
ಗಣೇಶೋತ್ಸವಕ್ಕೆ ಬಿಗಿ ನಿಯಮ: ಸೆ.14ರೊಳಗೆ ಅನುಮತಿ ಪಡೆಯದಿದ್ರೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕೋರುವ ಪ್ರಕ್ರಿಯೆ ಸುಲಭಗೊಳಿಸಲು ಉಪವಿಭಾಗ ಮಟ್ಟದಲ್ಲಿ ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ರಜೆಗಳಿರುವುದರಿಂದ ಮತ್ತು ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 14ರ ನಂತರ ಹೊಸದಾಗಿ ಯಾವುದೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಸಿಗುವುದಿಲ್ಲ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಗಣೇಶೋತ್ಸವ ಮಂಡಳಿ, ಕಮಿಟಿಯವರಿಗೆ ತಿಳಿಸಿದ್ದಾರೆ. ಮಂಗಳವಾರ ಗಣೇಶ ಚತುರ್ಥಿ ಹಬ್ಬ ಶಾಂತಿಯುತ, ಶಿಸ್ತುಬದ್ಧ ಹಾಗೂ ಪರಿಸರಸ್ನೇಹಿಯಾಗಿ ಆಚರಿಸುವ ಸಲುವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವರ್ಚುವಲ್ ಸಮನ್ವಯ ಸಭೆ ನಡೆಸಿ ಮಾತನಾಡಿದರು.
ಪಿಒಪಿ ಗಣೇಶ ಮೂರ್ತಿಗಳ ಬಳಕೆ ಸಂಪೂರ್ಣ ನಿಷೇಧ
ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಉಪವಿಭಾಗ ಮಟ್ಟದ ಜಾಗೃತ ದಳ ಮತ್ತು ಪೊಲೀಸ್ ಇಲಾಖೆ ವತಿಯಿಂದ ಜಂಟಿ ಕಾರ್ಯಾಚರಣೆ ನಡೆಸಿ, ಮೂರ್ತಿಗಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಗುತ್ತಿದೆ ಎಂದು ಆಯುಕ್ತರು ತಿಳಿದರು.
ಕೆರೆ ಕಲ್ಯಾಣಿಗಳಲ್ಲಿ ವಿಸರ್ಜನೆಗೆ ಅಗತ್ಯ ವ್ಯವಸ್ಥೆ: Ganesh Chaturthi 2026
ಡಿಸಿಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗಾಗಿ ಯಡಿಯೂರು, ಕೆಂಪಾಂಬುಧಿ, ಉತ್ತರಹಳ್ಳಿ ಕೆರೆ ಸೇರಿದಂತೆ ಪ್ರಮುಖ ಕೆರೆಗಳ ಕಲ್ಯಾಣಿಗಳು ಹಾಗೂ ಬೊಮ್ಮನಹಳ್ಳಿ ಮತ್ತಿತರ ಭಾಗಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ರವರು ಆಯುಕ್ತರ ಗಮನಕ್ಕೆ ತಂದರು.
ಈ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್, ನುರಿತ ಈಜುಗಾರರು, ಹೈಮಾಸ್ಟ್ ಹಾಗೂ ಸ್ಟ್ರೀಟ್ ಲೈಟ್‌ಗಳ ಬೆಳಕಿನ ವ್ಯವಸ್ಥೆ, ಕ್ರೇನ್ ಮತ್ತು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗುವುದು. ಜೊತೆಗೆ ಮನೆಗಳಲ್ಲಿ ಪೂಜಿಸುವ ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಆಯಾ ವಾರ್ಡ್‌ಗಳಲ್ಲಿ ಸಂಚಾರಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ಆಯುಕ್ತರಿಗೆ ಮಾಹಿತಿ ಕೊಟ್ಟರು.
ತುರ್ತು ವೈದ್ಯಕೀಯ ಸೇವೆ, ಆಸ್ಪತ್ರೆಗಳಲ್ಲಿ ಬೆಡ್ ಮೀಸಲು
ವಿಸರ್ಜನಾ ಸ್ಥಳಗಳಲ್ಲಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ವೈದ್ಯಕೀಯ ತಂಡಗಳು ಹಾಗೂ ಆಂಬುಲೆನ್ಸ್ ಸೌಲಭ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ಅಥವಾ ತುರ್ತು ಸಂದರ್ಭಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಜಯನಗರ ಸಾರ್ವಜನಿಕ ಆಸ್ಪತ್ರೆ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಗಳಲ್ಲಿ ತುರ್ತು ಬೆಡ್‌ಗಳನ್ನು ಕಾಯ್ದಿರಿಸಲು ಕ್ರಮ ವಹಿಸಲಾಗುವುದು ಎಂದು ಆಯುಕ್ತರು ತಿಳಿದರು.
ವರ್ಚವಲ್ ಸಭೆಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಶ್ರೀ ವಂಶಿಕೃಷ್ಣ ಸೇರಿದಂತೆ ಬೆಸ್ಕಾಂ, ಅಗ್ನಿಶಾಮಕ, ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಪಾಲಿಕೆಯ ಎಲ್ಲ ಕಾರ್ಯಪಾಲಕ ಅಭಿಯಂತರರು, ಎಸಿಪಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.