PV Web Exclusive: ಪೊಲೀಸರೇ ಪೂಜಿಸುವ ಕಣಿವೆ ಮಾರಮ್ಮ!

PV Web Exclusive: ಪೊಲೀಸರೇ ಪೂಜಿಸುವ ಕಣಿವೆ ಮಾರಮ್ಮ!

PV Web Exclusive: ಪೊಲೀಸರೇ ಪೂಜಿಸುವ ಕಣಿವೆ ಮಾರಮ್ಮ!

ಪೊಲೀಸ್‌ ಠಾಣೆ ಎಂದ ಕೂಡಲೇ ಮನಸ್ಸಿನಲ್ಲಿ ಒಂದು ರೀತಿಯ ಭಯ ಮೂಡುತ್ತದೆ. ಠಾಣೆಯ ಆವರಣದಲ್ಲಿ ಗೋಜು ಗದ್ದಲ. ನ್ಯಾಯ ಕೇಳಲು ಬಂದವರು, ಆರೋಪಿ ಸ್ಥಾನದಲ್ಲಿ ನಿಂತವರು, ಖಾಕಿದಾರಿ ಸಿಬ್ಬಂದಿಯ ಬೈಗುಳ ಇವೆಲ್ಲವೂ ಸಾಮಾನ್ಯ. ಆದರೆ, ಇಲ್ಲಿ ವಿಶೇಷ ಪೊಲೀಸ್‌ ಠಾಣೆಯೊಂದಿದೆ. ಇಲ್ಲಿಗೆ ಯಾರೇ ಬಂದರೂ ಠಾಣೆ ಮೆಟ್ಟಿಲೇರುವುದಕ್ಕೂ ಮೊದಲು ದೇವರ ದರ್ಶನ ಪಡೆಯುತ್ತಾರೆ. ಪೊಲೀಸರ ಸದ್ದುಗದ್ದಲಕ್ಕೂ ಮೊದಲು ಇಲ್ಲಿ ಗಂಟೆನಾದ ಮೊಳಗುತ್ತದೆ. ನ್ಯಾಯ ಕೇಳಲು ಬಂದ ಜನರು ಮಾತ್ರ ದೇವರ ದರ್ಶನ ಪಡೆಯುವುದಿಲ್ಲ. ಪೊಲೀಸರು ಕೂಡ ದೇವರ ದರ್ಶನ ಪಡೆದೇ ಒಳಗೆ ತೆರಳುತ್ತಾರೆ. ದರ್ಶನ ಪಡೆಯುವುದಷ್ಟೇ ಅಲ್ಲ, ದೇವಾಲಯದಲ್ಲಿ ನಡೆಯುವ ಪೂಜೆ, ಪುನಸ್ಕಾರ, ಆರತಿ, ಅಭಿಷೇಕ, ಹಬ್ಬ, ಅನ್ನ ಸಂತರ್ಪಣೆ ಎಲ್ಲವೂ ಪೊಲೀಸರ ನೇತೃತ್ವದಲ್ಲೇ ನಡೆಯುತ್ತವೆ.

ಚಿತ್ರದುರ್ಗದ ಅಂಬೇಡ್ಕರ್‌ ವೃತ್ತದಲ್ಲಿರುವ ಪಟ್ಟಣ ನಗರ ಠಾಣೆ ಆವರಣ ಒಂದು ರೀತಿಯ ದೇವಾಲಯದ ಆವರಣವೂ ಆಗಿದೆ. ಠಾಣೆಯ ಆರವರಣದಲ್ಲೇ ಕಣಿವೆ ಮಾರಮ್ಮ ದೇವಾಲಯವಿದ್ದು ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ಪೊಲೀಸರೇ ನೆರವೇರಿಸುತ್ತಾರೆ. ಈ ಕಾರಣಕ್ಕಾಗಿ ‘ಪೊಲೀಸರೇ ಪೂಜಿಸುವ ಕಣಿವೆ ಮಾರಮ್ಮ ದೇವಾಲಯ’ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮವನ್ನೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ಚಾಲನೆ ನೀಡುತ್ತಾರೆ. ‘ನಗರ ಪೊಲೀಸ್ ಠಾಣೆ ಕಣಿವೆ ಮಾರಮ್ಮ ಸಮಿತಿ’ಯೂ ಇದ್ದು ಎಲ್ಲಾ ಕಾರ್ಯಕ್ರಮಗಳನ್ನು ಸಮಿತಿಯೇ ನೋಡಿಕೊಳ್ಳುತ್ತದೆ.

