
ಲಯೊನೆಲ್ ಮೆಸ್ಸಿ: ವಿಶ್ವದ ಹೃದಯ ಗೆದ್ದ ಫುಟ್‌ಬಾಲ್ ಮಾಂತ್ರಿಕ
ಫುಟ್‌ಬಾಲ್ ಲೋಕ ಅನೇಕ ದಿಗ್ಗಜ ಆಟಗಾರರನ್ನು ಕಂಡಿದೆ. ಆದರೆ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಸಾಧನೆಯ ಮೂಲಕ ಒಂದು ಪೀಳಿಗೆಯನ್ನೇ ಪ್ರೇರೇಪಿಸಿದ ಆಟಗಾರರಲ್ಲಿ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅಗ್ರಗಣ್ಯರು. ಮೈದಾನದಲ್ಲಿ ಚೆಂಡಿನೊಂದಿಗೆ ಅವರು ಪ್ರದರ್ಶಿಸುವ ಮಾಂತ್ರಿಕ ಆಟ, ಗೋಲುಗಳ ಮಳೆ ಮತ್ತು ತಂಡವನ್ನು ಗೆಲುವಿನತ್ತ ಮುನ್ನಡೆಸುವ ನಾಯಕತ್ವವು ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರನ್ನಾಗಿ ರೂಪಿಸಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಮೆಸ್ಸಿ, ತಮ್ಮ ಅಸಾಧಾರಣ ಸಾಧನೆಗಳ ಮೂಲಕ ಫುಟ್‌ಬಾಲ್ ಇತಿಹಾಸದಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದಾರೆ.
ಇದೀಗ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ.
ಬಾಲ್ಯದಲ್ಲೇ ಎದುರಾದ ಸವಾಲು
1987ರ ಜೂನ್ 24ರಂದು ಅರ್ಜೆಂಟೀನಾದ ರೊಸಾರಿಯೋ ನಗರದಲ್ಲಿ ಜನಿಸಿದ ಲಯೊನೆಲ್ ಮೆಸ್ಸಿ, ಬಾಲ್ಯದಲ್ಲಿಯೇ ಫುಟ್‌ಬಾಲ್‌ನತ್ತ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಅವರ ಕನಸಿನ ಹಾದಿ ಸುಗಮವಾಗಿರಲಿಲ್ಲ. ಚಿಕ್ಕ ಹುಡುಗನಿದ್ದಾಗಲೇ ‘ಗ್ರೋತ್ ಹಾರ್ಮೋನ್ ಡಿಫಿಶಿಯನ್ಸ್’ ಸಮಸ್ಯೆ ಕಾಣಿಸಿಕೊಂಡಿದ್ದು, ಅದರ ಚಿಕಿತ್ಸೆಗೆ ಅಗತ್ಯವಿದ್ದ ವೆಚ್ಚವನ್ನು ಭರಿಸುವುದು ಅವರ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು.
ಆರ್ಥಿಕ ಸಂಕಷ್ಟದ ನಡುವೆಯೂ ಮೆಸ್ಸಿಯ ಪ್ರತಿಭೆ ಮಾತ್ರ ಮಸುಕಾಗಲಿಲ್ಲ. ಅವರ ಆಟವನ್ನು ಗಮನಿಸಿದ ಸ್ಪೇನ್‌ನ ಎಫ್‌ಸಿ ಬಾರ್ಸಿಲೋನಾ ಕ್ಲಬ್, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಮುಂದೆ ಬಂತು. ಈ ನಿರ್ಧಾರವೇ ಮೆಸ್ಸಿಯ ಬದುಕಿನ ಮಹತ್ವದ ತಿರುವಾಗಿ ಪರಿಣಮಿಸಿತು. ಕೇವಲ 13ನೇ ವಯಸ್ಸಿನಲ್ಲಿ ಕುಟುಂಬವನ್ನು ಬಿಟ್ಟು ಸ್ಪೇನ್‌ಗೆ ತೆರಳಿದ ಅವರು, ಬಾರ್ಸಿಲೋನಾದ ಯುವ ಅಕಾಡೆಮಿಯಲ್ಲಿ ತಮ್ಮ ಫುಟ್‌ಬಾಲ್ ಪಯಣವನ್ನು ಆರಂಭಿಸಿದರು. ಅಲ್ಲಿಂದ ಆರಂಭವಾದ ಅವರ ಪ್ರಯಾಣ, ಮುಂದೆ ವಿಶ್ವ ಫುಟ್‌ಬಾಲ್ ಇತಿಹಾಸದ ಅತ್ಯಂತ ಯಶಸ್ವಿ ಅಧ್ಯಾಯಗಳಲ್ಲಿ ಒಂದಾಗಿ ರೂಪುಗೊಂಡಿತು.
