಆತ್ಮವಿಶ್ವಾಸ ಬಂದಿದೆ’ ಎನ್ನುತ್ತಾರೆ ಅವರು.
ಈ ತರಬೇತಿ ಕೇಂದ್ರದ ಮೂಲಕ ಸೇನೆ ಸೇರಿದವರಲ್ಲಿ ಶಹಾಪುರದ ಭೀಮರೆಡ್ಡಿ ಗೋಗಿ ಕೂಡ ಒಬ್ಬರು. ಸೇನೆ ಸೇರಬೇಕೆಂಬ ಆಸೆ ಹೊಂದಿದ್ದ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ದೇವದುರ್ಗದ ಉಚಿತ ತರಬೇತಿ ಕೇಂದ್ರದ ಮಾಹಿತಿ ಸಿಕ್ಕಿತು. ಇಲ್ಲಿಗೆ ಬಂದು ದೈಹಿಕ ಹಾಗೂ ಲಿಖಿತ ಪರೀಕ್ಷೆಗೆ ಸಿದ್ಧರಾದರು. 2023–24ರಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಅವರು ಈಗ ಲಡಾಖ್‌ನ ಲೇಹ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
‘ಸೇನೆ ಸೇರಬೇಕೆಂಬ ಮಹತ್ವಾಕಾಂಕ್ಷೆ ನನ್ನಲ್ಲಿತ್ತು. ಇಲ್ಲಿಗೆ ಬಂದು ದೈಹಿಕ, ಲಿಖಿತ ಪರೀಕ್ಷೆಗಳ ಮಾರ್ಗದರ್ಶನ ಪಡೆದೆ. ಸೇನೆಗೆ ಬೇಕಾದ ದೈಹಿಕ ತರಬೇತಿಯನ್ನು ಇಲ್ಲಿ ಚಾಚೂ ತಪ್ಪದೆ ಮಾಡಿಸುತ್ತಾರೆ. ಕಠಿಣವಾದ ತರಬೇತಿಯೇ ಆಯ್ಕೆಗೆ ಅನುಕೂಲವಾಯಿತು. ನಿರಂತರ ಪರಿಶ್ರಮದಿಂದ ಅಗ್ನಿವೀರನಾಗಿ ಆಯ್ಕೆಯಾದೆ’ ಎನ್ನುತ್ತಾರೆ ಭೀಮರೆಡ್ಡಿ.
ಇವರಂತೆ ಇಲ್ಲಿ ತರಬೇತಿ ಪಡೆದು ಸೇನೆ ಸೇರಿದ ಹಲವರು ಈಗ ಅಕಾಡೆಮಿಗೆ ತಮಗಾದಷ್ಟು ತನು, ಮನ, ಧನದಿಂದ ನೆರವು ನೀಡುತ್ತಿದ್ದಾರೆ.
ಸೈನಿಕರಾಗಲು ತರಬೇತಿ ಪಡೆಯುವ ಯುವಕರು ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶವೂ ಸಂಸ್ಥೆಗಿದೆ. ಪ್ರತೀ ಭಾನುವಾರ ಸ್ವಚ್ಛತಾ ಅಭಿಯಾನ, ಸಸಿ ನೆಡುವುದು ಮತ್ತು ಅವುಗಳ ಪೋಷಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಲಾಗುತ್ತದೆ.
ಜಾಲಿಗಿಡಗಳಿಂದ ತುಂಬಿ ಅನುಪಯುಕ್ತವಾಗಿದ್ದ ಉದ್ಯಾನದ ಜಾಗವನ್ನು ಯುವಕರೇ ಸ್ವಚ್ಛಗೊಳಿಸಿ ‘ಸೈನಿಕ ಉದ್ಯಾನ’ ಎಂದು ನಾಮಕರಣ ಮಾಡಿದ್ದಾರೆ. ತರಬೇತಿ ಎಂದರೆ ಕೇವಲ ಓಟ, ಜಿಗಿತ, ಪುಲ್‌ಅಪ್‌ಗಳಲ್ಲ; ಸಮಾಜದ ಬಗ್ಗೆ ಹೊಣೆಗಾರಿಕೆಯನ್ನೂ ಬೆಳೆಸಿಕೊಳ್ಳುವುದು ಎಂಬುದನ್ನು ಈ ಚಟುವಟಿಕೆಗಳು ಹೇಳುತ್ತವೆ.
ತರಬೇತಿಗೆ ಆಯ್ಕೆಯಾದವರು ಮಧ್ಯದಲ್ಲೇ ತರಬೇತಿ ಬಿಟ್ಟು ಹೋಗದಂತೆ ₹2 ಸಾವಿರ ಠೇವಣಿ ಪಡೆಯಲಾಗುತ್ತದೆ. ತರಬೇತಿ ಪೂರ್ಣಗೊಳಿಸಿ ಸೇನಾ ರ‍್ಯಾಲಿಗೆ ತೆರಳುವ ಸಂದರ್ಭದಲ್ಲಿ ಆ ಹಣವನ್ನು ಹಿಂದಿರುಗಿಸಲಾಗುತ್ತದೆ. ಕರ್ನಾಟಕದ ಯಾವುದೇ ಭಾಗದಿಂದ ಯುವಕರು ಇಲ್ಲಿಗೆ ಬಂದು ತರಬೇತಿ ಪಡೆಯಬಹುದಾಗಿದೆ.
ದೇವದುರ್ಗದಂತಹ ಪ್ರದೇಶದಲ್ಲಿ ಸೇನೆ ಸೇರುವ ಕನಸು ಕಾಣುವ ಯುವಕರಿಗೆ ಈ ಕ್ರೀಡಾಂಗಣ ಈಗ ಕೇವಲ ಕ್ರೀಡಾಂಗಣವಾಗಿ ಉಳಿದಿಲ್ಲ. ಬೆಳಗ್ಗೆ 4.30ಕ್ಕೆ ಆರಂಭವಾಗುವ ಓಟ, ಜಿಗಿತ, ಕಸರತ್ತುಗಳ ನಡುವೆ ಸಮವಸ್ತ್ರ ತೊಡುವ ಕನಸುಗಳು ಗಟ್ಟಿಯಾಗುತ್ತಿವೆ. ಆ ಕನಸುಗಳಿಗೆ ದೈಹಿಕ ಪರಿಶ್ರಮದ ಜತೆಗೆ ಮಾರ್ಗದರ್ಶನವೂ ಸಿಗುತ್ತಿದೆ.