ಪ್ರತಿ ಮಾರ್ಚ್‌ನಲ್ಲಿ ನಡೆಯುವ ಕಣಿವೆ ಮಾರಮ್ಮ ದೇವಿ ಜಾತ್ರೆ ವೈಭವಯುತವಾಗಿ ನಡೆಯುತ್ತದೆ. ಚಿತ್ರದುರ್ಗದ ನಾಗರಿಕರಿಗೆ ಪೊಲೀಸ್‌ ಠಾಣೆ ವತಿಯಿಂದಲೇ ಅನ್ನ ಸಂತರ್ಪಣೆ ನಡೆಸಲಾಗುತ್ತದೆ. ಜೊತೆಗೆ ಪ್ರತಿ ಹಬ್ಬಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ಇಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುತ್ತದೆ. ಇಲ್ಲಿ ಪ್ರತಿನಿತ್ಯವೂ ವಿಶೇಷ ಪೂಜಾ ಕೈಂಕರ್ಯ ನಡೆಯುತ್ತದೆ. ಮಂಗಳವಾರ, ಶುಕ್ರವಾರ ಸಾವಿರಾರು ಜನರು ದೇವಿಯ ದರ್ಶನ ಪಡೆಯುತ್ತಾರೆ. ನಗರ ಮಾತ್ರವಲ್ಲದೇ ಜಿಲ್ಲೆ, ಹೊರಜಿಲ್ಲೆಗಳ ಜನರು ಪೊಲೀಸ್‌ ಠಾಣೆಯ ಆವರಣದಲ್ಲಿರುವ ಕಣಿವೆ ಮಾರಮ್ಮ ದೇವಿಯ ದರ್ಶನ ಪಡೆಯುತ್ತಾರೆ.

ಪೊಲೀಸ್‌ ಠಾಣೆ ಆವರಣದಲ್ಲಿ ಕಣಿವೆ ಮಾರಮ್ಮ ದೇವಿ ಪ್ರತಿಷ್ಠಾಪನೆಯಾಗಲು ಒಂದು ಐತಿಹಾಸಿಕ ಹಿನ್ನೆಲೆ ಇದೆ. ಹಿಂದಿನಿಂದಲೂ ತಾಲ್ಲೂಕಿನ ಕುಂಚಿಗನಾಳ್‌ ಗ್ರಾಮದ ಬಳಿ ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಕಣಿವೆ ಪ್ರದೇಶದಲ್ಲಿ ಕಣಿವೆ ಮಾರಮ್ಮ ದೇವಾಲಯವಿದೆ. ಇಲ್ಲಿ 2 ಸಮುದಾಯಗಳ ನಡುವೆ ಪೂಜೆ ವಿಚಾರಕ್ಕೆ ಹಲವು ವರ್ಷಗಳವರೆಗೆ ವೈಮನಸ್ಸು ಇತ್ತು. ಪ್ರತಿ ಜಾತ್ರೆಯ ಸಂದರ್ಭದಲ್ಲಿ ಹೊಡೆದಾಟಗಳು ನಡೆಯುತ್ತಿದ್ದವು.  1982ರಲ್ಲಿ ಜಾತ್ರೆಯ ವೇಳೆ ಗ್ರಾಮಾಂತರ ಪೊಲೀಸ್‌ ಠಾಣೆ (ಈಗ ಅದು ನಗರ ಪೊಲೀಸ್‌ ಠಾಣೆಯಾಗಿದೆ) ಪೊಲೀಸರು ಭದ್ರತಾ ಕರ್ತ‌ವ್ಯಕ್ಕೆ ತೆರಳಿದ್ದರು.

