ಮಳವಳ್ಳಿ: ಪೂರಿಗಾಲಿ ಯೋಜನೆಯಿಂದ ಕೆರೆ-ಕಟ್ಟೆಗಳಿಗೆ ಜೀವ

ಮಳವಳ್ಳಿ: ಪೂರಿಗಾಲಿ ಯೋಜನೆಯಿಂದ ಕೆರೆ-ಕಟ್ಟೆಗಳಿಗೆ ಜೀವ

ಮಳವಳ್ಳಿ: ಪೂರಿಗಾಲಿ ಯೋಜನೆಯಿಂದ ಕೆರೆ-ಕಟ್ಟೆಗಳಿಗೆ ಜೀವ

ಮಳವಳ್ಳಿ: ಮಳೆ ಕೊರತೆಯಿಂದಾಗಿ ಅಂತರ್ಜಲ ಕುಸಿತ ಹಾಗೂ ಬರಗಾಲದ ಆತಂಕದಲ್ಲಿದ್ದ ತಾಲ್ಲೂಕಿನ ಬೊಪ್ಪೇಗೌಡನಪುರ(ಬಿ.ಜಿ.ಪುರ) ಹೋಬಳಿಗೆ ಕಳೆದೊಂದು ವರ್ಷದಿಂದ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ನೀರು ಆಸರೆಯಾಗಿದೆ.

ಸುಮಾರು ₹593 ಕೋಟಿ ವೆಚ್ಚದಲ್ಲಿ 2017ರಲ್ಲಿ ಆರಂಭವಾದ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ವ್ಯಾಪ್ತಿಗೆ ಸುಮಾರು 25 ಸಾವಿರ ಎಕರೆ ಭೂಮಿ ಒಳಪಟ್ಟುತ್ತದೆ. ಅಲ್ಲದೇ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಈಗಾಗಲೇ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಯಾಗಬೇಕಿದೆ. ಅಲ್ಲದೇ ಹಲವೆಡೆ ರೈತರ ಜಮೀನುಗಳಿಗೆ ನೀರು ನೀಡಲಾಗುತ್ತಿದ್ದು, ರೈತರು ವಿವಿಧ ಬೆಳೆಗಳನ್ನು ಹಾಕುತ್ತಿದ್ದಾರೆ.

ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ಬೊಪ್ಪೇಗೌಡನಪುರ ಹೋಬಳಿಯ ಹಲವು ಕೆರೆಗಳಿಗೆ ಯೋಜನೆಯಡಿ ನೀರು ಹರಿಸಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ರೈತರು ಸಂತಸದಲ್ಲಿದ್ದರೆ, ಜಾನುವಾರುಗಳಿಗೆ ಕುಡಿಯುವ ನೀರಿನ ಬರ ತಗ್ಗುವ ಜೊತೆಗೆ ಅಂತರ್ಜಲ ಮಟ್ಟ ಏರಿಕೆಯಾಗುವ ನಿರೀಕ್ಷೆಯಿಂದ ರೈತರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಹಲವೆಡೆ ಬತ್ತಿಹೋಗಿದ್ದ ಕೊಳವೆಬಾವಿಗಳಿಗೆ ಮರುಜೀವ ಸಿಕ್ಕಂತಾಗಿದೆ.

ಬೊಪ್ಪೇಗೌಡನಪುರ ಹೋಬಳಿ ವ್ಯಾಪ್ತಿಯ ಅವ್ವೇರಹಳ್ಳಿ, ನಲ್ಲಿಗೆರೆ, ದೊಡ್ಡಬೂವಹಳ್ಳಿ, ಕಗ್ಗಳಕೆರೆ, ಕ್ಯಾತನಹಳ್ಳಿ, ಕದಬಳ್ಳಿ, ಕುಂದೂರು, ತೆಂಕಹಳ್ಳಿ, ಬಿ.ಜಿ. ಪುರ, ದೊಡ್ಡಮ್ಮತಾಯಿ, ಚೊಟ್ಟನಹಳ್ಳಿ, ದಾಸನದೊಡ್ಡಿ, ಬದನಗೇರಿ, ಶಿರಮಹಳ್ಳಿ, ನಾರಾಯಣಪುರ ಹಾಗೂ ಪಂಡಿತಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಕೆರೆಗಳಲ್ಲಿ ಶೇ 90ಕ್ಕಿಂತಲೂ ಹೆಚ್ಚಿನ ನೀರು ಸಂಗ್ರಹಿಸಲಾಗಿದೆ. ಉಳಿದ ಕೆರೆಗಳಲ್ಲಿ ಶೇ 75ರಷ್ಟು ನೀರನ್ನು ಕಾಯ್ದುಕೊಳ್ಳಲಾಗಿದೆ. ಇದರಿಂದ ಅಕ್ಕಪಕ್ಕದ ಬೋರ್‌ವೆಲ್‌ಗಳಲ್ಲಿನ ಅಂತರ್ಜಲದ ಮಟ್ಟ ಹೆಚ್ಚುತ್ತಲಿದೆ.

‘ಯೋಜನೆಯ ವ್ಯಾಪ್ತಿಯ ಅಲ್ಲದೇ ದ್ಯಾವಪಟ್ಟಣ, ಕಲ್ಯಾಣಿಕೊಪ್ಪಲು, ಮಲಿಯೂರು, ತಿಗಡಹಳ್ಳಿ, ಕಗ್ಗಳ, ಹೆಬ್ಬಣಿ, ಕೆಂಚನದೊಡ್ಡಿ, ರಾವಣಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ಬಿ.ಜಿ. ಪುರ ಹೋಬಳಿ ಎಂದರೆ ಬರಪ್ರದೇಶ ಎಂಬಂತಿದ್ದ ನಮ್ಮ ಭಾಗಕ್ಕೆ ಪೂರಿಗಾಲಿ ಹನಿ ನೀರಾವರಿ ಯೋಜನೆಯ ಮೂಲಕ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೊಸ ಕಾಯಕಲ್ಪ ನೀಡುತ್ತಿದ್ದಾರೆ’ ಎನ್ನುತ್ತಾರೆ ಮುಟ್ಟನಹಳ್ಳಿಯ ರೈತ ಸಿದ್ದಪ್ಪ.

ಯೋಜನೆಯ ವ್ಯಾಪ್ತಿಯಲ್ಲಿನ ಎಲ್ಲ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ರೈತರ ಅಗತ್ಯಕ್ಕೆ ಅನುಗುಣವಾಗಿ ನೀರು ಒದಗಿಸಲಾಗುತ್ತದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.

‘ಬಿ.ಜಿ. ಪುರ ಹೋಬಳಿ ರೈತರ ಬಹು ನಿರೀಕ್ಷಿತ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯಿಂದ ಈ ಬರಗಾಲದಲ್ಲಿಯೂ ಹೋಬಳಿಯ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಅಂತರ್ಜಲ ಹೆಚ್ಚಿದ್ದು, ಕೊಳವೆ ಬಾವಿ ಹೊಂದಿರುವ ರೈತರಿಗೆ ಅನುಕೂಲವಾಗಿದೆ. ಆದರೆ ಕೆರೆಗಳಲ್ಲಿ ಹೂಳು ತುಂಬಿರುವುದರ ಜೊತೆಗೆ ಗಿಡಗಂಟಿಗಳು ಬೆಳೆದು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವುದರಿಂದ ಅವುಗಳ ಅಭಿವೃದ್ಧಿಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಗಮನ ಹರಿಸಲಿ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಎನ್.ಲಿಂಗರಾಜಮೂರ್ತಿ ಒತ್ತಾಯಿಸಿದರು.

ಮಳೆ ಇಲ್ಲದೇ ಅಂತರ್ಜಲ ಕುಸಿಯುತ್ತಿದ್ದು, ತಾಲ್ಲೂಕಿನಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಕಾಡದಂತೆ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಲಾಗಿದೆ. ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಹಲವು ರೈತರ ಜಮೀನುಗಳಿಗೆ ನೀರು ಒದಗಿಸಲಾಗುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾಲನೆ ದೊರೆಯಲಿದೆ. ನೀರಿನ ಬಳಕೆಯ ಬಗ್ಗೆ ಜನರು ಜಾಗೃತಿ ವಹಿಸಬೇಕು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