ಕ್ರಮಕೈಗೊಳ್ಳಲು ಬೇಕು ಇನ್ನೆಷ್ಟು ದಿನ: ಆನೆಕಾಡು ರಸ್ತೆ ಸುಧಾರಿಸಲು ಪತ್ರ

ಕ್ರಮಕೈಗೊಳ್ಳಲು ಬೇಕು ಇನ್ನೆಷ್ಟು ದಿನ: ಆನೆಕಾಡು ರಸ್ತೆ ಸುಧಾರಿಸಲು ಪತ್ರ

ಕ್ರಮಕೈಗೊಳ್ಳಲು ಬೇಕು ಇನ್ನೆಷ್ಟು ದಿನ: ಆನೆಕಾಡು ರಸ್ತೆ ಸುಧಾರಿಸಲು ಪತ್ರ

ಮಡಿಕೇರಿ: ಸುತ್ತಲೂ ಕಾರ್ಗತ್ತಲು, ಯಾವುದೇ ರಸ್ತೆ ಉಬ್ಬುಗಳಿಲ್ಲ, ಪ್ರತಿಫಲಕಗಳೂ ಇಲ್ಲ, ನೇರವಾದ ರಸ್ತೆಯಲ್ಲಿ ಸಾಗುತ್ತಿದ್ದರೆ ಎದುರಿನಿಂದ ಬರುವ ವಾಹನಗಳ ಪ್ರಖರ ದೀಪದ ಬೆಳಕಿಗೆ ಏನೂ ಕಾಣಿಸದ ಸ್ಥಿತಿ ಇಲ್ಲಿನ ಕುಶಾಲನಗರ ತಾಲ್ಲೂಕಿನ ಆನೆಕಾಡುವಿನ 5 ಕಿ.ಮೀ ರಸ್ತೆಯಲ್ಲಿದೆ. ಇದು ಬೆಂಗಳೂರಿನಿಂದ ಬಂಟ್ವಾಳದವರೆಗಿನ ರಾಷ್ಟ್ರೀಯ ಹೆದ್ದಾರಿ 275. ಇಲ್ಲಿ ಸಾಕಷ್ಟು ಅ‍ಪಘಾತಗಳು ಪದೇ ಪದೇ ಸಂಭವಿಸಿವೆ. ಇದನ್ನು ತಡೆಯಲು ಅಪಘಾತ ಸಂಭವಿಸುವ ಭಾಗಗಳಲ್ಲಿ ರಸ್ತೆ ವಿಸ್ತರಣೆ, ನಿರ್ವಹಣೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಾದಿಯನ್ನು ಈಗಾಗಲೇ ಪೊಲೀಸರು ‘ಬ್ಲಾಕ್ ಸ್ಪಾಟ್’ ಎಂದು ಪರಿಗಣಿಸಿದ್ದಾರೆ. ಇಲ್ಲಿ ವೇಗಮಿತಿಯನ್ನು 65 ಕಿ.ಮೀಗೆ ನಿಗದಿಪಡಿಸಿ ಫಲಕ ಹಾಕಿದ್ದಾರೆ. ಜೊತೆಗೆ, ಅಪಘಾತ ವಲಯ ಎಂಬ ಫಲಕವೂ ಇದೆ. ಹೀಗಿದ್ದರೂ ಇಲ್ಲಿ ಅಪಘಾತ ಸಂಭವಿಸುವುದು ನಿಯಂತ್ರಣಕ್ಕೆ ಬಂದಿಲ್ಲ.

ತಿರುವುಗಳು ಮುಗಿದ ನಂತರ ಸಿಗುವ ಈ ನೇರ ರಸ್ತೆಯಲ್ಲಿ ಬಹುತೇಕ ಎಲ್ಲ ವಾಹನ ಚಾಲಕರು ವೇಗವನ್ನು ಹೆಚ್ಚಿಸುತ್ತಾರೆ. ಆಗ ಕೆಲವೊಮ್ಮೆ ವಾಹನಗಳು ಚಾಲಕನ ನಿಯಂತ್ರಣ ತಪ್ಪುತ್ತದೆ.

