
ಚಿಕ್ಕಬಳ್ಳಾಪುರ ಜಿಲ್ಲೆಗೆ ₹3,232 ಕೋಟಿ ವೆಚ್ಚ: ದಿನೇಶ್ ಗೂಳಿಗೌಡ
ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆಗಳಿಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ₹ 3,232.17 ಕೋಟಿಯನ್ನು ರಾಜ್ಯ ಸರ್ಕಾರ ವೆಚ್ಚ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ವಿವರಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ₹ 1,48,454 ಕೋಟಿ ನೀಡಿದೆ.ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.24 ಕೋಟಿ ಮಹಿಳೆಯರಿಗೆ ₹ 76,951.13 ಕೋಟಿ ನೀಡಿದೆ. ಪ್ರತಿ ಮಹಿಳೆಯರಿಗೆ ₹ 64 ಸಾವಿರ ತಲುಪಿದೆ. ಇನ್ನೊಂದು ವಾರದಲ್ಲಿ 33ನೇ ಕಂತಿನ ₹ 2000 ತಲುಪುವ ಮೂಲಕ ₹ 66 ಸಾವಿರ ಸೇರಲಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಲ್ಲಿ 1.67 ಕೋಟಿ ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಇದಕ್ಕಾಗಿ ₹ 28,759 ಕೋಟಿ ವ್ಯಯಿಸಲಾಗಿದೆ. ರಾಜ್ಯದಲ್ಲಿ 1.48 ಕೋಟಿ ಲಕ್ಷ ಪಡಿತರ ಕಾರ್ಡ್‌ಗಳಿವೆ. 4.5 ಕೋಟಿ ಸದಸ್ಯರಿಗೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಇದಕ್ಕಾಗಿ ₹ 19,845 ಕೋಟಿ ವೆಚ್ಚ ಮಾಡಲಾಗಿದೆ.ರಾಜ್ಯದ 24 ಸಾವಿರ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರದ ಜೊತೆಗೆ ಸಮಯ ಮತ್ತು ದಾಸ್ತಾನು ಫಲಕ ಹಾಕಬೇಕು. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು. ಮುಂದಿನ ತಿಂಗಳ ವೇಳೆಗೆ ಇಂದಿರಾ ಕಿಟ್ ವಿತರಣೆ ಆಗಲಿದೆ ಎಂದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ₹ 831 ಕೋಟಿ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಟಿಕೆಟ್ ಮೌಲ್ಯ ₹ 21,618 ಕೋಟಿ. ಈ ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಪಾವತಿಸಿದೆ. ಮಹಿಳೆಯರಿಗೆ ₹ 150 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಕಾರ್ಡ್ ನೀಡುವ ಕಾರ್ಯ ಅಂತಿಮ ಹಂತದಲ್ಲಿದೆ. ಯುವನಿಧಿ ಯೋಜನೆಯಡಿ 3.99 ಲಕ್ಷ ಯುವಕರಿಗೆ ₹ 1,281 ಕೋಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆ ಕೆಲವೆಡೆ ದುರುಪಯೋಗ ಆಗುತ್ತಿದೆ. ಅರ್ಹರಿಗೆ ಯೋಜನೆ ತಲುಪಿಸುವ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿ ಶೇ 80 ಪರಿಷ್ಕರಣೆ ಪೂರ್ಣವಾಗಿದೆ. 3.5 ಲಕ್ಷ ಕುಟುಂಬಗಳು ಯೋಜನೆಯಿಂದ ಹೊರ ಉಳಿದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.96 ಲಕ್ಷ ಮಹಿಳೆಯರು ಮರಣ ಹೊಂದಿದ್ದು ಅವರ ಖಾತೆಗಳಿಗೆ ₹ 118 ಕೋಟಿ ಜಮೆ ಆಗಿದೆ. ಆ ಹಣ ವಾಪಸ್ ಪಡೆಯುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ 100 ಹೆಚ್ಚುವರಿ ಬಸ್ ನೀಡುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ. 4,500 ಹೊಸ ಬಸ್ ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ₹ 7,000 ಕೋಟಿ ಬಿಡುಗಡೆ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ 100 ಹೆಚ್ಚುವರಿ ಬಸ್ ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 17,430 ವಿದ್ಯಾರ್ಥಿಗಳಿಗೆ ಉಚಿತ ಬಸ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತರಾದವರಲ್ಲಿ 7,523 ಫಲಾನುಭವಿಗಳು ಮರಣ ಹೊಂದಿದ್ದಾರೆ. ಇದರಲ್ಲಿ 2,845 ಮೃತರ ಖಾತೆಗೆ ₹ 3.2 ಕೋಟಿ ಜಮೆ ಆಗಿದ್ದು ಈ ಪೈಕಿ ₹ 2.24 ಕೋಟಿಯನ್ನು ಸರ್ಕಾರಕ್ಕೆ ಮರುಪಾವತಿಸಲಾಗಿದೆ. ₹78.34 ಲಕ್ಷ ಬಾಕಿ ಉಳಿದಿದೆ ಎಂದರು.
ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ಶೇ 97.45 ಮುಕ್ತಾಯವಾಗಿದೆ. 3,24,028 ಗ್ರಾಹಕರ ಸಂಖ್ಯೆ ಪೈಕಿ 3,15,775 ಗ್ರಾಹಕರ ಸಂಖ್ಯೆ ಸರ್ವೆ ಪೂರ್ಣವಾಗಿದೆ. 8,253 ಗ್ರಾಹಕರ ಸಂಖ್ಯೆ ಮರುಪರಿಶೀಲನೆ ಬಾಕಿಯಿದೆ. 220 ಸ್ಥಾವರಗಳು ಖಾತೆ ಬದಲಾವಣೆ ಆಗಿದ್ದರೆ, 192 ವಾಟರ್ ಪಂಪ್ ಸ್ಥಾವರಗಳಾಗಿವೆ. ಉಳಿದಂತೆ ಸರ್ಕಾರಿ ಸ್ಥಾವರಗಳು, ದೇವಸ್ಥಾನ, ಮಸೀದಿ, ಚರ್ಚ್ ಗಳಿವೆ. 51 ಸ್ಥಾವರಗಳು ಸ್ವಯಂಪ್ರೇರಿತವಾಗಿ ಗೃಹಜ್ಯೋತಿ ಯೋಜನೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್, ಉಪಕಾರ್ಯದರ್ಶಿ ಅತಿಕ್ ಪಾಷ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲವಳ್ಳಿ ರಮೇಶ್, ಉಪಾಧ್ಯಕ್ಷರಾದ ಜಿ.ಸುಬ್ಬಾರೆಡ್ಡಿ, ರಾಮಕೃಷ್ಣಪ್ಪ, ಸದಸ್ಯರಾದ ಆದಿರೆಡ್ಡಿ, ಎಸ್.ನಾರಾಯಣಸ್ವಾಮಿ, ಎಂ.ಕೆ.ವೇಣುಗೋಪಾಲ್, ಕೆ.ಶ್ರೀನಿವಾಸ್, ಮುನಿನಾರಾಯಣಪ್ಪ, ತಾರಾನಾಥ್, ಚಲಂ, ಎಚ್.ಎಂ.ಮುನಿಯಪ್ಪ, ಮಸ್ತಾನ್ ಸಾಬ್ ಹಾಗೂ ತಾಲೂಕು ಸಮಿತಿಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಪ್ರತಿ ವಾರ್ಡ್‌ಗಳಲ್ಲಿ 6 ಜನ ಸದಸ್ಯರನ್ನು ಒಳಗೊಂಡ ಗ್ಯಾರಂಟಿ ಸಮಿತಿ ಸದಸ್ಯರನ್ನು ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯ 154 ಗ್ರಾಮ ಪಂಚಾಯಿತಿ, 4 ನಗರಸಭೆ, 1 ಪುರಸಭೆ ಮತ್ತು 3 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 194 ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
ಪ್ರತಿ ಸಮಿತಿಯಲ್ಲಿ 6 ಸದಸ್ಯರನ್ನು ಒಳಗೊಂಡಂತೆ 1,164 ಸದಸ್ಯರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು. ಪ್ರತಿ ಸಮಿತಿಯಲ್ಲಿ ಎಸ್‌ಸಿ–ಎಸ್‌ಟಿ ಸಮುದಾಯದ ಪೈಕಿ ಒಬ್ಬರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ತಲಾ ಒಬ್ಬರು ಹಾಗೂ ಇಬ್ಬರು ಮಹಿಳೆಯರು ಸದಸ್ಯರಾಗಿರುವರು. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಲಭ್ಯವಿಲ್ಲದ ಸಂದರ್ಭದಲ್ಲಿ ಸಾಮಾನ್ಯ ವರ್ಗದಿಂದ ಸದಸ್ಯರನ್ನು ನೇಮಿಸಲು ಅವಕಾಶವಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರೊಂದಿಗೆ ಚರ್ಚಿಸಿ ಹತ್ತುದಿನದೊಳಗೆ ಸದಸ್ಯರ ಪಟ್ಟಿ ಸಲ್ಲಿಸಬೇಕು ಎಂದು ಹೇಳಿದರು.