UPI ಬಳಕೆ ಕುಸಿತ, ಕಾರಲ್ಲಿ ₹ 9 ಕೋಟಿ ಪತ್ತೆ ಸೇರಿ ಈ ವಾರದ ಪ್ರಮುಖ 10 ಸುದ್ದಿಗಳು

UPI ಬಳಕೆ ಕುಸಿತ, ಕಾರಲ್ಲಿ ₹ 9 ಕೋಟಿ ಪತ್ತೆ ಸೇರಿ ಈ ವಾರದ ಪ್ರಮುಖ 10 ಸುದ್ದಿಗಳು

UPI ಬಳಕೆ ಕುಸಿತ, ಕಾರಲ್ಲಿ ₹ 9 ಕೋಟಿ ಪತ್ತೆ ಸೇರಿ ಈ ವಾರದ ಪ್ರಮುಖ 10 ಸುದ್ದಿಗಳು

UPI ಬಳಕೆ ಕುಸಿತ, ಬೆಂಗಳೂರಿನಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ₹ 9 ಕೋಟಿ ಪತ್ತೆ, ನಿರೂಪಣೆಗೆ ಅನುಪಮಾ ಗೌಡ ವಿದಾಯ, ಇಂದೋರ್‌ ಸ್ಮಾರ್ಟ್‌ ಸಿಟಿ ರಸ್ತೆ ಬಿರುಕು ಸೇರಿದಂತೆ ‌ಈ ವಾರ (ಆಗಸ್ಟ್‌ 17ರಿಂದ 23ರವರೆಗೆ) ಹೆಚ್ಚು ಓದುಗರನ್ನು ಸೆಳೆದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಸ್ಮಾರ್ಟ್ ಸಿಟಿಯ ರಸ್ತೆಯನ್ನೇ ಸೀಳಿಕೊಂಡು ಉಕ್ಕಿದ ನೀರು: ಬೆಚ್ಚಿದ ಪ್ರಯಾಣಿಕರು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇತ್ತೀಚೆಗೆ ಹಾಕಿರುವ ನಿರಂತರ (24X7) ನೀರು ಸರಬರಾಜು ಪೈಪ್‌ಲೈನ್‌ ಪರೀಕ್ಷೆ ವೇಳೆ, ರಸ್ತೆಯೇ ಬಿರುಕು ಬಿಟ್ಟಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ರಸ್ತೆಯನ್ನು, ಮೂರು ವರ್ಷಗಳ ಹಿಂದೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಸುಮಾರು ₹ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ರಸ್ತೆ ಪಕ್ಕದ ಮಳಿಗೆಯೊಂದರಲ್ಲಿ ಹಾಕಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ವಿಡಿಯೊ ಹಂಚಿಕೊಂಡು 8 ವರ್ಷಗಳ ನಿರೂಪಣೆಗೆ ವಿದಾಯ ಹೇಳಿದ ಅನುಪಮಾ ಗೌಡ

ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ಅವರು ತಮ್ಮ 8 ವರ್ಷಗಳ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದಾರೆ.

ಅನುಬಂಧ ಅವಾರ್ಡ್ಸ್‌, ಸೀರಿಯಲ್ ಸಂತೆ, ರಾಜ ರಾಣಿ, ಕ್ವಾಟ್ಲೆ ಕಿಚನ್, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಜನಪ್ರಿಯರಾಗಿದ್ದ ಅನುಪಮಾ ಅವರು, ತಮ್ಮಿಷ್ಟದ ವೃತ್ತಿಗೆ ಇದೇ ವಾರ ವಿದಾಯ ಘೋಷಿಸಿದ್ದರು.

ಹಾರೋಹಳ್ಳಿ ಬಳಿ ಬೆಂಗಳೂರು 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ

ಬೆಂಗಳೂರು ಸುತ್ತಮುತ್ತ ಅಂತರರಾಷ್ಟ್ರೀಯ ಎರಡನೇ ವಿಮಾನ ನಿಲ್ದಾಣ ಮಾಡುವುದಕ್ಕೆ ಸರ್ಕಾರ ಮುಂದಾಗಿದ್ದು, ಕನಕಪುರ ರಸ್ತೆಯಲ್ಲಿಯೇ ಬಹುತೇಕ ವಿಮಾನ ನಿಲ್ದಾಣ ರೂಪುಗೊಳ್ಳಲಿದೆ.

ಅದರಲ್ಲೂ ವಿಮಾನ ನಿಲ್ದಾಣಕ್ಕೆ ಈಗಾಗಲೇ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ರಸ್ತೆಯಲ್ಲಿ ಎರಡು ಹಾಗೂ ನೆಲಮಂಗಲ ಸಮೀಪ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಕನಕಪುರ ರಸ್ತೆಯ ಹಾರೋಹಳ್ಳಿ ಪ್ರದೇಶದಲ್ಲಿಯೇ ಸೂಕ್ತ ಸ್ಥಳ ಪರಿಶೀಲಿಸುವ ಕಾರ್ಯಕ್ರಮ ಪ್ರಗತಿಯಲ್ಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದರು. ಈ ಬಗ್ಗೆ ಆಗಸ್ಟ್‌ 20ರಂದು ಸುದ್ದಿ ಪ್ರಕಟಿಸಲಾಗಿತ್ತು.

ಶೃಂಗೇರಿ ಮರು ಮತ ಎಣಿಕೆ ಪ್ರಕರಣ: ಕಾಂಗ್ರೆಸ್ ಶಾಸಕ ರಾಜೇಗೌಡ ಮತ್ತೆ ನಿರಾಳ

ಶೃಂಗೇರಿ ಶಾಸಕರನ್ನಾಗಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರನ್ನು ಮರುಸ್ಥಾಪಿಸಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಮತ್ತೆ ಮುಂದುವರಿಸಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದೆ.

ರಾಜೇಗೌಡ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಆಗಸ್ಟ್‌ 19ರಂದು ನಡೆಸಿದ್ದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

‘ಕ್ಯಾಶ್ ಲೆಸ್’ ಕನಸಿಗೆ ಹಿನ್ನಡೆ: UPI ಬಳಕೆ ಕುಸಿತ, ನಗದು ವಹಿವಾಟಿನತ್ತ ಚಿತ್ತ

ಯುಪಿಐ ಪಾವತಿ ಮೇಲೆ ವ್ಯಾಪಾರಿ ಶುಲ್ಕ(ಎಂಡಿಆರ್) ವಿಧಿಸುವ ಕ್ರಮದ ಕುರಿತು ಈ ಬಾರಿಯ ಸಂಸತ್ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯೊಂದು ಅಂಗೀಕಾರಗೊಂಡ ಬೆನ್ನಲ್ಲೇ ಡಿಜಿಟಲ್‌ ಪಾವತಿಯಲ್ಲಿ ಕುಸಿತ ಮತ್ತು ನಗದು ವಹಿವಾಟು ಹೆಚ್ಚಳವಾಗುತ್ತಿರುವ ಅಂಶದ ಮೇಲೆ ವರದಿಯೊಂದು ಬೆಳಕು ಚೆಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದತ್ತಾಂಶಗಳ ಪ್ರಕಾರ, ಸಾರ್ವಜನಿಕರ ಬಳಿಯಿರುವ ನಗದು ಪ್ರಮಾಣದ ಬೆಳವಣಿಗೆ ದರವು ಕೋವಿಡ್-19 ಅವಧಿಯಲ್ಲಿ ಅಂದರೆ 2020–21ರಲ್ಲಿ ಸುಮಾರು ಶೇ 17ರ ಗರಿಷ್ಠ ಮಟ್ಟ ತಲುಪಿತ್ತು. 2023-24ರ ಅವಧಿಯಲ್ಲಿ ಶೇ 4ರ ಮಟ್ಟಕ್ಕೆ ಇಳಿದಿದ್ದರೂ, ನಂತರ ಮತ್ತೆ ಏರಿಕೆಯಾಗಿದೆ.

ಪಟ್ಟು ಬಿಡದ ಪವನ್, ಮಣಿಯದ ನಾಯ್ಡು: ಆಂಧ್ರ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು?

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಜನಸೇನಾ ಪಕ್ಷದ ನಡುವೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ.

ಜನಸೇನಾ ಪಕ್ಷದ ಮುಖ್ಯಸ್ಥ, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ರಾಜ್ಯ ಸಚಿವ ಸಂಪುಟ ಸಭೆಗಳಿಗೆ ಪದೇ ಪದೇ ಗೈರು ಹಾಜರಾಗುತ್ತಿರುವುದು ಮತ್ತು ಟಿಡಿಪಿ ಅಧ್ಯಕ್ಷ, ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರೊಂದಿಗೆ ವೇದಿಕೆ ಹಂಚಿಕೊಳ್ಳದಿರುವುದು ಈ ವದಂತಿಗೆ ಪುಷ್ಟಿ ನೀಡಿದೆ.

ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ, ಟಿಡಿಪಿ ಮತ್ತು ಬಿಜೆಪಿ ಜೊತೆಗೆ ಜನಸೇನಾ ಪ್ರಮುಖ ಪಾಲುದಾರ ಪಕ್ಷವಾಗಿದೆ.

ಕೇಂದ್ರ ಗೃಹ ಸಚಿವನಾದರೆ RSSಗೆ ಬರುವ ವಿದೇಶಿ ದೇಣಿಗೆ ತನಿಖೆ: ಪ್ರಿಯಾಂಕ್ ಖರ್ಗೆ

‘2029ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತಂದು, ನನ್ನನ್ನು ಕೇಂದ್ರ ಗೃಹ ಸಚಿವರನ್ನಾಗಿ ಮಾಡಿದರೆ ಆರ್‌ಎಸ್‌ಎಸ್‌ಗೆ ಬರುವ ವಿದೇಶಿ ದೇಣಿಗೆ ಕುರಿತು ತನಿಖೆ ನಡೆಸುತ್ತೇವೆ’ ಎಂದು ಗೃಹಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದರು.

ಕಳೆದವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ‘ವಿದೇಶಿ ದೇಣಿಗೆ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ದೂರು ನೀಡಿದರೆ ರಾಜ್ಯದಲ್ಲಿ ಸಂಘಕ್ಕೆ ಯಾವ ರೀತಿ ದೇಣಿಗೆ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ಮಾಡಿಸುತ್ತೇನೆ’ ಎಂದಿದ್ದರು.

ಕೊಬ್ಬರಿ ಚಿಪ್ಪು: ಕೇರಳದಲ್ಲೂ ಭಾರಿ ಬೇಡಿಕೆ

ಕೇರಳದಲ್ಲೂ ಕೊಬ್ಬರಿ ಚಿಪ್ಪಿಗೆ ಭಾರಿ ಬೇಡಿಕೆ ಬಂದಿದ್ದು, ಒಂದು ಕೆ.ಜಿ ಚಿಪ್ಪು ₹30ರಿಂದ ₹38 ದರದಲ್ಲಿ ಖರೀದಿಯಾಗುತ್ತಿದೆ.

ಮೂರು ವರ್ಷಗಳ ಹಿಂದೆ ಒಂದು ಕೆ.ಜಿ ಕೊಬ್ಬರಿ ಚಿಪ್ಪಿನ ಬೆಲೆ ₹5ರಿಂದ ₹10ರವರೆಗೆ ಇತ್ತು. ಈಗ 5 ಪಟ್ಟು ಹೆಚ್ಚಾಗಿದೆ.

ಬೆಂಗಳೂರು: ಕಾರಿನಲ್ಲಿ ₹ 9 ಕೋಟಿ ಪತ್ತೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಆಧರಿಸಿ ಆಗಸ್ಟ್‌ 21ರಂದು ಕಾರ್ಯಾಚರಣೆ ನಡೆಸಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಕಾರಿನಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹9 ಕೋಟಿಯನ್ನು ಜಪ್ತಿ ಮಾಡಿದ್ದರು.

ಬೆಂಗಳೂರಿನ ಸಿಂಧೂ ಚಿನ್ನಾಭರಣ ಅಂಗಡಿ ಮಾಲೀಕ ಸಚಿನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಚಿನ್ ಮನೆಯಲ್ಲೂ ₹1.3 ಕೋಟಿ ಪತ್ತೆಯಾಗಿದೆ.‌ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಹಣದ ಮೂಲ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.

ಸಂಪರ್ಕಕ್ಕೆ ಸಿಗದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್

ಎಂಎಸ್‌ಎಂಇ (ಸೂಕ್ಷ್ಮ ಹಾಗೂ ಸಣ್ಣ ಉದ್ಯಮ) ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು ನಾಪತ್ತೆ ಆಗಿರುವ ಶಂಕೆಯಿದ್ದು, ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ ಎಂದು ಶನಿವಾರ ವರದಿಯಾಗಿತ್ತು.

ಜ್ಞಾನೇಂದ್ರ ಕುಮಾರ್ ಅವರು, ಆಗಸ್ಟ್ 20ರ ಮಧ್ಯಾಹ್ನದಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆ ಬಗ್ಗೆ ಅವರದೇ ಬ್ಯಾಚ್‌ನ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರು ಪೊಲೀಸ್ ಕಚೇರಿಗೆ ಮಾಹಿತಿ ನೀಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