ಸುಮಾರು ಎರಡು ದಶಕಗಳ ಕಾಲ ಬಾರ್ಸಿಲೋನಾಗೆ ಆಡಿದ ಮೆಸ್ಸಿ, ಲೀಗ್ ಪ್ರಶಸ್ತಿಗಳು, ಚಾಂಪಿಯನ್ಸ್ ಲೀಗ್ ಕಿರೀಟಗಳು ಸೇರಿದಂತೆ ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ.
ವಿಶ್ವಕಪ್ ಕನಸು ನನಸಾದ ಕ್ಷಣ
ಮೆಸ್ಸಿಯ ವೃತ್ತಿಜೀವನದಲ್ಲಿ ಒಂದು ಕೊರತೆ ಎಂದರೆ ವಿಶ್ವಕಪ್ ಪ್ರಶಸ್ತಿ. 2014ರಲ್ಲಿ ಅರ್ಜೆಂಟೀನಾ ಫೈನಲ್ ತಲುಪಿದರೂ ಕಿರೀಟ ತಪ್ಪಿಸಿಕೊಂಡಿತ್ತು. ಆದರೆ, 2022ರಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ಮೆಸ್ಸಿ, ಕತಾರ್ ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು. ಫ್ರಾನ್ಸ್ ವಿರುದ್ಧದ ರೋಚಕ ಫೈನಲ್‌ನಲ್ಲಿ ಅವರ ಪ್ರದರ್ಶನ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿತು. ಈ ಗೆಲುವಿನೊಂದಿಗೆ ಮೆಸ್ಸಿಯ ವೃತ್ತಿಜೀವನದ ಬಹುದೊಡ್ಡ ಕನಸು ನನಸಾಯಿತು.
ಅಮೆರಿಕದಲ್ಲಿ ಹೊಸ ಅಧ್ಯಾಯ
ಸೌದಿ ಅರೇಬಿಯಾದಿಂದ ಬಂದಿದ್ದ ಭಾರಿ ಮೊತ್ತದ ಆಫರ್‌ಗಳನ್ನು ತಿರಸ್ಕರಿಸಿದ ಲಯೊನೆಲ್ ಮೆಸ್ಸಿ, 2023ರಲ್ಲಿ ಅಮೆರಿಕದ ಇಂಟರ್ ಮಯಾಮಿ ಸಿಎಫ್ ಕ್ಲಬ್‌ಗೆ ಸೇರ್ಪಡೆಯಾಗುವ ಮೂಲಕ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದರು. ಮೆಸ್ಸಿಯ ಈ ನಿರ್ಧಾರವು ಅಮೆರಿಕದ ಫುಟ್‌ಬಾಲ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿತು.
ಮೆಸ್ಸಿಯ ಆಗಮನದೊಂದಿಗೆ ಅಮೆರಿಕದಲ್ಲಿ ಫುಟ್‌ಬಾಲ್ ಕುರಿತ ಆಸಕ್ತಿ ಮತ್ತು ಚರ್ಚೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತು. ಇಂಟರ್ ಮಯಾಮಿ ಪಂದ್ಯಗಳ ಟಿಕೆಟ್‌ಗಳಿಗೆ ಅಭೂತಪೂರ್ವ ಬೇಡಿಕೆ ಸೃಷ್ಟಿಯಾದರೆ, ಕ್ಲಬ್‌ನ ಜೆರ್ಸಿಗಳ ಮಾರಾಟ ದಾಖಲೆ ಮಟ್ಟ ತಲುಪಿತು. ಅವರ ಸೇರ್ಪಡೆಯಿಂದ ಮೇಜರ್ ಲೀಗ್ ಸಾಕರ್ (MLS) ಟೂರ್ನಿಯೂ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆಯಿತು.