ಇಲ್ಲಿ ಕನಿಷ್ಠ ಒಂದಾದರೂ ರಸ್ತೆ ಉಬ್ಬು ಹಾಕಿದರೆ ಚಾಲಕರು ವಾಹನಗಳ ವೇಗವನ್ನು ನಿಯಂತ್ರಿಸುತ್ತಾರೆ. ಆದರೆ, ಇಲ್ಲಿ ಎಲ್ಲೂ ಸಹ ಒಂದೂ ರಸ್ತೆ ಉಬ್ಬು ಇಲ್ಲದೇ ಇರುವುದು ಅಪಘಾತಕ್ಕೆ ಕಾರಣ ಎಂದು ಬಹುತೇಕ ಮಂದಿ ಅಭಿಪ್ರಾಯಪಡುತ್ತಾರೆ. ಈ ಕುರಿತು ಪೊಲೀಸರು ಸಾಕಷ್ಟು ಪತ್ರಗಳನ್ನು ರಾಷ್ಟ್ರೀಯ ಹೆದ್ದಾರಿ ಕಚೇರಿಗೂ ಪತ್ರ ಬರೆದಿದ್ದಾರೆ.

ಆದರೆ, ಈ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆಯಾಗಿರುವುದರಿಂದ ಇಲ್ಲಿ ರಸ್ತೆ ಉಬ್ಬು ನಿರ್ಮಿಸಲು ಆಗದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾತು. ರಸ್ತೆ ಉಬ್ಬು ನಿರ್ಮಿಸದೇ ಹೋದರೂ, ಇಲ್ಲಿ ವೇಗಗಳನ್ನು ಕಡಿಮೆ ಮಾಡಲು ಅನ್ಯ ಕ್ರಮಗಳನ್ನಾದರೂ ಕೈಗೊಳ್ಳಬೇಕಿದೆ.

ರಸ್ತೆ ಮಧ್ಯೆ ದೊಡ್ಡದಾಗಿ ಬಿಳಿಪಟ್ಟೆಗಳನ್ನು ಬಳಿದು, ಅದರಲ್ಲಿ ‘ರಂಬಲ್ ಸ್ಟ್ರೀಪ್‌’ನಂತಹ ವೇಗ ನಿಯಂತ್ರಕಗಳನ್ನಾದರೂ ಇಲ್ಲಿ ಹಾಕಬಹುದು. ಇದರ ಮೇಲೆ ವಾಹನಗಳು ಚಲಿಸಿದಾಗ ಚಾಲಕನಿಗೆ ಒಂದು ರೀತಿಯ ಕಂಪನ ಮತ್ತು ವಿಶಿಷ್ಟವಾದ ಶಬ್ದ ಕೇಳಿಸುತ್ತದೆ. ಇದರಿಂದ ತಕ್ಕಮಟ್ಟಿಗಾದರೂ ವೇಗ ಕಡಿಮೆಯಾಗುತ್ತದೆ. ಜೊತೆಗೆ, ಒಂದು ವಿಧದ ಎಚ್ಚರಿಕೆ ಮೂಡುತ್ತದೆ.

