
Women: ಊಟ ಬಿಟ್ಟು ತೂಕ ಇಳಿಸಲು ಹೋಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆ
ಇದೀಗ ತೂಕ ಇಳಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ತೂಕ ಇಳಿಸಿಕೊಳ್ಳುವುದಕ್ಕಾಗಿ ಜನ ಎಲ್ಲಾ ರೀತಿಯ ಪ್ರಯತ್ನಗಳಿಗೆ ಕೈ ಹಾಕುತ್ತಾರೆ. ಜಿಮ್, ಯೋಗ, ವಾಕಿಂಗ್, ಊಟ-ತಿಂಡಿ ಬಿಡುವುದು,
ಕಠಿಣ ಡಯೆಟ್ ಅನ್ನು ಅನುಸರಿಸುವುದು ಹೀಗೆ ತೂಕ ಇಳಿಸಿಕೊಳ್ಳಲು ಶತ ಪ್ರಯತ್ನ ಮಾಡ್ತಾರೆ. ತೂಕ ಇಳಿಸಿಕೊಳ್ಳುವುದಕ್ಕಾಗಿ ಆಹಾರ ಕ್ರಮದಲ್ಲಿ ಬದಲಾವಣೆ ತಂದರೆ ಪ್ರಯೋಜನವಾಗುತ್ತದೆ ನಿಜ, ಆದರೆ ಅದಕ್ಕೂ ರೀತಿ ನೀತಿಗಳಿವೆ ಅನ್ನುವುದು ಕೂಡಾ ನೆನಪಿರಬೇಕು.
ಚೀನಾದ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳುವುದಕ್ಕೆ ಹೋಗಿ ಇಲ್ಲದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನಾದ ಹೆನಾನ್ ಪ್ರಾಂತ್ಯದ 31 ವರ್ಷದ ಮಹಿಳೆಯೊಬ್ಬರು ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು 15 ದಿನಗಳ ಕಾಲ ಎಲ್ಲಾ ಆಹಾರವನ್ನು ಬಿಟ್ಟು ಬರೀ ನೀರು ಮಾತ್ರ ಕುಡಿಯಲು ನಿರ್ಧಾರ ಮಾಡಿದ್ಧಾರೆ. ಏನೂ ಆಹಾರವನ್ನು ಸೇವಿಸದ ಕಾರಣ ಅವರ ದೇಹ ವೇಗವಾಗಿ ತೂಕವನ್ನು ಕಳೆದುಕೊಳ್ಳುವುದಕ್ಕೆ ಶುರು ಮಾಡಿದೆ. ಕಡಿಮೆ ಅವಧಿಯಲ್ಲಿಯೇ ಅವರು 20 ಕೆ.ಜಿಯಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.
ತೂಕ ಇಳಿಕೆಗೆ ದೇಹದ ಪ್ರತಿಕ್ರಿಯೆ
ಆರಂಭದಲ್ಲಿ, ವೈಟ್ ಲಾಸ್ ಮಾಡಿಕೊಳ್ಳಲು ತಾನು ಅನುಸರಿಸಿಕೊಂಡ ವಿಧಾನ ಸರಿಯಾಗಿಯೇ ಇದೆ ಎಂದು ಮಹಿಳೆ ಅಂದುಕೊಂಡಿದ್ದಾರೆ. ಆದರೆ ದಿನ ಕಳೆದಂತೆ ಅದರ ಸೈಡ್ ಎಫೆಕ್ಟ್ ಕೂಡಾ ಕಾಣಲು ಶುರುವಾಗಿದೆ. ಒಂದೊಂದೇ ಸಮಸ್ಯೆಗಳು ಎದ್ದಿವೆ. ಕ್ರಮೇಣ, ಆಕೆಯ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬಿದ್ದಿದೆ. ಆಕೆಯ ಕಣ್ಣುಗಳನ್ನು ಅತ್ತಿತ್ತ ಚಲಿಸುವುದೂ ಕಷ್ಟವಾಗಿದೆ. ನಡೆದಾಡುವಾಗ ಬ್ಯಾಲೆನ್ಸ್ ಸಿಗುತ್ತಿರಲಿಲ್ಲ. ಎಲ್ಲರಂತೆ ಸಾಮಾನ್ಯವಾಗಿ ನಡೆದಾಡುವುದು ಸಾಧ್ಯವಾಗಲಿಲ್ಲ. ಪೆಂಗ್ವಿನ್‌ನಂತೆ ಹೆಜ್ಜೆ ಇಡುತ್ತಿದ್ದರು. ಅವರ ಸ್ಥಿತಿ ಹದಗೆಡುತ್ತಿದ್ದ ಹಾಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ದೇಹದಲ್ಲಿ ವಿಟಮಿನ್ ಬಿ 1ನ ತೀವ್ರ ಕೊರತೆ
ಆಸ್ಪತ್ರೆಯಲ್ಲಿ ಮಹಿಳೆಯನ್ನು ಪರೀಕ್ಷಿಸಿದ ನಂತರ, ವೈದ್ಯರು ಅವರಿಗೆ ವೆರ್ನಿಕೆ ಎನ್ಸೆಫಲೋಪತಿ ಇದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದು ವಿಟಮಿನ್ ಬಿ 1 ಕೊರತೆಯಿಂದ ಉಂಟಾಗುವ ಗಂಭೀರ ಮೆದುಳಿನ ಸ್ಥಿತಿಯಾಗಿದೆ. ಇದನ್ನು ಥಯಾಮಿನ್ ಎಂದೂ ಕರೆಯುತ್ತಾರೆ. ತುಂಬಾ ದಿನಗಳಿಂದ ಆಹಾರ ಸೇವಿಸದೆ ಇದ್ದ ಕಾರಣ ದೇಹದಲ್ಲಿ ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆ ಉಂಟಾಗಿದೆ. ಮಹಿಳೆಗೆ ಚಿಕಿತ್ಸೆ ನೀಡುತ್ತಿರುವ ನರವಿಜ್ಞಾನಿ ಪ್ರಕಾರ, ಆಕೆಯ ನಡಿಗೆ ಅಸ್ಥಿರವಾಗಿತ್ತು. ವೈದ್ಯರು ಕೂಡಾ ಆಕೆಯ ನಡಿಗೆಯನ್ನು ಪೆಂಗ್ವಿನ್‌ಗೆ ಹೋಲಿಸಿದ್ದಾರೆ. ಚಿಕಿತ್ಸೆಯ ನಂತರ ದೇಹದಲ್ಲಿ ಸುಧಾರಣೆ ಕಂಡು ಬಂದರೂ ಅವರ ನಡಿಗೆ ಮಾತ್ರ ಹಾಗೆಯೇ ಮುಂದುವರಿಯಬಹುದು ಎಂದಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಆ ಮಹಿಳೆ ತೂಕ ಇಳಿಸಿಕೊಳ್ಳುವುದಕ್ಕೆ ಬಿಗು ಎಂಬ ಪ್ರಾಚೀನ ಟಾವೊ ಪದ್ಧತಿಯಿಂದ ಪ್ರಭಾವಿತಳಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಅಸಲಿಗೆ ಇದು ಧಾನ್ಯಗಳಿಂದ ದೂರವಿರುವುದನ್ನು ಒಳಗೊಂಡಿರುತ್ತದೆ. ಆದರೆ ಕೆಲವು ಆಧುನಿಕ ಬದಲಾವಣೆಗಳು ದೀರ್ಘಕಾಲದವರೆಗೆ ಆಹಾರವನ್ನೇ ಸೇವಿಸದೆ ಇರುವಂತೆ ಹೇಳುತ್ತದೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ, ಅಂತಹ ಅನೇಕ ಪದ್ಧತಿಗಳು ಆನ್‌ಲೈನ್‌ನಲ್ಲಿ ವೇಗವಾಗಿ ಹರಡುತ್ತಿವೆ. ದೀರ್ಘಕಾಲದವರೆಗೆ ಆಹಾರ ತಿನ್ನದಿದ್ದರೆ ತೂಕವನ್ನು ಕಳೆದುಕೊಳ್ಳಲು ಅಥವಾ ದೇಹವನ್ನು ನಿರ್ವಿಷಗೊಳಿಸಲು ಸುಲಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ನೀರು ಅಥವಾ ಕೆಲವು ಸಪ್ಲಿಮೆಂಟ್‌ಗಳನ್ನು ಮಾತ್ರ ಸೇವಿಸುವ ಮೂಲಕ ಆರೋಗ್ಯವಾಗಿರಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ ವೈದ್ಯರು ಮಾತ್ರ ಈ ವಿಧಾನವನ್ನು ಒಪ್ಪುವುದಿಲ್ಲ.
ಬರೀ ನೀರು ಕುಡಿದು ಬದುಕು ಸಾಧ್ಯವೇ?