ಇಂಟರ್ ಮಯಾಮಿ ಜೊತೆ ಮೆಸ್ಸಿ ಅವರ ಒಪ್ಪಂದ 2028ರ ಕೊನೆಯವರೆಗೆ ಇದೆ.
ಮೆಸ್ಸಿಯ ಯಶಸ್ಸಿನ ಹಿಂದಿರುವುದು ಕೇವಲ ಪ್ರತಿಭೆಯಲ್ಲ. ಶಿಸ್ತು, ಕಠಿಣ ಪರಿಶ್ರಮ ಮತ್ತು ತಂಡಕ್ಕಾಗಿ ಆಡುವ ಮನೋಭಾವವೇ ಅವರನ್ನು ಇತರರಿಂದ ಭಿನ್ನರನ್ನಾಗಿಸಿದೆ. ಬಾಲ್ಯದಲ್ಲಿ ಆರೋಗ್ಯ ಸಮಸ್ಯೆ ಎದುರಿಸಿದ್ದ ಹುಡುಗನೊಬ್ಬ ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರನಾಗಿ ಬೆಳೆದ ಕಥೆ ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ.
ಅರ್ಜೆಂಟೀನಾ ಪರ ಆಡಿದ ಪಂದ್ಯಗಳು: 207
ಗಳಿಸಿದ ಗೋಲುಗಳು: 125
ಆಡಿದ ವಿಶ್ವಕಪ್‌ಗಳು: ಆರು.
2026ರ ವಿಶ್ವಕಪ್‌ನಲ್ಲಿ ಎಂಟು ಗೋಲು, 4 ಅಸಿಸ್ಟ್
ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಆಡಿದ ಎರಡನೇ ಆಟಗಾರ.
ಎರಡು ವಿಶ್ವಕಪ್‌ಗಳಲ್ಲಿ (2014, 2022) ಚಿನ್ನದ ಚೆಂಡು ಗೌರವ
ಒಲಿಂಪಿಕ್ಸ್ ಚಿನ್ನ (2008, ಬೀಜಿಂಗ್)
2021 ಮತ್ತು 2024ರಲ್ಲಿ ಕೊಪಾ ಅಮೆರಿಕ ಟೂರ್ನಿಯ ಪ್ರಶಸ್ತಿ.
ಪ್ರತಿನಿಧಿಸಿದ ಕ್ಲಬ್‌ಗಳು: ಬಾರ್ಸಿಲೋನಾ, ಪ್ಯಾರಿಸ್ ಸೇಂಟ್ ಜರ್ಮನ್, ಇಂಟರ್ ಮಯಾಮಿ.
ಅರ್ಜೆಂಟೀನಾ ಪರ ಆಡಿದ ಪಂದ್ಯಗಳು: 207
ಆಡಿದ ವಿಶ್ವಕಪ್‌ಗಳು: ಆರು.
2026ರ ವಿಶ್ವಕಪ್‌ನಲ್ಲಿ ಎಂಟು ಗೋಲು, 4 ಅಸಿಸ್ಟ್
ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಆಡಿದ ಎರಡನೇ ಆಟಗಾರ.
ಎರಡು ವಿಶ್ವಕಪ್‌ಗಳಲ್ಲಿ (2014, 2022) ಚಿನ್ನದ ಚೆಂಡು ಗೌರವ
ಒಲಿಂಪಿಕ್ಸ್ ಚಿನ್ನ (2008, ಬೀಜಿಂಗ್)
2021 ಮತ್ತು 2024ರಲ್ಲಿ ಕೊಪಾ ಅಮೆರಿಕ ಟೂರ್ನಿಯ ಪ್ರಶಸ್ತಿ.
ಪ್ರತಿನಿಧಿಸಿದ ಕ್ಲಬ್‌ಗಳು: ಬಾರ್ಸಿಲೋನಾ, ಪ್ಯಾರಿಸ್ ಸೇಂಟ್ ಜರ್ಮನ್, ಇಂಟರ್ ಮಯಾಮಿ.