
ಹೊಳಲ್ಕೆರೆ: ಸಾವಯವ ಕೃಷಿಯಿಂದ ಬೆಳೆದ ರಾಗಿ ಖರೀದಿ
ಹೊಳಲ್ಕೆರೆ: ‘ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮುದ್ದೇನಹಳ್ಳಿಯ ಸತ್ಯಸಾಯಿ ಸಂಸ್ಥೆಯಿಂದ ಉಚಿತವಾಗಿ ರಾಗಿ ಮಾಲ್ಟ್ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಸಾವಯವ ಕೃಷಿಯಿಂದ ಬೆಳೆದ ರಾಗಿ ಖರೀದಿ ಮಾಡಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಗೋವಿಂದರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ ಸಂಸ್ಥೆಗೆ ಶನಿವಾರ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮ ಮತ್ತು ಸುಭೀಕ್ಷ ಆರ್ಗ್ಯಾನಿಕ್ ಫಾರ್ಮರ್ಸ್ ವಿವಿಧೋದ್ದೇಶ ಸಹಕಾರ ಸೊಸೈಟಿಯ ಅಧ್ಯಕ್ಷರು, ಸಿಇಒ, ನಿರ್ದೇಶಕರು ಮತ್ತು ರೈತರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘2025-26ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ 1 ಕೋಟಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಉಚಿತವಾಗಿ ರಾಗಿ ಮಾಲ್ಟ್ ನೀಡಲಾಗಿದೆ. ಈ ವರ್ಷ ದೇಶದಾದ್ಯಂತ ಅಂದಾಜು 6 ಕೋಟಿ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ನೀಡುವುದು ಸತ್ಯಸಾಯಿ ಆಶ್ರಮದ ಮುಖ್ಯಸ್ಥ ಮಧುಸೂದನ್ ಸಾಯಿ ಅವರ ಆಶಯವಾಗಿದೆ. ಸಾವಯವ ಕೃಷಿಯಿಂದ ಬೆಳೆದ ರಾಗಿಯನ್ನೇ ಖರೀದಿಸಲು ಅವರು ತೀರ್ಮಾನಿಸಿದ್ದಾರೆ. ಇಲ್ಲಿನ ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ ಕಂಪನಿ ಸಾವಯವ ಗೊಬ್ಬರದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಇಲ್ಲಿನ ಗೊಬ್ಬರ ಖರೀದಿಸಿ ರಾಗಿ ಬೆಳೆದ ರೈತರನ್ನು ಸಂಪರ್ಕಿಸಿ ರಾಗಿ ಖರೀದಿಸಲಾಗುವುದು’ ಎಂದರು.
‘ನಮ್ಮ ಕಂಪನಿಯು ಕೇವಲ ವ್ಯಾಪಾರದ ದೃಷ್ಟಿಯಿಂದ ಸ್ಥಾಪನೆಯಾಗಿಲ್ಲ. ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿ ಮುಖ್ಯವಾಗಿದೆ. ಸಾವಯವ ಕೃಷಿಯ ಮೂಲಕ ಮಣ್ಣಿನ ಫಲವತ್ತತೆ ಕಾಪಾಡುವುದು, ಮಣ್ಣಿನಲ್ಲಿನ ಸಾವಯವ ಅಂಶವನ್ನು ಹೆಚ್ಚಿಸುವುದು, ಪರಿಸರ ಸಂರಕ್ಷಣೆ ಹಾಗೂ ರೈತರ ಕೃಷಿ ವೆಚ್ಚ ಕಡಿಮೆ ಮಾಡುವ ಉದ್ದೇಶ ಕಂಪನಿಗೆ ಇದೆ’ ಎಂದು ಅಮೃತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ನಾಗರಾಜ್ ತಿಳಿಸಿದರು.
ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಜಿ.ಆನಂದ್, ಅಮೃತ್ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಲಾಷ್, ತಾಂತ್ರಿಕ ಸಲಹೆಗಾರ ಪರಮೇಶ್, ಮುದ್ದೇನಹಳ್ಳಿಯ ಸುಭೀಕ್ಷ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿ ಕೋ ಆಪರೇಟಿವ್ ಸೊಸೈಟಿಯ ಸಿಇಒ ಭರಣಿ, ಸೊಸೈಟಿಯ 15 ತಾಲ್ಲೂಕಿನ ನಿರ್ದೇಶಕರು ಮತ್ತು ರೈತರು ಇದ್ದರು.