ಕೇವಲ ನೀರು ಕುಡಿದು ನಾವು ಬದುಕುತ್ತೇವೆ ಎಂದರೆ ಅದು ಸಾಧ್ಯವಿರದ ಮಾತು. ದೇಹಕ್ಕೆ ಶಕ್ತಿ, ಪ್ರೋಟೀನ್‌ಗಳು, ಜೀವಸತ್ವಗಳು, ಖನಿಜಗಳು, ಎಲೆಕ್ಟ್ರೋಲೈಟ್‌ಗಳು ಸೇರಿದಂತೆ ಅನೇಕ ಪೋಷಕಾಂಶಗಳು ಬೇಕಾಗುತ್ತವೆ.
ಒಬ್ಬ ವ್ಯಕ್ತಿಯು ತುಂಬಾ ಸಮಯದವರೆಗೆ ಆಹಾರ ಬಿಟ್ಟಾಗ ಈ ಕೊರತೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ನಿರ್ದಿಷ್ಟವಾಗಿ ವಿಟಮಿನ್ ಬಿ 1 ಕೊರತೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಗೊಂದಲ, ಸ್ಮರಣಶಕ್ತಿ ಸಮಸ್ಯೆಗಳು, ಕಣ್ಣಿನ ಚಲನೆಯ ತೊಂದರೆಗಳು ಮತ್ತು ನಡೆಯುವಾಗ ಬ್ಯಾಲೆನ್ಸ್ ಇಲ್ಲದಿರುವ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ತುಂಬಾ ದಿನಗಳವರೆಗೆ ಆಹಾರ ಸೇವಿಸದೆ ಇದ್ದಾಗ ಎಲೆಕ್ಟ್ರೋಲೈಟ್ ಸಮತೋಲನ ಕೂಡಾ ತಪ್ಪುತ್ತದೆ. ಇದು ಹೃದಯ, ಮೆದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ಅಪಾಯಕಾರಿಯಾಗಬಹುದು.
ಹಿಂದೆಯೂ ನಡೆದಿತ್ತು ಇಂಥದ್ದೇ ಘಟನೆ
ದೀರ್ಘಕಾಲದವರೆಗೆ ಆಹಾರ ಸೇವಿಸದೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಚೀನಾದಲ್ಲಿ ಈ ಹಿಂದೆಯೂ ಅತಿ ದೀರ್ಘ ಉಪವಾಸಗಳಿಗೆ ಸಂಬಂಧಿಸಿದ ಗಂಭೀರ ಘಟನೆಗಳು ನಡೆದಿವೆ. 2020 ರಲ್ಲಿ, ಹೈಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ 26 ವರ್ಷದ ವ್ಯಕ್ತಿಯೊಬ್ಬರು 52 ದಿನಗಳ ಕಾಲ ಕೇವಲ ನೀರನ್ನು ಮಾತ್ರ ಕುಡಿದು ಬದುಕಿರುವ ಬಗ್ಗೆಯೂ ವರದಿಯಾಗಿದೆ. ನಂತರ ಅವರಲ್ಲಿ ಬುದ್ಧಿಮಾಂದ್ಯತೆಯಂತಹ ಲಕ್ಷಣಗಳು ಕಾಣಿಸಿಕೊಂಡಿತ್ತು.
ತ್ವರಿತ ತೂಕ ನಷ್ಟ ಯಾವಾಗಲೂ ಆರೋಗ್ಯಕರವಲ್ಲ
ಈ ಇಡೀ ಘಟನೆಯು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ತ್ವರಿತ ತೂಕ ಇಳಿಸುವ ವಿಧಾನಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಕೆಲವು ಪೌಂಡ್‌ಗಳನ್ನು ಕಳೆದುಕೊಳ್ಳುವುದು ಒಂದು ಸಾಧನೆ. ಆದರೆ ದೇಹವು ಏಕಕಾಲದಲ್ಲಿ ಅಗತ್ಯ ಪೋಷಕಾಂಶಗಳಿಂದ ವಂಚಿತವಾದರೆ, ಪರಿಣಾಮಗಳು ಅತ್ಯಂತ ಗಂಭೀರವಾಗಿರಬಹುದು. ತೂಕ ಇಳಿಸಿಕೊಳ್ಳಲು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು ಸುರಕ್ಷಿತ ವಿಧಾನ ಅಲ್ಲವೇ ಅಲ್ಲ. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುವ ಎಲ್ಲಾ ವಿಧಾನಗಳನ್ನು ಅಳವಡಿಸಿಕೊಂಡರೆ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ.