
ಚಳ್ಳಕೆರೆ ಕ್ಷೇತ್ರ: 18 ಹೊಸ ಮತಗಟ್ಟೆ
ಚಳ್ಳಕೆರೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಹಿನ್ನೆಲೆಯಲ್ಲಿ ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಅವರು ಭಾನುವಾರ ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ದಾಪುರ, ನಗರಂಗೆರೆ ಹಾಗೂ ಚಳ್ಳಕೆರೆ ನಗರ ಸೇರಿದಂತೆ ವಿವಿಧ ಮತಗಟ್ಟೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ, ಮತಗಟ್ಟೆಗಳಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳು ಮತ್ತು ಚುನಾವಣಾ ಸಿದ್ಧತೆಗಳನ್ನು ಅಧಿಕಾರಿಗಳಿಂದ ಪರಿಶೀಲಿಸಿದರು. ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಪರಿಷ್ಕರಣೆ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ರೇಹಾನ್ ಪಾಷಾ ಮಾಹಿತಿ ನೀಡಿ, ‘ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಮತಪಟ್ಟಿ ಪರಿಷ್ಕರಣೆ ಕಾರ್ಯ ಕ್ರಮಬದ್ಧವಾಗಿ ನಡೆದಿದೆ. ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 18 ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದೆ. ಹಿಂದೆ ಇದ್ದ 260 ಮತಗಟ್ಟೆಗಳೊಂದಿಗೆ ನಗರದಲ್ಲಿ 9 ಹಾಗೂ ಗ್ರಾಮಾಂತರದಲ್ಲಿ 9 ಸೇರಿ ಒಟ್ಟು 278 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ’ ಎಂದು ತಿಳಿಸಿದರು.
ಈ ವೇಳೆ ಕಸಬಾ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ್, ಮತಗಟ್ಟೆ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.