
Parking: ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ನೀತಿ: ಕಾರುಗಳಿಗೆ 25,000 ರೂ. ಬೈಕ್‌ಗೆ ಬಾರಿ ಶುಲ್ಕ, ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮತ್ತೆ ಹೊಸ ಪಾರ್ಕಿಂಗ್ ನೀತಿ ಜಾರಿ ಮಾಡುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರು ನಿವಾಸಿಗಳು ಶೀಘ್ರದಲ್ಲೇ ವಸತಿ ಪ್ರದೇಶಗಳಲ್ಲಿ ಮತ್ತು ವಸತಿ ರಹಿತ ರಸ್ತೆಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಬೆಂಗಳೂರಿನಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ಅಥವಾ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಈ ಹಿಂದೆಯೇ ಹೊಸ ಪಾರ್ಕಿಂಗ್ ನೀತಿ ಜಾರಿ ಮಾಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಧಿಯಲ್ಲೇ ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೊಸ ಕರಡು ಪಾರ್ಕಿಂಗ್ ನೀತಿಯನ್ನು ಪ್ರಕಟಿಸಿದೆ.
ಇದೀಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪ್ರಸ್ತಾಪಿಸಿರುವ ಗ್ರೇಟರ್ ಬೆಂಗಳೂರು ಪ್ರದೇಶ (ಪಾರ್ಕಿಂಗ್) ನಿಯಮಗಳು - 2026ರ ಪ್ರಕಾರ, ಬೆಂಗಳೂರಿನಲ್ಲಿ ವಸತಿ ಪ್ರದೇಶದಲ್ಲಿನ ಪಾರ್ಕಿಂಗ್ ಪರವಾನಗಿಗಳು ನಿಮ್ಮ ಬಳಿ ಯಾವ ಕಾರು ಇದೆ ಎನ್ನುವುದರ ಮೇಲೆ ಆಧರಿಸಿದೆ. ವರ್ಷಕ್ಕೆ 15 ಸಾವಿರದಿಂದ 25 ಸಾವಿರ ರೂಪಾಯಿಯ ವರೆಗೆ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗಬಹುದು. ಸಣ್ಣ ಕಾರುಗಳು ವಾರ್ಷಿಕ ಕಾರು ಪಾರ್ಕಿಂಗ್ ಪರವಾನಗಿ ಶುಲ್ಕ 15 ಸಾವಿರ ರೂ., ಸೆಡಾನ್ ಕಾರುಗಳಿಗೆ 20 ಸಾವಿರ ರೂ. ಮತ್ತು ಎಸ್‌ಯುವಿಗಳಿಗೆ 25 ಸಾವಿರ ರೂ.ಗಳವರೆಗೆ ಶುಲ್ಕ ವಿಧಿಸಲಾಗುತ್ತದೆ. ಇದು ವಾರ್ಷಿಕ ಶುಲ್ಕ ಪ್ರಮಾಣವಾಗಿದೆ.
ಮುಂದುವರಿದು ವಸತಿ ರಹಿತ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ಕಾರುಗಳಿಗೆ ಗಂಟೆಗೆ 40 ರಿಂದ 80 ರೂಪಾಯಿಗಳವರೆಗೆ ಶುಲ್ಕ ವಿಧಿಸಬಹುದು, ಆದರೆ ದ್ವಿಚಕ್ರ ವಾಹನಗಳಿಗೆ 20 ರಿಂದ 40 ರೂಪಾಯಿಗಳ ವರೆಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಎ,ಬಿ ಹಾಗೂ ಸಿ ಎಂದು ವರ್ಗೀಕರಿಸಲು ನಿರ್ಧರಿಸಲಾಗಿದೆ. ರಸ್ತೆಯ ವರ್ಗವನ್ನು ಅವಲಂಬಿಸಿ ಪಾರ್ಕಿಂಗ್ ಶುಲ್ಕಗಳು ಬದಲಾಗಲಿವೆ. ರಸ್ತೆಯಲ್ಲಿ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಇದರ ಆಧಾರದ ಮೇಲೆ ಪ್ರತಿ ಗಂಟೆಗೆ ಇಂತಿಷ್ಟು ಎಂದು ಶುಲ್ಕ ವಿಧಿಸಲಾಗುತ್ತದೆ.
ಅಲ್ಲದೆ ಆಫ್-ಸ್ಟ್ರೀಟ್ ಪಾರ್ಕಿಂಗ್ ಶುಲ್ಕ ಕಡಿಮೆ ಇರಲಿದೆ. ಕಾರುಗಳಿಗೆ ಗಂಟೆಗೆ 20 ರೂಪಾಯಿಯಿಂದ 40 ರೂಪಾಯಿ ಹಾಗೂ ದ್ವಿಚಕ್ರ ವಾಹನಗಳಿಗೆ 10 ರೂಪಾಯಿಯಿಂದ 20 ರೂಪಾಯಿ ಶುಲ್ಕವಿರಲಿದೆ. ಮಾಸಿಕ ಪಾರ್ಕಿಂಗ್ ಶುಲ್ಕವು 1,000 ರೂಪಾಯಿಯಿಂದ 4,000 ರೂಪಾಯಿ ಇರಲಿದೆ. ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಮಾಸಿಕ ಪಾರ್ಕಿಂಗ್ ದರದಲ್ಲಿ 50% ರಿಯಾಯಿತಿ ಸಿಗಲಿದೆ ಎಂದು ಹೇಳಲಾಗಿದೆ.
ಹೊಸ ಪಾರ್ಕಿಂಗ್ ನೀತಿ ಯಾಕೆ ?
ಇನ್ನು ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿಯ ಬಗ್ಗೆ ಕಳೆದ ಐದು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವುದು, ಬೈಕ್ ಹಾಗೂ ಕಾರುಗಳನ್ನು ಹೆಚ್ಚು ಸಮಯ ರಸ್ತೆಗಳಲ್ಲಿ ನಿಲ್ಲಿಸುವುದನ್ನು ತಪ್ಪಿಸುವ ಉದ್ದೇಶದಿಂದ ಈ ಹೊಸ ಪಾರ್ಕಿಂಗ್ ನೀತಿಯನ್ನು ಪರಿಚಯಿಸಲಾಗಿದೆ. ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕಗಳು ಹೆಚ್ಚಾಗಲಿದೆ.
ಈ ಹೊಸ ನೀತಿ ಜಾರಿಗೆ ಬಂದರೆ ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಆಗಸ್ಟ್ 11ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ ಕರಡು ಅಧಿಸೂಚನೆ ಪ್ರಕಾರ, ಗೆಜೆಟ್‌ನಲ್ಲಿ ಪ್ರಕಟವಾದ 30 ದಿನಗಳಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾಸಲಾಗುತ್ತದೆ.