
‘ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ’ – ಡಿಜೆ ನಿಷೇಧ, ಸ್ಪೀಕರ್ ಬಳಕೆಗೆ ಸೂಚನೆ
ಸುರಪುರ: ‘ಗೌರಿ ಗಣೇಶ ಹಬ್ಬವನ್ನು ಶಾಂತಿ, ಸೌರ್ಹಾದದಿಂದ ಆಚರಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು
ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸುಪ್ರೀಂ ಕೋರ್ಟ್ ಆದೇಶದಂತೆ ಈ ಬಾರಿ ಡಿಜೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡಿಜೆಯಿಂದ ಹೃದಯ ಕಾಯಿಲೆ ಇದ್ದವರು, ವೃದ್ಧರು, ಗರ್ಭಿಣಿಯರು, ಮಕ್ಕಳು, ಹಳೆ ಕಟ್ಟಡಗಳಲ್ಲಿ ವಾಸಿಸುವ ಬಡವರಿಗೆ ತೊಂದರೆ ಆಗಲಿದೆ’ ಎಂದರು.
‘ಈಗಾಗಲೇ ಯಾದಗಿರಿಯಲ್ಲಿ 15 ಮತ್ತು ಶಹಾಪುರದಲ್ಲಿ 10 ಗಣೇಶ ಮಂಡಳಿಗಳು ಡಿಜೆ ಸೌಂಡ್ ಬಳಕೆ ಕೈ ಬಿಡುವುದಾಗಿ ಲಿಖಿತ ಭರವಸೆ ನೀಡಿವೆ. ಸ್ಪೀಕರ್ ಬಳಸಲು ಮುಂದೆ ಬಂದಿವೆ. ಸೌಹಾರ್ದಕ್ಕೆ ಮೊದಲಿನಿಂದಲೂ ಸುರಪುರ ಹೆಸರುವಾಸಿ. ಆದ್ದರಿಂದ ಇಲ್ಲಿಯೂ ಕೂಡಾ ಡಿಜೆ ಕೈ ಬಿಡಬೇಕು. ಸರಳವಾಗಿ ಸ್ಪೀಕರ್ ಬಳಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‍ಪಿ ಜಾವೇದ್ ಇನಾಂದಾರ ಮಾತನಾಡಿ, ‘ಡಿಜೆ ಸೌಂಡ್‍ಗೆ ಖರ್ಚು ಮಾಡುವ ಬದಲು ಸಮಾಜಮುಖಿ ಚಟುವಟಿಕೆ ಆಯೋಜನೆಗೆ ಖರ್ಚು ಮಾಡಿ. ಅನ್ನ ದಾಸೋಹ, ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಬೇಕು. ಮಕ್ಕಳಿಗೆ ಉತ್ತೇಜನ ನೀಡಲು ಲೇಖನ, ಭಾಷಣ, ರಂಗೋಲಿ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು’ ಎಂದು ಕಿವಿ ಮಾತು ಹೇಳಿದರು.
‘ಗಣೇಶ ವಿಸರ್ಜನೆ ಸಂದರ್ಭ ಭಜನೆ, ಲೇಜಿಮ್, ಮಲ್ಲಕಂಬ ಏರ್ಪಡಿಸಿದಲ್ಲಿ ಸಾರ್ವಜನಿಕರು ಇಷ್ಟ ಪಡುತ್ತಾರೆ. ದಾರಿ ಉದ್ದಗಲಕ್ಕೂ ನಿಂತು ನೋಡುತ್ತಾರೆ. ಜನ ಹರ್ಷ ಪಡುತ್ತಾರೆ’ ಎಂದರು.
ಪಿಐ ಉಮೇಶ ನಾಯಕ ಮಾತನಾಡಿದರು. ವೆಂಕಟೇಶ ಬೇಟೆಗಾರ, ಶರಣು ನಾಯಕ, ವಿಷ್ಣು ಗುತ್ತೇದಾರ, ಹಣಮಂತ ಕಟ್ಟಿಮನಿ, ವೆಂಕಟೇಶ ನಾಯಕ ಬೈರಿಮಡ್ಡಿ ಸೇರಿದಂತೆ ಇತರರು ಸಲಹೆ ನೀಡಿದರು.
ನಾಗರಾಜ ನಾಯಕ ಪ್ಯಾಪಲಿ, ಭೀಮು ನಾಯಕ ಮಲ್ಲಿಭಾವಿ, ಶಿವಲಿಂಗ ಹಸನಾಪುರ, ಸಂಗನಗೌಡ ಕೋನ್ಹಾಳ, ಮಲ್ಲಿಕಾರ್ಜುನ ಮಹೇಂದ್ರಕರ್ ಸೇರಿದಂತೆ ಇತರರಿದ್ದರು.