
Tungabhadra Dam: ಕಾವೇರಿ ಬೆನ್ನಲ್ಲೇ ತುಂಗಭದ್ರಾ ಸಮಸ್ಯೆ: ಆಂಧ್ರಕ್ಕೆ ಹೋಗದಂತೆ ನೀರು ತಡೆದ ರೈತರು, ಆಕ್ರೋಶ!
ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ತುಂಗಭದ್ರಾ ಜಲಾಶಯವು ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆ ನಂತರ ಅಪಾರ ಪ್ರಮಾಣದ ನೀರು ಸಂಗ್ರಹಿಸಿಟ್ಟುಕೊಂಡಿದೆ. ಈ ನೀರನ್ನು ಆಗಸ್ಟ್ 11ರಿಂದ ಬಿಡುಗಡೆ ಮಾಡಲಾಗುತ್ತಿದ್ದು, ಇದೀಗ ಆಂಧ್ರ ಪ್ರದೇಶಕ್ಕೆ ನೀರು ಹೋಗದಂತೆ ಕರ್ನಾಟಕದ ರೈತರು ತಡೆದಿದ್ದಾರೆ. ಈ ಮೂಲಕ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಡುವಿನ ನೀರಿನ ಸಮಸ್ಯೆ ಉದ್ಭವಕ್ಕೆ ಕಾರಣವಾಯಿತಾ? ಎಂಬ ಅನುಮಾನ ಶುರುವಾಗಿದೆ. ರಾಜ್ಯದಲ್ಲಿ ಕಾವೇರಿ ನೀರಿನ ಬಿಕ್ಕಟ್ಟು ಜೀವಂತ ಇರುವಾಗಲೇ ಮತ್ತೊಂದು ಆಂಧ್ರ-ಕರ್ನಾಟಕ ಗಡಿ ಭಾಗದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.
ಈ ವರ್ಷದ ತುಂಗಭದ್ರಾ ನೀರಿನ ಹಂಚಿಕೆಯನ್ನು ನಿರ್ಧರಿಸಲು ಇನ್ನೂ ಯಾವುದೇ ಸಭೆ ನಡೆಯದ ಕಾರಣ, ಬಳ್ಳಾರಿಯ ರೈತರು ಆಂಧ್ರ ಪ್ರದೇಶದ ಕಡೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶ-ಕರ್ನಾಟಕ ಗಡಿಯಲ್ಲಿರುವ ತುಂಗಭದ್ರಾ ಕೆಳ ಹಂತದ ಕಾಲುವೆ ಮರಳಿನ ಚೀಲಗಳನ್ನು ರೈತರು ಇಟ್ಟು ಹರಿವ ನೀರನ್ನು ತಡೆದಿದ್ದಾರೆ. ಯಾವುದೇ ಕಾರಣಕ್ಕು ನೀರು ಮುಂದೆ ಹೋಗಬಾರದು ಎಂದು ರಾಶಿ ಚೀಲಗಳನ್ನು ಕಾಲುವೆಗೆ ಹಾಕಿದ್ದಾರೆ.
ಐದು ದಿನಗಳಿಂದ ಡ್ಯಾಂನಿಂದ ನೀರು ಬಿಡಲಾಗಿದೆ. ಅಣೆಕಟ್ಟಿನ ಕಳೆದ ಭಾಗದ ಹೊಲಗಳಿಗೆ ನೀರು ಏರುತ್ತಿಲ್ಲ. ಇತ್ತ ಸರ್ಕಾರ ಆಂಧ್ರ ಭಾಗಕ್ಕೆ ನೀರನ್ನು ಹರಿಸುತ್ತಿದೆ ಎಂದು ರಾಜ್ಯದ ರೈತರ ಆಕ್ರೋಶ ಹೊರ ಹಾಕಿದ್ದಾರೆ. ತುಂಗಭದ್ರಾ ನೀರು ಸ್ವೀಕರಿಸುವ ನೆರೆಯ ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳ ಪೈಕಿ ಆಂಧ್ರದಲ್ಲಿ ಈ ವರ್ಷದ ತುಂಗಭದ್ರಾ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಇನ್ನೂವರೆಗೆ ಸಭೆ ಆಗಿಲ್ಲ ಎನ್ನಲಾಗಿದೆ.
ಡ್ಯಾಂ ಕೆಳಮಟ್ಟದ ಕಾಲುವೆ ಬಳಿ ನೀರು ತಡೆ: ರೈತರ ಮುಖಂಡ ಹೇಳಿದ್ದೇನು?
