
110 ದಿನಗಳ ನಂತರ ದುಬಾರೆ ಸಾಕಾನೆ ಶಿಬಿರ ಮುಕ್ತ: ಮೊದಲ ದಿನ 150 ಪ್ರವಾಸಿಗರ ಭೇಟಿ
ಮಡಿಕೇರಿ: ಬರೋಬ್ಬರಿ 110 ದಿನಗಳ ನಂತರ ಇಲ್ಲಿನ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರ ಪ್ರವಾಸಿಗರ ವೀಕ್ಷಣೆಗೆ ಭಾನುವಾರ ಮುಕ್ತಗೊಂಡಿತು.
ಮೊದಲ ದಿನ ಸುಮಾರು 10 ಮೀಟರ್‌ಗೂ ಹೆಚ್ಚು ಅಂತರದಿಂದಲೇ 150 ಪ್ರವಾಸಿಗರು ಸಾಕಾನೆಗಳ ಅಂದವನ್ನು ಕಣ್ತುಂಬಿಕೊಂಡರು.
ಈ ಮೊದಲಿದ್ದ ಶಿಬಿರಕ್ಕೂ ಈಗ ಇರುವ ಶಿಬಿರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದು ಕಂಡು ಬಂತು. ಈ ಮೊದಲು ಪ್ರವಾಸಿಗರು ಮುಕ್ತವಾಗಿ ಓಡಾಡಿಕೊಂಡು ಇರಬಹುದಿತ್ತು. ಸಾಕಾನೆಗಳ ಸಮೀಪಕ್ಕೆ ಹೋಗಬಹುದಿತ್ತು, ಅವುಗಳನ್ನು ಮುಟ್ಟಬಹುದಿತ್ತು, ಸೊಂಡಿಲಿನಿಂದ ಆಶೀರ್ವಾದವನ್ನೂ ಪಡೆಯಬಹುದಿತ್ತು. ಆದರೆ, ಈಗ ಇವೆಲ್ಲವನ್ನೂ ನಿರ್ಬಂಧಿಸಲಾಗಿದೆ.
ಆನೆಗಳ ಸಮೀಪದಲ್ಲಿ ಯಾರೂ ಸುಳಿಯದಂತೆ ಬ್ಯಾರಿಕೇಡ್‌ಗಳನ್ನು, ಹಗ್ಗಗಳನ್ನು ಕಟ್ಟಲಾಗಿದೆ. ಕೆಂಪು ವಲಯ ಸೇರಿದಂತೆ ಕೆಲವು ವಲಯಗಳನ್ನಾಗಿ ವಿಂಗಡಿಸಿ, ನಿಗಾ ಇರಿಸಲಾಗಿದೆ. ಬರುವ ಪ್ರವಾಸಿಗರು ಸಾಕಾನೆಗಳನ್ನು ದೂರದಿಂದಲೆ ನೋಡಿ, ದೂರದಿಂದಲೆ ಚಿತ್ರಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ.
ಸದ್ಯ, ಬೆಳಿಗ್ಗೆ 9.30ರಿಂದ 11.30ರವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ, ಬಂದವರಿಗೆ ಪ್ರವೇಶ ಇರುವುದಿಲ್ಲ. 45 ನಿಮಿಷಗಳಷ್ಟು ಕಾಲ 150 ಪ್ರವಾಸಿಗರಿಗೆ ಮಾತ್ರವೇ ಪ್ರವೇಶ ಇರಲಿದೆ. ಪ್ರವಾಸಿಗರನ್ನು 25 ಮಂದಿಯ ಗುಂಪಾಗಿ ರಚಿಸಿ, ಪ್ರವಾಸಿಗ ಗೈಡ್‌ವೊಬ್ಬರ ಜೊತೆ ಕಳುಹಿಸಿಕೊಡಲಾಗುತ್ತದೆ.
ಪ್ರವಾಸಿಗರ ಮೇಲೆ ಅತೀವ ನಿಗಾ ಇರಿಸಿಕೊಂಡೇ ಶಿಬಿರವನ್ನು ತೆರೆಯಲಾಗಿದೆ. ಇಲ್ಲಿರುವ 30 ಸಾಕಾನೆಗಳ ಪೈಕಿ ಸದ್ಯ 10 ಸಾಕಾನೆಗಳನ್ನು ನೋಡಬಹುದಾಗಿದೆ. ಇನ್ನುಳಿದ ಆನೆಗಳು ಮೈಸೂರು ದಸರೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ವನ್ಯಜೀವಿ ಸೆರೆ ಕಾರ್ಯಾಚರಣೆಗೆ ತೆರಳಿವೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಡಾ.ಮಂತರ್‌ಗೌಡ ಶಿಬಿರವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿದರು.
