ಕಾರಟಗಿಯಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ 52ನೇ ವರ್ಷದ ಸಂಭ್ರಮ

ಕಾರಟಗಿಯಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ 52ನೇ ವರ್ಷದ ಸಂಭ್ರಮ

ಕಾರಟಗಿಯಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ 52ನೇ ವರ್ಷದ ಸಂಭ್ರಮ

ಕಾರಟಗಿ: ಪಟ್ಟಣದಲ್ಲಿ ತಿಂಗಳ ಪರ್ಯಂತ ನಡೆದಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ 52ನೇ ವರ್ಷದ ಸಂಭ್ರಮ. ಈ ಬಾರಿ ಶರಣಬಸವೇಶ್ವರರ ಮೂರ್ತಿಗೆ ಕಲ್ಲಿನ ಮಂಟಪ ನಿರ್ಮಿಸಿದ್ದು, ಪಟ್ಟಣದಲ್ಲಿ ಭಕ್ತಿಯ ಪರಾಕಾಷ್ಠೆ ರಾಜಾಜಿಸುತ್ತಿದೆ.

ಪುರಾಣ ಪ್ರವಚನದ ನಿಮಿತ್ತ ಸಾಮೂಹಿಕ ವಿವಾಹ, ಸೀಮಂತ ಕಾರ್ಯಕ್ರಮ, ಸಾವಿರಾರು ಮಹಿಳೆಯರಿಗೆ ಉಡಿ ತುಂಬುವುದು, ತೊಟ್ಟಿಲು ಕಾರ್ಯಕ್ರಮ ನಡೆದಿದೆ. ಪುರಾಣ ಪ್ರವಚನ, ಮೆರವಣಿಗೆ, ರಥೋತ್ಸವದಲ್ಲಿ ಸರ್ವ ಜಾತಿಯ ಜನರು ಪಾಲ್ಗೊಳ್ಳುವ ಮೂಲಕ ಶರಣರು ಹಾಕಿದ ಪರಂಪರೆಯ ಮುಂದುವರೆದಿದೆ.

ಗಂಗಾವತಿಯ ಚನ್ನಬಸವ ತಾತ ಆವರ ವಾಣಿಯಂತೆ ಕಾರಟಗಿ ಕಲ್ಯಾಣ ಕೇಂದ್ರವಾದಂತೆ ಭಾಸವಾಗುತ್ತಿದೆ. 5 ದಶಕದ ಹಿಂದೆ ಆರಂಭಗೊಂಡ ‘ಶರಣಬಸವೇಶ್ವರ ಪುರಾಣ’ ಇಂದು ಹೆಮ್ಮರವಾಗಿದೆ. ಚಿಕೇನಕೊಪ್ಪ ಶರಣರ ವಾಣಿಯಂತೆ ಪ್ರವಚನವು 41 ದಿನಗಳ ಬದಲು 30 ದಿನಗಳವರೆಗೆ ನಡೆಯುತ್ತಿದೆ. ಪುರಾಣ ಪ್ರವಚನದ ಸಂದರ್ಭದಲ್ಲಿ ಅನೇಕ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ.

25 ವರ್ಷಗಳ ಬಳಿಕ ಜೋಡು ರಥ: ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೇರು ಎಳೆಯುವುದು ಮತ್ತಷ್ಟು ಒಳ್ಳೆಯದು ಎಂಬ ಭಾವನೆಯಿಂದ ದಿ.ಕೊಟ್ರಬಸಪ್ಪ ಸಜ್ಜನ್‌ ಮುಂದಾಗಿ ಜೋಡು ರಥ ಮಾಡಿಸಿದರು. 1999 ರಿಂದ ಜೋಡು ರಥೋತ್ಸವ ಜನಸಾಗರದ ಮಧ್ಯೆ ನಡೆಯುತ್ತಿದೆ.