ತುಂಗಭದ್ರಾ ಅಣೆಕಟ್ಟಿನ ಕೆಳಭಾಗದ ಕಾಲುವೆ ಎಲ್ ಎಲ್ ಸಿ ಕಾಲುವೆ ಬಳಿ (ಕರ್ನಾಟಕ ಮತ್ತು ಆಂಧ್ರ ಗಡಿ 155 ಕಿಮೀ.) ಯಲ್ಲಿ ಕಾಲುವೆಯಲ್ಲಿ ನೀರು ತಡೆಯಲಾಗಿದೆ. ನೀರು ಮುಂದೆ ಹರಿಯುತ್ತಿರುವ ಕಾರಣ ಇಲ್ಲಿನ 141 ರಿಂದ 145 ಡಿಪಿಗಳಿಗೆ ನೀರು ಏರುತ್ತಿಲ್ಲ. ಸಿಂದವಾಳ, ಎರಗುಡಿ, ಗೋನಾಳ ಸೇರಿ ವಿವಿಧ ಗ್ರಾಮಗಳ ರೈತರಿಗೆ ನೀರು ಸಿಗದೇ ತೊಂದರೆ ಆಗುತ್ತಿದೆ. ಸದ್ಯದ ಕರ್ನಾಟಕಕ್ಕೆ ನಿಗದಿಯಾದ ನೀರನ್ನು ಬಿಡುಗಡೆ ಮಾಡಲಾಗಿದೆ. ಆಂಧ್ರ ಪ್ರದೇಶ ಪಾಲಿನ ನೀರು ಇನ್ನೂ ಬಿಟ್ಟಿಲ್ಲ ಎಂದು ಹೇಳಿದರು.
ತಮಿಳುನಾಡಿನಂತೆ ನಮಗೆ ಖ್ಯಾತೆ ಬೇಕಿಲ್ಲ!
ಆಂಧ್ರ ಪ್ರದೇಶಕ್ಕೆ ಮೀಸಲಾದ ನೀರನ್ನು ಬಿಡುಗಡೆ ಮಾಡಿದಾಗ ನಾವೇ ತಡೆದ ಕಾಲುವೆಯಿಂದಲೇ ನೀರನ್ನು ಬಿಡುತ್ತೇವೆ. ನಾವು, ನೆರೆ ರಾಜ್ಯದವರು ಸಹೋದರರಂತೆ ಇದ್ದೇವೆ. ನಮಗೆ ಕಾವೇರಿ ನೀರು ವಿಚಾರದಂತೆ ತಮಿಳುನಾಡಿನ ರೀತಿಯ ಖ್ಯಾತೆ ಬೇಕಾಗಿಲ್ಲ. ಇಲ್ಲಿ ಅಧಿಕಾರಿಗಳು ನೀರು ಬಿಡುಗಡೆಯಲ್ಲಿ ತಪ್ಪು ಮಾಡುತ್ತಿದ್ದಾರೆ. ಹೀಗಾದಂತೆ ನೋಡಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸಮ್ಮುಖದಲ್ಲಿ ರೈತರ ಮುಖಂಡರು ತಿಳಿಸಿದ್ದಾರೆ.
ಸರ್ಕಾರಕ್ಕೆ ಮತ್ತೊಂದು ಸವಾಲು?
ಕರ್ನಾಟಕ, ಆಂಧ್ರ ಎರಡು ರಾಜ್ಯಗಳ ಜನರು ಸಹೋದರರಂತಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಕಾವೇರಿ ನೀರಿನ ತಲೆ ಬಿಸಿ ಇದೆ. ಹೀಗಿರುವಾಗ ತುಂಗಭದ್ರಾ ನದಿ ನೀರು ಬಿಡುಗಡೆಯನ್ನು ತಡೆಯುತ್ತಾ, ಅಥವಾ ರಾಜ್ಯದ ರೈತರಿಗೆ ಈ ಕುರಿತು ಮನವರಿಕೆ ಮಾಡಿಕೊಡುತ್ತಾ ಕಾದು ನೋಡಬೇಕಿದೆ.
90 ದಿನಗಳ 4100 ಕ್ಯೂಸೆಕ್ ನೀರು ಬಿಡುಗಡೆ: ಸಚಿವ
ಆಗಸ್ಟ್ 11ರಂದು ಸಭೆ ನಡೆಸಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ತುಂಗಭದ್ರಾ ಜಲಾಶಯದಲ್ಲಿನ ನೀರಿನ ಸಂಗ್ರಹ, ಲಭ್ಯತೆ ನೋಡಿಕೊಂಡು ಮುಂದಿನ ಮೂರು ತಿಂಗಳು 4100 ಕ್ಯೂಸೆಕ್ ನಂತೆ ಕಾಲುವೆಗಳಿಗೆ ಬಿಡಲಾಗುವುದು ಎದು ತಿಳಿಸಿದ್ದರು.
ತುಂಗಭದ್ರಾ ಅಣೆಕಟ್ಟಿನಲ್ಲಿ ಆಗಸ್ಟ್ 11ರಂದು 82 ಟಿಎಂಸಿ ನೀರಿನ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ 16 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬರುವ ನಿರೀಕ್ಷೆ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ 11ರಂದು ಮತ್ತೊಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು ಎಂದು ಸಚಿವರು ಹೇಳಿದ್ದರು.