ಡಿಸಿಎಫ್ ಅಭಿಷೇಕ್, ಕುಶಾಲನಗರ ಯೋಜನಾ ಅಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ಉಪ ಅರಣ್ಯ ವಲಯ ಅಧಿಕಾರಿ ಕನ್ನಂಡ ರಂಜನ್, ವೆಂಕಟೇಶ್ ನಲವಡೆ, ಸಿಬ್ಬಂದಿಗಳು ಮಾವುತರು ಕಾವಡಿಗರು, ದುಬಾರೆ ರ‍್ಯಾಫ್ಟಿಂಗ್ ಅಸೋಸಿಯೇಷನ್, ಸಲಹೆಗಾರ ಕೆ.ಎಸ್.ರತೀಶ್, ಮುಖಂಡರಾದ ನಂಗಾರು ಜಗ, ವಸಂತ್, ರಾಜೇಶ್, ವಿಜು ಚೆಂಗಪ್ಪ, ಅಪ್ಪು ಸುನಿತಾ ಭಾಗವಹಿಸಿದ್ದರು.
ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ದುಬಾರೆ; ಮಂತರ್‌ಗೌಡ
ಆನೆ ಶಿಬಿರಕ್ಕೆ ತೆರಳುವ ಸ್ವಾಗತ ಕೇಂದ್ರದಲ್ಲಿ ಪ್ರವಾಸಿಗರಿಗೆ ಟಿಕೆಟ್ ಕೊಡುವ ಮೂಲಕ ಶಿಬಿರವನ್ನು ಪುನರ್ ಆರಂಭಿಸಿದ ಶಾಸಕ ಡಾ.ಮಂತರ್‌ಗೌಡ, ‘ದುಬಾರೆ ಆನೆ ಶಿಬಿರದ ಅಭಿವೃದ್ಧಿಯೊಂದಿಗೆ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬೇಕು’ ಎಂದು ಹೇಳಿದರು.
ಅಹಿತಕರ ಘಟನೆಯೊಂದು ನಡೆದಿದೆ. ಇದರಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಪ್ರತಿಯೊಬ್ಬರೂ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಅರಣ್ಯ ಇಲಾಖೆ ರೂಪಿಸಿರುವ ನಿಯಮಗಳು ಕಟ್ಟುನಿಟ್ಟಾಗಿವೆ. ಈ ನಿಯಮಗಳು ಪ್ರವಾಸಿಗರ ಸುರಕ್ಷತೆಗಾಗಿಯೇ ರೂಪಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ, ಸಾರ್ವಜನಿಕರು ಮತ್ತು ಪ್ರವಾಸಿಗರು ಅರಣ್ಯ ಇಲಾಖೆ ರೂಪಿಸಿರುವ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಯಾವುದೇ ಸಂದರ್ಭಗಳಲ್ಲಿಯೂ ಆನೆಗಳಿಗೆ ಕಿರಿಕಿರಿ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಎರಡು ಸಾಕಾನೆಗಳ ನಡುವಿನ ಕಾಳಗದಲ್ಲಿ ಮಹಿಳೆ ಹಾಗೂ ಸಾಕಾನೆ ಮೃತಪಟ್ಟಿತ್ತು. ಇಂತಹ ಘಟನೆಗಳು ಮುಂದೆ ಮರುಕಳಿಸಿದಂತೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಭೇಟಿ ಅವಧಿ ವಿಸ್ತರಣೆಗೆ ಚಿಂತನೆ; ಡಿಸಿಎಫ್
ಇದೇ ವೇಳೆ ಮಾತನಾಡಿದ ಡಿಸಿಎಫ್ ಅಭಿಷೇಕ್, ‘ಸದ್ಯಕ್ಕೆ ಬೆಳಿಗ್ಗೆ 9.30ರಿಂದ 11.30ರವರೆಗೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಪ್ರವಾಸಿಗರ ಭೇಟಿಗೆ ಹೆಚ್ಚಿನ ಅವಧಿ ನಿಗದಿಪಡಿಸಲು ಚಿಂತಿಸಲಾಗಿದೆ’ ಎಂದರು.
ಶಿಬಿರವು ಸಾರ್ವಜನಿಕ ಪ್ರವೇಶಕ್ಕೆ ಯೋಗ್ಯವಾಗಿರುವ ಬಗ್ಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಬಿರದಲ್ಲಿ ಸುರಕ್ಷತಾ ವಿಧಾನಗಳಲ್ಲಿನ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ಮಂಗಳವಾರ ಶಿಬಿರಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಆ ದಿನದಂದು ಶಿಬಿರದ ನಿರ್ವಹಣಾ ಕಾರ್ಯ ನಡೆಯಲಿದೆ ಎಂದರು.
ಕೇಂದ್ರದಲ್ಲಿ ಮೂರು ವಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಪ್ರವಾಸಿಗರು ಹಸಿರು ವಲಯದಿಂದ 10 ಮೀಟರ್ ಅಂತರದಲ್ಲಿ ಆನೆಗಳನ್ನು ವೀಕ್ಷಿಸಬಹುದು. ಆನೆಗಳ ಜೊತೆ ಯಾವುದೇ ಇತರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.