
ಅಡೆ–ತಡೆಗಳ ನಡುವೆಯೂ 144 ಕಿ.ಮೀ ಹರಿವು: ಗೋನೂರು ಕೆರೆ ಸೇರಿದ ಭದ್ರೆ
ಚಿತ್ರದುರ್ಗ: ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆ (ಸಿಬಿಸಿ)ಯತ್ತ ಹರಿಯುತ್ತಿದ್ದ ನೀರು ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ತಾಲ್ಲೂಕಿನ ಗೋನೂರು ಕೆರೆ ಸೇರಿತು. ರೈತರು, ಸಾರ್ವಜನಿಕರು ಗಂಗಾಪೂಜೆಗೆ ಮೂಲಕ ಜೀವಸೆಲೆಗೆ ಸ್ವಾಗತ ಕೋರಿದರು.
ಸಾಕಷ್ಟು ಗೊಂದಲ, ಅಡ–ತಡೆಗಳ ನಡುವೆಯೂ 144 ಕಿ.ಮೀವರೆಗೆ ನೀರು ತರುವಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಯಶಸ್ವಿಯಾದರು. ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲ್ಲೂಕಿನ ಅಜ್ಜಂಪುರ ವೈ ಜಂಕ್ಷನ್‌ನಿಂದ ಎಡಕ್ಕೆ ಕವಲೊಡೆಯುವ ಚಿತ್ರದುರ್ಗ ಶಾಖಾ ನಾಲೆಯಲ್ಲಿ 135 ಕಿ.ಮೀ ನೀರು ಹರಿಯಿತು.
ತರಿಕೆರೆ ಬಳಿ ಸ್ಥಳೀಯ ರೈತರು ತಮ್ಮ ಕೆರೆಗಳಿಗೆ ನೀರು ಹರಿಸುವರೆಗೂ ಮುಂದೆ ನೀರು ಹರಿಯಲು ಬಿಡುವುದಿಲ್ಲ ಎಂದು ತಡೆಯೊಡ್ಡಿದ್ದರು. ಜೊತೆಗೆ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲೂ ಇದೇ ರೀತಿ ಅಡೆತಡೆ ಎದುರಾಗಿತ್ತು. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿ ಮುಂದಕ್ಕೆ ನೀರು ಹರಿಸಲಾಯಿತು.
ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಮೂಲಕ ನೀರು ಮಂಗಳವಾರ ಬಯಲುಸೀಮೆಯ ನೆಲ ಸ್ಪರ್ಶಿಸಿತು. ಮಂಗಳವಾರ ರಾತ್ರಿಯೇ ಗೌನಹಳ್ಳಿ ಮೂಲಕ ಹಿರಿಯೂರು ಪ್ರವೇಶಿಸಿತ್ತು. ಹಿರಿಯೂರು ತಾಲ್ಲೂಕಿನ ಐಮಂಗಲದಿಂದ ಬುಧವಾರ ಮಧ್ಯಾಹ್ನದ ವೇಳೆಗೆ ತಾಲ್ಲೂಕಿನ ಕ್ಯಾದಿಗೆರೆ ಪ್ರವೇಶಿಸಿತು. ನಂತರ ಮಧ್ಯಾಹ್ನ 3 ಗಂಟೆಗೆ ಗೋನೂರು ಗುಡ್ಡದ ಮೇಲಿಂದ ನಿರ್ಮಿಸಲಾಗಿರುವ ಕಾಲುವೆ ಮೂಲಕ ಕೆರೆಯತ್ತ ನೀರು ನುಗ್ಗಿತು.
ತೀವ್ರ ಬರಪರಿಸ್ಥಿತಿಯಲ್ಲೂ ನಾಲೆಯಲ್ಲಿ ನೀರು ಕಂಡ ರೈತರು ಸಂಭ್ರಮ ವ್ಯಕ್ತಪಡಿಸಿದರು. ರೈತ ಮಹಿಳೆಯರು ನಾಲೆಯ ದಡದಲ್ಲಿ ಗಂಗಾಪೂಜೆ ನೆರವೇರಿಸಿದರು. ಹಲವರು ನೀರಿಗೆ ಹೂವು, ಎಲೆ–ಅಡಿಕೆ ಅರ್ಪಿಸಿದರು. ಗುಡ್ಡದ ಮೇಲಿನಿಂದ ನೀರು ಕೆಳಗಿಳಿಯುವ ದೃಶ್ಯ ಕಂಡು ರೈತರು ಭಾವುಕರಾದರು.
‘ಈ ಜನ್ಮಕ್ಕೆ ನಾವು ನೀರು ನೋಡುತ್ತೇವೆ ಎಂದುಕೊಂಡಿರಲಿಲ್ಲ, ರಾಜಕಾರಣಿಗಳ ಮಾತಿನಲ್ಲಿ ನಮಗೆ ನಂಬಿಕೆಯೇ ಇರಲಿಲ್ಲ. ಆದರೆ ಈಗ ನೀರು ಹರಿಯುತ್ತಿರುವುದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತಿದೆ’ ಎಂದು ರೈತ ಮಹಾಂತೇಶ್ ಭಾವುಕರಾದರು.
ಭದ್ರಾ ನೀರು ಜಿಲ್ಲೆ ತಲುಪಿರುವ ಹಿನ್ನೆಲೆಯಲ್ಲಿ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸೆ.10ರಂದು ಬೆಳಿಗ್ಗೆ 10.30ಕ್ಕೆ ಗೋನೂರು ಬಳಸಿ ಸ್ವಾಗತೋತ್ಸವ ಆಯೋಜಿಸಿದೆ. ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.