ರಸ್ತೆ ಬದಿಗೆ ಮತ್ತು ರಸ್ತೆ ಮಧ್ಯೆ ಇರುವ ‘ಕ್ಯಾಟ್ ಐಸ್’ಗಳು (ಪ್ರತಿಫಲಕ) ತಮ್ಮ ಕ್ಷಮತೆಯನ್ನು ಕಳೆದು ಕೊಂಡಿವೆ. ಹಲವೆಡೆ ಇಲ್ಲ. ಇವುಗಳನ್ನು ಅಳವಡಿಸಿದರೆ ರಾತ್ರಿಯಲ್ಲಿ ಬೆಕ್ಕಿನ ಕಣ್ಣುಗಳ ಮೇಲೆ ಬೆಳಕು ಬಿದ್ದಾಗ ಅವು ಹೇಗೆ ಹೊಳೆಯುತ್ತವೆಯೋ, ಅದೇ ರೀತಿ ವಾಹನಗಳ ಹೆಡ್‌ಲೈಟ್ ಬೆಳಕು ಇವುಗಳ ಮೇಲೆ ಬಿದ್ದಾಗ ಇವು ಪ್ರಕಾಶಮಾನವಾಗಿ ಪ್ರತಿಫಲಿಸುತ್ತವೆ. ಇವುಗಳಿಂದ ಇನ್ನಷ್ಟು ನಿಖರವಾಗಿ ದಾರಿಯನ್ನು ಗುರುತಿಸಬಹುದು. ವಾಹನಗಳನ್ನು ಹಿಂದಿಕ್ಕುವಾಗ ಇನ್ನಷ್ಟು ಎಚ್ಚರಿಕೆ ಮೂಡುತ್ತದೆ. ಅಲ್ಲಲ್ಲಿ ಪ್ರಖರ ದೀಪಗಳನ್ನಾದರೂ ಅಳವಡಿಸಿದರೆ ತಿರುವುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಎದುರಿನಿಂದ ಪ್ರಖರ ದೀಪಗಳನ್ನು ಹಾಕಿಕೊಂಡು ಯಾವುದೇ ವಾಹನ ಬಂದರೂ ದಾರಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕನಿಷ್ಠ ಪಕ್ಷ ಇನ್ನಷ್ಟು ದೊಡ್ಡದಾಗ ಪ್ರಖರವಾಗಿ ಪ್ರತಿಫಲಿಸುವಂತಹ ಸೂಚನಾ ಫಲಕಗಳನ್ನಾದರೂ ಈ ರಸ್ತೆಯಲ್ಲಿ ಅಳವಡಿಸಬೇಕಿದೆ ಎಂಬುದು ಸ್ಥಳೀಯರು ಅಭಿಪ್ರಾಯ.

ಇಷ್ಟೆಲ್ಲ ಕ್ರಮಗಳನ್ನು ಕೈಗೊಳ್ಳಬೇಕಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ಸ್ಥಳೀಯರ ನೆರವು, ಪೊಲೀಸರ ಶ್ರಮ

ಆನೆಕಾಡು ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಆ ರಸ್ತೆಯಲ್ಲಿ ಗಾಯಾಳುವೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಚಾಲಕರೊಬ್ಬರು ಮೊದಲು ಮಾಹಿತಿ ನೀಡಿದರು. ಆ ಬಳಿಕ ಸ್ಥಳೀಯರಿಂದಲೂ ಕರೆಗಳು ಬಂದವು. ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಕುಶಾಲನಗರ ಸಂಚಾರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಬ್‌ಇನ್‌ಸ್ಟೆಕ್ಟರ್ ಗೀತಾ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಗಾಯಾಳುಗಳನ್ನು ಕಾರಿನಿಂದ ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಆಂಬುಲೆನ್ಸ್ ಸ್ಥಳಕ್ಕೆ ಬರುವವರೆಗೂ ಕಾಯದೇ ಪೊಲೀಸ್ ವಾಹನದಲ್ಲೇ ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ಪೊಲೀಸರು ಸಾಗಿಸಿದರು. ಸ್ಥಳೀಯರೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವುದರಲ್ಲಿ ನೆರವಾದರು ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಡಿವೈಎಸ್‌ಪಿ ಚಂದ್ರಶೇಖರ್, ಸಿಪಿಐ ಪ್ರದೀಪ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

2 ಪತ್ರ ಬರೆದಿದ್ದೇವೆ: ಎಸ್.ಪಿ ಬಿಂದುಮಣಿ

ರಾಷ್ಟ್ರೀಯ 275ರಲ್ಲಿ ಆನೆಕಾಡು ಭಾಗದಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನು ಕುರಿತು ಈಗಾಗಲೇ 2 ಪತ್ರಗಳನ್ನು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಬರೆಯಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಅಲ್ಲಿ ರಸ್ತೆಉಬ್ಬು ಹಾಕುವುದು ಕಷ್ಟ. ಅದಕ್ಕೆ ಬದಲಿಗೆ ಅವರು ‘ರಂಬಲ್ ಸ್ಟ್ರಿಪ್ಸ್‌’ನಂತಹ ಕ್ರಮಗಳನ್ನು ಕೈಗೊಳ್ಳಬಹುದು. ಸೂಚನಾ ಫಲಕಗಳನ್ನೂ ಹಾಕಬೇಕಿದೆ. ಜೊತೆಗೆ, ‘ಕ್ಯಾಟ್‌ ಐಸ್‌’ಗಳನ್ನು ನಿರ್ವಹಣೆ ಮಾಡಬೇಕಿದೆ ಎಂದು ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