ಜಾತ್ರೆಗೆ ಭೇದವಿಲ್ಲ: ಪುರಾಣದ ನಿಮಿತ್ತ ಗಂಗೆಸ್ಥಳಕ್ಕೆ ಹೋಗಿಬರುವ ರಥೋತ್ಸವವು ಊರ ಜಾತ್ರೆಯ ಮಾದರಿಯಲ್ಲಿ ನಡೆಯುತ್ತದೆ. ದೇವಾಲಯದಲ್ಲಿ ವಿವಿಧ ಪೂಜೆ, ಧಾರ್ಮಿಕ ಕಾರ್ಯಕ್ರಮಗಳ ಬಳಿಕ ತುಂಗಭದ್ರಾ 31ನೇ ಕಾಲುವೆಯ ಬಳಿ ಗಂಗಾಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿ ಸೇವೆಯೊಂದಿಗೆ ಆರಂಭಗೊಳ್ಳುವ ಅದ್ದೂರಿ ಮೆರವಣಿಗೆಯಲ್ಲಿ ವಿವಿಧೆಡೆಯ ಸಹಸ್ರಾರು ಭಕ್ತರು ಪಾಲ್ಗೊಳ್ಳುವರು.

ಮೆರವಣಿಗೆಯಲ್ಲಿ ಪೂರ್ಣಕುಂಭ, ಕಳಸ ಹೊತ್ತು ಮಹಿಳೆಯರು ಸಾಗುತ್ತಾರೆ. ಡೊಳ್ಳು, ತಾಷಾ, ನಂದಿಕೋಲು, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡುತ್ತವೆ. ಜಾತ್ರೆ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ಹೋಗಿರುವ ಯುವಕರು, ಗಂಡನ ಮನೆಯಲ್ಲಿದ್ದ ಗೃಹಿಣಿಯರು ಆಗಮಿಸುವುದು ಕಡ್ಡಾಯ ಎಂಬ ಅಲಿಖಿತ ಸಂಪ್ರದಾಯ ಇಲ್ಲಿಯದ್ದಾಗಿದೆ. 2 ದಿನಗಳವರೆಗೆ ಮನೆಯ ಮುಂದಿನ ಅಂಗಳದಲ್ಲಿ ಸೆಗಣಿ ನೀರು, ಬಣ್ಣದ ರಂಗೋಲಿ, ತಳಿರು ತೋರಣ ಕಟ್ಟಿ, ಅಲಂಕಾರ ಮಾಡುತ್ತಾರೆ.

ಮುಖ್ಯ ರಸ್ತೆಗಳುದ್ದಕ್ಕೂ ಸ್ವಾಗತ ಕೋರುವ ಬ್ಯಾನರ್‌, ಬಟ್ಟಿಂಗ್ಸ್‌, ನಾಮಫಲಕ ರಾರಾಜಿಸುತ್ತವೆ. ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಅನ್ನಸಂತರ್ಪಣೆ, ಪುರಾಣ ಮಂಗಲ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ನಡೆಯುವುದು.

ಸೆ.21ರಂದು ಸೋಮವಾರ ಸಂಜೆ ಜೋಡು ರಥೋತ್ಸವ, ಶರಣಬಸವೇಶ್ವರರ ಬೆಳ್ಳಿ ಮೂರ್ತಿಗಳೊಂದಿಗೆ ಅಪಾರ ಭಕ್ತರ ಮಧ್ಯೆ ನಡೆಯಲಿದೆ. ದೇವಸ್ಥಾನದ ಆವರಣದಿಂದ ರಥೋತ್ಸವಕ್ಕೆ ಚಾಲನೆ ದೊರೆತು, ಸಂಕಲಮ್ಮ ಬೈಲ್‌ನ ಎದುರು ಬಸವಣ್ಣ ಗುಡಿಯವರೆಗೆ ಸಾಗಿ ವಾಪಸ್‌ ಬರುತ್ತದೆ.

ಸಾಂಕೇತಿಕವಾಗಿ ಪುರಾಣದ ಆರಂಭದೊಂದಿಗೆ ಊರ ಜಾತ್ರೆ ಸಂಪನ್ನಗೊಳ್ಳುವುದು. ಬಳಿಕ ಪಟ್ಟಣ ಸಹಿತ ಇತರೆಲ್ಲರಿಗೂ ಮರಿ ಪ್ರಸಾದದ ಕಾರ್ಯಕ್ರಮ ನಡೆಯುವುದು. ಇಂಥಹ ಉತ್ಸವಗಳು ಶಾಂತವಾಗಿ ನಡೆದು ಸಂಪನ್ನಗೊಳ್ಳುವುದರಿಂದ ಈ ಭಾಗದವರು ಶಾಂತಿಗೆ ಪ್ರಖ್ಯಾತರು ಎಂಬ ಸಂದೇಶ ರವಾನೆಯಾಗುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