
ಪಡಿತರ ಚೀಟಿ ಇ–ಕೆವೈಸಿಗೆ ಅ.20ರ ಗಡುವು: ನ್ಯಾಯಬೆಲೆ ಅಂಗಡಿ ಸಮಯ ಬದಲಾವಣೆ
ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಗಳಿಗೆ ಇ–ಕೆವೈಸಿ ಮಾಡಿಸುವ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
ಬಡವರು, ಕೂಲಿ ಕಾರ್ಮಿಕರು ಮತ್ತು ಜನಸಾಮಾನ್ಯರ ಆಹಾರ ಭದ್ರತೆಯ ಹಕ್ಕನ್ನು ಖಾತರಿಪಡಿಸಲು ಹಾಗೂ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ಅವಧಿ ವಿಸ್ತರಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
‘ಹಿಂದಿನ ಆದೇಶದ ಪ್ರಕಾರ, ಸೆಪ್ಟೆಂಬರ್ ಕೊನೆಯೊಳಗೆ ಇ–ಕೆವೈಸಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಅನನುಕೂಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಗಡುವು ವಿಸ್ತರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಹಗಲು ವೇಳೆ ಕೂಲಿ ಕೆಲಸಕ್ಕೆ ಹೋಗುವ ಶ್ರಮಿಕರು ಪಡಿತರ ಪಡೆಯಲು ಇಡೀ ದಿನದ ದುಡಿಮೆ ಕಳೆದುಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಪಡಿತರದಾರರ ಅನುಕೂಲಕ್ಕೆ ತಕ್ಕಂತೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲೇ ಬೇಕಿದೆ. ಆದ್ದರಿಂದ, ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 4ರಿಂದ ರಾತ್ರಿ 8ರವರೆಗೆ ತೆರೆಯಲು ಆದೇಶಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
‘ಸೂಚಿಸಿದ ಸಮಯದಲ್ಲಿ ಅಂಗಡಿ ತೆರೆಯದೆ ಸಾರ್ವಜನಿಕರಿಗೆ ತೊಂದರೆ ಕೊಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದೂ ಅವರು ಎಚ್ಚರಿಸಿದ್ದಾರೆ.