
ಬಾಗೇಪಲ್ಲಿಯಲ್ಲಿ 13ನೇ ರಾಜ್ಯ ಯುವಜನ ಸಮ್ಮೇಳನ; ಕಲಾ ಜಾಥಾ ಕಾರ್ಯಕ್ರಮ
ಶಿಡ್ಲಘಟ್ಟ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನಿಂದ (ಡಿ.ವೈ.ಎಫ್.ಐ) ಸೆ. 26ರಿಂದ 28ರ ವರೆಗೆ ಬಾಗೇಪಲ್ಲಿಯಲ್ಲಿ ನಡೆಯಲಿರುವ 13ನೇ ರಾಜ್ಯ ಯುವಜನ ಸಮ್ಮೇಳನದ ಅಂಗವಾಗಿ ನಗರದ ಕೋಟೆ ವೃತ್ತದ ಬಳಿ ಶುಕ್ರವಾರ ಕಲಾ ಜಾಥಾ ಕಾರ್ಯಕ್ರಮ ನಡೆಯಿತು.
ಕಲಾ ಜಾಥಾದ ಮೂಲಕ ಜಿಲ್ಲೆಯಾದ್ಯಂತ ಸಂಚರಿಸಿ ಯುವಜನರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಬಾಗೇಪಲ್ಲಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಬಯಲುಸೀಮೆಯ ಜನರು ಎದುರಿಸುತ್ತಿರುವ ಕೃಷಿ ವಿನಾಶ, ನಿರುದ್ಯೋಗ, ನೀರಿನ ಸಮಸ್ಯೆ, ಆರೋಗ್ಯ ಮತ್ತು ಶಿಕ್ಷಣದ ಸಮಸ್ಯೆ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 450 ಯುವಜನ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಯುವಜನರ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರದ ಗಮನ ಸೆಳೆಯುವ ಹಾಗೂ ಪರಿಹಾರಕ್ಕಾಗಿ ಹೋರಾಟ ರೂಪಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿ–ಯುವಜನರು ಮಾದಕ ವ್ಯಸನಗಳಿಂದ ವಿಮುಕ್ತರಾಗಬೇಕು, ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಆರಂಭಿಸಬೇಕು. ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸಬೇಕು. ಜಿಲ್ಲೆಗೆ ಕೃಷ್ಣಾ ನದಿ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಕಲಾಜಾಥಾದಲ್ಲಿ ಮುಂದಿಡಲಾಯಿತು.
ಕಲಾ ಜಾಥಾದ ನಿರ್ದೇಶಕರಾದ ಎ.ವಿ. ವೆಂಕಟರಾಮ್, ಸೋಮಶೇಖರ್, ಚಲಪತಿ, ಶಿವಣ್ಣ, ಮಧುಲತಾ, ದೇವಪ್ಪ ಹಾಗೂ ನಾರಾಯಣಸ್ವಾಮಿ ಹಾಗೂ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಿದರು.