
ಶಿರ್ವದಲ್ಲಿ ದನ ಕಳವು ಪ್ರಕರಣ: 4 ಆರೋಪಿಗಳ ಬಂಧನ
ಶಿರ್ವ: ಮೇಯಲು ಬಿಟ್ಟಿದ್ದ ದನವನ್ನು ಟೆಂಪೊದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಕಳತ್ತೂರು ಗ್ರಾಮದ ನಡಿಗುತ್ತು ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಸೆ. 19ರಂದು ಸಂಜೆ ಮೇಯಲು ಬಿಟ್ಟಿದ್ದ 5 ದನಗಳ ಪೈಕಿ 2 ವರ್ಷ ಪ್ರಾಯದ ಕಪ್ಪು ಬಣ್ಣದ ದನ ಕಾಣೆಯಾಗಿರುವುದನ್ನು ಗಮನಿಸಿ ಹುಡುಕಾಟ ನಡೆಸಿದ್ದರು. ಈ ವೇಳೆ ಸಮೀಪದಲ್ಲಿ ನಿಂತಿದ್ದ ಟೆಂಪೊದಲ್ಲಿ ತಮ್ಮ ದನದೊಂದಿಗೆ ಮತ್ತೊಂದು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿರುವುದು ಕಂಡುಬಂದಿತ್ತು. ದೂರುದಾರರನ್ನು ಕಂಡ ಕೂಡಲೇ ವಾಹನದಲ್ಲಿದ್ದವರು ಟೆಂಪೊ ಚಲಾಯಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಮೊದಲ ಆರೋಪಿ ಕಳತ್ತೂರಿನ ಉಮ್ಮರಬ್ಬನನ್ನು (64) ಸೆ. 19ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57), ಮೊಹಮ್ಮದ್ ಆಸೀರ್ (24) ಅವರನ್ನು ಸೆ. 20ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ವಾಹನ ಸಮೇತ ಪತ್ತೆಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೊ, ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.