2 ಸಮುದಾಯಗಳ ನಡುವಿನ ಗೊಂದಲ ತೀವ್ರ ಸ್ವರೂಪ ಪಡೆದುಕೊಂಡಾಗ ಪೊಲೀಸರು ಮುಂಜಾಗೃತಾ ದೃಷ್ಟಿಯಿಂದ ದೇವಿಯ ಮೂರ್ತಿಯನ್ನೇ ಜಪ್ತಿ ಮಾಡಿ ಠಾಣೆಯಲ್ಲಿ ತಂದಿಟ್ಟರು. ಎರಡೂ ಗುಂಪುಗಳ ನಡುವಿನ ಗೊಂದಲ ತಿಳಿಯಾದ ನಂತರ ಮೂರುತಿ ಕೊಡುವುದಾಗಿ ತಿಳಿಸಿದ್ದರು. ಆದರೆ ಹಲವು ವರ್ಷಗಳವರೆಗೆ ಗೊಂದಲ ಮುಗಿಯಲೇ ಇಲ್ಲ. ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ ಕಾರಣ ದೇವಿಯ ಮೂರುತಿ ಪೊಲೀಸ್‌ ಠಾಣೆಯಲ್ಲೇ ಉಳಿಯಿತು. ಆಗ ಶ್ರೀನಿವಾಸ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು.

ಪರಿಸ್ಥಿತಿ ತಿಳಿಯಾಗದ ಕಾರಣ ಪೊಲೀಸರು ಠಾಣೆಯಲ್ಲೇ ದೇವಿಗೆ ಪೂಜೆ ಸಲ್ಲಿಸುವ ನಿರ್ಣಯಕ್ಕೆ ಬಂದಿದ್ದರು. ಅದಕ್ಕೆ ಆಗ ಒಂದು ಕತೆಯೂ ಹುಟ್ಟಿಕೊಂಡಿತ್ತು. ಕಣಿವೆ ಮಾರಮ್ಮ ದೇವಿ ಎಸ್‌ಪಿಯವರ ಕನಸಿನಲ್ಲಿ ಬಂದು ‘ನನ್ನನ್ನೇಕ ಬಂಧನದಲ್ಲಿಟ್ಟೀರಿ’ ಎಂದು ಪ್ರಶ್ನಿಸಿದ್ದಳು. ಅದಕ್ಕೇ ಎಸ್‌ಪಿಯವರು ಪೂಜೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು ಎಂದೂ ಹೇಳಲಾಗುತ್ತದೆ.

ಪೊಲೀಸ್‌ ಠಾಣೆಯ ಕಾಂಪೌಂಡ್‌ನಲ್ಲೇ ಪೊಲೀಸರು ದೇವಿಗೆ ಪೂಜೆ ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದರು. ನಂತರ ಎಸ್‌ಪಿಯವರು ಒಬ್ಬರು ವೃದ್ಧೆಯನ್ನು ಪೂಜಾ ಕೈಂಕರ್ಯ ನೆರವೇರಿಸಲು ನೇಮಿಸಿದ್ದರು. ನಂತರ ಒಂದು ಶೆಡ್‌ ನಿರ್ಮಿಸಿ, ಕಟ್ಟೆ ಕಟ್ಟಿ ಪೂಜೆ ಆರಂಭಿಸಲಾಯಿತು. ಇದಾದ ನಂತರ ಸಾರ್ವಜನಿಕರು ಕೂಡ ಪೂಜೆಯಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಹುಟ್ಟಿಕೊಂಡಿತು. ಹಲವು ವರ್ಷಗಳವರೆಗೆ ಶೆಡ್‌ನಲ್ಲೇ ಪೂಜೆ ನಡೆಯುತ್ತಿತ್ತು. ಜನರು ಕೂಡ ಪೂಜೆಗೆ ಬರುತ್ತಿದ್ದರು. ಪೊಲೀಸ್‌ ಸಿಬ್ಬಂದಿ ಸ್ವಂತ ಹಣ ಹಾಕಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದ್ದರು. 20ಕ್ಕೂ ಹೆಚ್ಚು ವರ್ಷಗಳ ಕಾಲ ಇದೇ ರೀತಿ ನಡೆದುಕೊಂಡು ಬಂತು. ಭಕ್ತರು ಕೊಟ್ಟ ಕಾಣಿಕೆ ಹಣವನ್ನು ಪೊಲೀಸರು ಎಫ್‌ಡಿ ಮಾಡಿ ಭದ್ರವಾಗಿ ಇಟ್ಟಿದ್ದರು.

2017ರಲ್ಲಿ ದೊಡ್ಡದಾಗಿ ದೇವಾಲಯ ನಿರ್ಮಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ಅನುಚೇತ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿದ್ದಾಗ ₹ 45 ಲಕ್ಷ ವೆಚ್ಚದಲ್ಲಿ ದೇವಾಲಯ ತಲೆ ಎತ್ತಿತ್ತು. ಜೊತೆಗೆ ಸಮಿತಿಯನ್ನೂ ರಚಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರಿಸಲಾಯಿತು. ಸಮುದಾಯಗಳ ಗೊಂದಲದ ಕಾರಣಕ್ಕಾಗಿ ಆರಂಭವಾದ ಪೂಜೆ ಬೇರೆ ರೂಪವನ್ನೇ ಪಡೆದುಕೊಂಡಿತು. ಕಣಿವೆ ಮಾರಮ್ಮ ದೇವಿ ಪೊಲೀಸ್‌ ಠಾಣೆ ಆವರಣಕ್ಕೆ ಧಾರ್ಮಿಕ ರೂಪ ನೀಡಿದಳು. ಇಂದಿಗೂ ಪೊಲೀಸರೇ ಮುಂದೆ ನಿಂತು ಎಲ್ಲಾ ಧಾರ್ಮಿಕ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ.

ಕುಂಚಿಗನಾಳ್‌ ಕಣಿವೆಯಲ್ಲಿದ್ದ ಮೂಲ ದೇವಾಲಯದಲ್ಲಿ ಎಲ್ಲಾ ಗೊಂದಲಗಳು ಮುಗಿದು ಈಗ ಅಲ್ಲಿ ಬೇರೊಂದು ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲಿಯ ದೇವಿ ‘ಕುಂಚಿಗನಾಳ್‌ ಕಣಿವೆ ಮಾರಮ್ಮ ದೇವಿ’ ಎಂದು ಪ್ರಸಿದ್ಧಿ ಪಡೆದಿದ್ದರೆ ಇಲ್ಲಿ ‘ನಗರ ಪೊಲೀಸ್‌ ಠಾಣೆ ಕಣಿವೆ ಮಾರಮ್ಮ’ ಎಂದ ಪ್ರಸಿದ್ಧಿ ಪಡೆದಿದ್ದಾಳೆ.

‘ಪೊಲೀಸ್‌ ಠಾಣೆ ಆವರಣಕ್ಕೆ ಕಣಿವೆ ಮಾರಮ್ಮ ದೈವೀಕ ರೂಪ ನೀಡಿದ್ದಾಳೆ. ಅವಳಿಗೆ ಮೊದಲು ಪೂಜೆ ಸಲ್ಲಿಸಿಯೇ ಪೊಲೀಸರು ತಮ್ಮ ನಿತ್ಯದ ಚಟುವಟಿಕೆ ನಡೆಸುತ್ತಾರೆ. ಜೊತೆಗೆ ಇಲ್ಲಿ ನಡೆಯುವ ವಿಶೇಷ ಧಾರ್ಮಿಕ ಚಟುವಟಿಕೆಗಳಿಗೆ ಲಕ್ಷಾಂತರ ಜನರು ಭಾಗವಹಿಸುತ್ತಾರೆ’ ಎಂದು ದೇವಾಲಯದ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ನಿವೃತ್ತ ಎಎಸ್‌ಐ ನಾಗೇಂದ್ರ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