
ಬಿಜೆಪಿ ಅಪ್ಪ, ಮಕ್ಕಳ ಪಕ್ಷ: ರಾಜೀನಾಮೆಗೆ ಕಾರಣ ತಿಳಿಸಿದ ನರೇಂದ್ರ ಬಾಬು
ಬೆಂಗಳೂರು: ‘ಬಿಜೆಪಿ ಅಪ್ಪ, ಮಕ್ಕಳ ಪಕ್ಷವಾಗಿದ್ದು, ಅಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ನೆಲೆ ಇಲ್ಲ. ಹೀಗಾಗಿ, ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೆ.13ರಂದು ಸೇರಿಕೊಳ್ಳುತ್ತಿದ್ದೇನೆ’ ಎಂದು ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಹೇಳಿದರು.
‘ಮಹಾನಗರ ಪಾಲಿಕೆ ಸದಸ್ಯನಾಗಿ ಮೂರು ಬಾರಿ ಮತ್ತು ಎರಡು ಬಾರಿ ಶಾಸಕನಾಗಿ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. 10 ವರ್ಷಗಳಿಂದ ಬಿಜೆಪಿಗೆ ನನ್ನನ್ನು ಸಮರ್ಪಿಸಿಕೊಂಡೆ. ಅದರೆ ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರನ್ನು ನನ್ನಿಂದ ದೂರ ಮಾಡಿದರು. ನನ್ನ ವಿರುದ್ದ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸುರೇಶ್ ಕುಮಾರ್, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಗೋಪಾಲಯ್ಯ ಪರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ನನ್ನನ್ನು ನಿರ್ಲಕ್ಷಿಸಿದರು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಗೋಪಾಲಯ್ಯ ಸೇರಿದಂತೆ 17 ಮಂದಿ ಶಾಸಕರು ಬಿಜೆಪಿ ಸೇರಿದಾಗ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಉಪ ಚುನಾವಣೆಯಲ್ಲಿ ನೀವು ಸಹಕಾರ ನೀಡಬೇಕು ಎಂದು ಅಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಆರ್.ಎಸ್.ಎಸ್ ಮುಖಂಡ ಬಿ.ಎಲ್. ಸಂತೋಷ್ ಹೇಳಿದ್ದರು. ಪಕ್ಷಕ್ಕಾಗಿ ತ್ಯಾಗ ಮಾಡಿದ ತಮಗೆ ನಂತರ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಕುರುಡು, ಜಾಣ ಮೌನ ವಹಿಸಿದರು. ಸರ್ಕಾರ ಬಂದ ಮೇಲೆ ನನ್ನ ಕಡೆ ನೋಡಲಿಲ್ಲ. ಕೆಲಸ ಮಾಡುವವರಿಗೆ ಬಿಜೆಪಿಯಲ್ಲಿ ಬೆಲೆಯಿಲ್ಲ. ಹಿಂಬಾಲಕರಿಗೆ ಮಾತ್ರ ಅವಕಾಶ’ ಎಂದು ಕಿಡಿಕಾರಿದರು.
ಈ ಹಿಂದೆ, ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ನರೇಂದ್ರ ಬಾಬು, ಬಿಜೆಪಿಯ ಹಿಂದುಳಿದ ವರ್ಗದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದರು.