
Germany: ಪರಿಸರದ ಜೊತೆ ಬದುಕುವ ಜರ್ಮನಿ
ಜರ್ಮನಿ ಎಂದಾಕ್ಷಣ ಉತ್ಕೃಷ್ಟವಾದ ಮೂಲಸೌಕರ್ಯ, ಜನರಲ್ಲಿರುವ ಶಿಸ್ತು ನೆನಪಾಗುವುದು ಸಹಜ. ಆದರೆ ಇದರ ಜೊತೆಗೆ ಅಲ್ಲಿನ ಜನರ ಪರಿಸರ ಕಾಳಜಿ ನಮಗೆಲ್ಲಾ ಮಾದರಿಯಾಗಬೇಕು ಎಂದೂ ಅನಿಸುತ್ತದೆ.
ಒಂದು ದೇಶದ ಅಭಿವೃದ್ಧಿಯನ್ನು ಅದರ ಎತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಕೈಗಾರಿಕೆಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಆ ದೇಶ ತನ್ನ ಸುತ್ತಲಿನ ಮರ, ನೀರು, ಗಾಳಿ, ಪ್ರಾಣಿ–ಪಕ್ಷಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎಂಬುದೂ ಅದರ ಅಭಿವೃದ್ಧಿಯ ಒಂದು ಅಳತೆ.
ಜರ್ಮನಿಗೆ ಹೋದಾಗ ಈ ಸಂಗತಿ ಮತ್ತೆ ಮತ್ತೆ ಅನುಭವಕ್ಕೆ ಬಂತು.
ಜರ್ಮನಿ ಎಂದಾಕ್ಷಣ ಕಾರುಗಳು, ಉತ್ತಮ ರಸ್ತೆಜಾಲ, ಕೈಗಾರಿಕೆಗಳು, ಬ್ಯಾಂಕಿಂಗ್ ಕ್ಷೇತ್ರ, ಶಿಸ್ತು ಮತ್ತು ಕಾನೂನು ಪಾಲನೆ ನೆನಪಾಗುವುದು ಸಹಜ. ಆದರೆ ಇವೆಲ್ಲದರ ನಡುವೆ ಅಲ್ಲಿನ ಪರಿಸರ ಕಾಳಜಿಯೂ ಗಮನ ಸೆಳೆಯುತ್ತದೆ. ಆಧುನಿಕ ಜೀವನದ ವೇಗದ ಜೊತೆಯಲ್ಲೇ ಪ್ರಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಅಲ್ಲಿನ ದೈನಂದಿನ ಬದುಕಿನ ಭಾಗವಾಗಿರುವುದು ವಿಶೇಷ.
ಫ್ರಾಂಕ್ಫರ್ಟ್ ನಗರದ ಅಂಚಿನಲ್ಲಿರುವ ಹ್ಯಾಟರ್ಸ್ಹೈಮ್ ಪ್ರದೇಶದಲ್ಲಿ ಮುಂಜಾನೆ ಅಥವಾ ಸಂಜೆ ವಾಯುವಿಹಾರಕ್ಕೆ ಹೊರಟರೆ ಈ ಅನುಭವ ಇನ್ನಷ್ಟು ಗಾಢವಾಗುತ್ತದೆ. ಎಲ್ಲೆಡೆ ಹಸಿರು, ಪಕ್ಷಿಗಳ ಕಲರವ, ಸ್ವಚ್ಛ ಗಾಳಿ ಮತ್ತು ಶುಭ್ರ ಆಕಾಶ. ನಗರದಿಂದ ಹೆಚ್ಚು ದೂರ ಹೋಗದೆಯೇ ಪ್ರಕೃತಿಯ ನಡುವೆ ಸಮಯ ಕಳೆಯುತ್ತಿರುವ ಅನುಭವ. ವಾರಾಂತ್ಯದಲ್ಲಿ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಮುಂತಾದ ಚಟುವಟಿಕೆಗಳಲ್ಲಿ ಜನರು ತೊಡಗಿರುವುದು ಸಾಮಾನ್ಯ ದೃಶ್ಯ.
ಈ ಪ್ರದೇಶದಲ್ಲಿ ಗಮನ ಸೆಳೆದ ಮತ್ತೊಂದು ಸಂಗತಿ ಮರಗಳ ಸಂರಕ್ಷಣೆಯ ವಿಧಾನ.
ಕೆಲವು ಮರಗಳಿಗೆ ಲೋಹದ ಲೇಬಲ್ಗಳನ್ನು ಅಳವಡಿಸಲಾಗಿತ್ತು. ಮರದ ಜಾತಿ, ವಯಸ್ಸು, ಪ್ರಭೇದ ಸೇರಿದಂತೆ ಅದರ ಕುರಿತ ಮಾಹಿತಿಯನ್ನು ದಾಖಲಿಸಲಾಗಿರುತ್ತದೆ. ಸ್ಥಳೀಯರ ಪ್ರಕಾರ ಇಂತಹ ದಾಖಲೆಗಳು ಗಣಕೀಕೃತವಾಗಿವೆ. ಅಂದರೆ, ಸಾರ್ವಜನಿಕ ಸ್ಥಳದಲ್ಲಿರುವ ಮರ ಕೂಡ ಆಡಳಿತದ ಗಮನದಲ್ಲಿರುವ ಒಂದು ಸಂಪನ್ಮೂಲ.
ಮರವನ್ನು ನೆಟ್ಟು ಮರೆತುಬಿಡುವುದಕ್ಕಿಂತ ಅದರ ಬೆಳವಣಿಗೆಯನ್ನು ದಾಖಲಿಸುವ, ಗಮನಿಸುವ ಮತ್ತು ಅಗತ್ಯವಿದ್ದಾಗ ಆರೈಕೆ ಮಾಡುವ ವ್ಯವಸ್ಥೆ ಇಲ್ಲಿರುವುದು ಗಮನಾರ್ಹ.
ಮರಗಳಿಗೆ ನೀಡುವ ಈ ರೀತಿಯ ಗುರುತು ಮತ್ತು ದಾಖಲೆ ವ್ಯವಸ್ಥೆ ನಮ್ಮ ನಗರಗಳಲ್ಲಿಯೂ ವ್ಯಾಪಕವಾಗಿ ಜಾರಿಯಾದರೆ, ಸಾರ್ವಜನಿಕ ಸ್ಥಳಗಳಲ್ಲಿರುವ ಮರಗಳ ಸಂರಕ್ಷಣೆಗೆ ಅದು ನೆರವಾಗಬಹುದು.
ಒಂದು ವಸತಿ ಸಮುಚ್ಚಯದಲ್ಲಿ ವಾಲಿದ್ದ ಮರವೊಂದನ್ನು ಅಲ್ಲಿನ ಸಮುದಾಯವೇ ಒಟ್ಟಾಗಿ ಪುನಃ ಸುಸ್ಥಿತಿಗೆ ತಂದಿರುವುದನ್ನೂ ನೋಡಿದೆ. ಮರವನ್ನು ಕತ್ತರಿಸಿ ಸಮಸ್ಯೆಯನ್ನು ಪರಿಹರಿಸುವ ಬದಲು, ಅದನ್ನು ಉಳಿಸಿಕೊಂಡೇ ಅದರ ಆರೈಕೆಗೆ ಮುಂದಾಗಿರುವುದು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವ ಒಂದು ಅಮೂಲ್ಯ ಉದಾಹರಣೆ.
ಚಳಿಗಾಲದಲ್ಲಿ ಪಕ್ಷಿಗಳಿಗೆ ಬದುಕು ಸುಲಭವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಕಡೆ ಮರದಿಂದ ನಿರ್ಮಿಸಿದ ಸಣ್ಣ ಕೃತಕ ಗೂಡುಗಳನ್ನು ಮರಗಳಿಗೆ ತೂಗು ಹಾಕಲಾಗಿದೆ.
ವಿಶೇಷವೆಂದರೆ ಅವು ಕೇವಲ ಅಲಂಕಾರಕ್ಕಾಗಿ ನಿರ್ಮಿಸಿದ ಗೂಡುಗಳಲ್ಲ. ಯಾವ ಪಕ್ಷಿಗಳು ಅವುಗಳನ್ನು ಬಳಸುತ್ತವೆ, ಅವುಗಳಿಗೆ ಯಾವ ರೀತಿಯ ಗೂಡು ಅನುಕೂಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವುಗಳ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗುತ್ತದೆ.
ನಗರ ಪ್ರದೇಶಗಳಲ್ಲಿ ಮರಗಳು ಕಡಿಮೆಯಾಗುತ್ತಾ, ಪಕ್ಷಿಗಳಿಗೆ ನೈಸರ್ಗಿಕವಾಗಿ ಗೂಡು ಕಟ್ಟಲು ಬೇಕಾದ ಕಡ್ಡಿ, ಹುಲ್ಲು ಮುಂತಾದ ವಸ್ತುಗಳು ಸಿಗುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಇಂತಹ ಸಣ್ಣ ಪ್ರಯತ್ನಗಳು ಅವುಗಳಿಗೆ ನೆರವಾಗಬಹುದು.
ನಮ್ಮ ನಗರಗಳ ಉದ್ಯಾನಗಳು ಮತ್ತು ಸಾರ್ವಜನಿಕ ಹಸಿರು ಪ್ರದೇಶಗಳಲ್ಲಿಯೂ ಇಂತಹ ಪ್ರಯತ್ನಗಳನ್ನು ಮಾಡಬಹುದಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತು.
ರಸ್ತೆಯಲ್ಲೂ ಜೀವಿಗಳಿಗೆ ಜಾಗ
ಜರ್ಮನಿಯಲ್ಲಿ ಪರಿಸರ ಕಾಳಜಿ ಕೇವಲ ಉದ್ಯಾನಗಳು ಮತ್ತು ಮರಗಳಲ್ಲಷ್ಟೇ ಕಾಣಿಸುವುದಿಲ್ಲ. ರಸ್ತೆ ಸಂಚಾರದಲ್ಲಿಯೂ ಪ್ರಾಣಿ–ಪಕ್ಷಿಗಳ ಸುರಕ್ಷತೆಯ ಬಗ್ಗೆ ಗಮನಹರಿಸಲಾಗುತ್ತದೆ.
ರಸ್ತೆಯ ಪಕ್ಕದಲ್ಲಿರುವ ಕೊಳವೊಂದರಲ್ಲಿ ಬಾತುಕೋಳಿಗಳು ಇವೆ. ಅವು ರಸ್ತೆಗೆ ಬರುವ ಸಾಧ್ಯತೆಯನ್ನು ಗಮನಿಸಿ ಅಲ್ಲಿ ವೇಗ ಮಿತಿಯ ಸೂಚನೆಗಳು ಮತ್ತು ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಚಾಲಕರು ಅವುಗಳನ್ನು ಗಮನಿಸಿ ವಾಹನ ಚಲಾಯಿಸುತ್ತಾರೆ.
ಇದೇ ರೀತಿಯಲ್ಲಿ ಶಬ್ದ ಮಾಲಿನ್ಯದ ಬಗ್ಗೆಯೂ ಕಟ್ಟುನಿಟ್ಟಿನ ನಿಲುವು ಕಾಣಿಸುತ್ತದೆ. ಅನಗತ್ಯವಾಗಿ ಹಾರ್ನ್ ಮಾಡುವ ಅಭ್ಯಾಸ ಇಲ್ಲಿ ಕಡಿಮೆ. ಜರ್ಮನಿಯಲ್ಲಿ ಹತ್ತು ದಿನಗಳಿದ್ದ ಅವಧಿಯಲ್ಲಿ ಒಮ್ಮೆಯೂ ಹಾರ್ನ್ ಶಬ್ದ ಕೇಳದ ಅನುಭವ ಇದಕ್ಕೆ ಒಂದು ಉದಾಹರಣೆ.
ಅದಕ್ಕೆ ಕಾರಣ ಕೇವಲ ನಿಯಮವಲ್ಲ. ರಸ್ತೆ ನಿಯಮಗಳನ್ನು ಪಾಲಿಸುವುದು ಅಲ್ಲಿನ ಚಾಲನಾ ಸಂಸ್ಕೃತಿಯ ಭಾಗವಾಗಿರುವುದರಿಂದ ಅನಗತ್ಯವಾಗಿ ಹಾರ್ನ್ ಮಾಡುವ ಅಗತ್ಯವೇ ಕಡಿಮೆಯಾಗುತ್ತದೆ.
ಸ್ಥಳೀಯರೊಂದಿಗೆ ಮಾತನಾಡಿದಾಗ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ರಸ್ತೆ ನಿಯಮ ಮತ್ತು ಕಾನೂನು ಪಾಲನೆಯ ಬಗ್ಗೆ ತಿಳಿಸುವುದಲ್ಲದೆ, ಅವರನ್ನು ರಸ್ತೆಗೆ ಕರೆದುಕೊಂಡು ಹೋಗಿ ಪ್ರಾಯೋಗಿಕ ಅರಿವು ಮೂಡಿಸುವ ಬಗ್ಗೆಯೂ ತಿಳಿಯಿತು. ನಿಯಮಗಳನ್ನು ಪುಸ್ತಕದಲ್ಲಿ ಓದುವುದಕ್ಕಿಂತ ಬದುಕಿನಲ್ಲಿ ಅನುಸರಿಸುವಂತೆ ಕಲಿಸುವ ಈ ವಿಧಾನ ಗಮನಾರ್ಹ.
ಪ್ರಕೃತಿಯ ನಡುವೆ ಪುಸ್ತಕ
ಪರಿಸರದ ಜೊತೆ ಓದಿಗೂ ಇಲ್ಲಿ ಜಾಗವಿದೆ.
ರಸ್ತೆಗಳ ಬದಿ ಮತ್ತು ವಾಯುವಿಹಾರ ಪ್ರದೇಶಗಳಲ್ಲಿ ಬಯಲು ಗ್ರಂಥಾಲಯಗಳನ್ನು ಕಾಣಬಹುದು. ಸಣ್ಣ ಕಪಾಟುಗಳಲ್ಲಿ ವಿವಿಧ ವಿಷಯಗಳ ಪುಸ್ತಕಗಳನ್ನು ಇಡಲಾಗಿರುತ್ತದೆ. ಇತಿಹಾಸ, ವಿಜ್ಞಾನ, ಮಕ್ಕಳ ಸಾಹಿತ್ಯ ಸೇರಿದಂತೆ ಹಲವು ಬಗೆಯ ಪುಸ್ತಕಗಳು ಸಾರ್ವಜನಿಕರ ಓದಿಗೆ ಲಭ್ಯ.
ಬೇಕಾದ ಪುಸ್ತಕವನ್ನು ತೆಗೆದುಕೊಂಡು ಓದಬಹುದು. ಓದಿದ ನಂತರ ಅದನ್ನು ಮತ್ತೆ ಕಪಾಟಿನಲ್ಲಿ ಜೋಡಿಸಿಡಬೇಕು. ಇದಕ್ಕೆ ದೊಡ್ಡ ನಿಯಮಾವಳಿಯ ಅಗತ್ಯವಿಲ್ಲ; ಸಾರ್ವಜನಿಕರ ಹೊಣೆಗಾರಿಕೆಯ ಮೇಲೆಯೇ ಈ ವ್ಯವಸ್ಥೆ ನಿಂತಿದೆ.
ಶಾಂತವಾದ ವಾತಾವರಣದಲ್ಲಿ ನಡೆಯುತ್ತಾ, ಒಂದು ಪುಸ್ತಕವನ್ನು ತೆಗೆದುಕೊಂಡು ಕುಳಿತು ಓದುವ ಅವಕಾಶವೂ ನಗರ ಜೀವನದ ಒಂದು ಭಾಗವಾಗಿರುವುದು ಗಮನ ಸೆಳೆಯುತ್ತದೆ.
ಸಣ್ಣ ಕ್ರಮಗಳ ಒಟ್ಟು ಪರಿಣಾಮ
ಜರ್ಮನಿಯಲ್ಲಿ ಕಂಡ ಈ ಅನುಭವಗಳಲ್ಲಿ ಯಾವುದೂ ಪ್ರತ್ಯೇಕವಾಗಿ ನೋಡಿದರೆ ಅಸಾಧಾರಣ
ವೆನಿಸದಿರಬಹುದು. ಒಂದು ಮರಕ್ಕೆ ಲೇಬಲ್ ಹಾಕುವುದು, ಪಕ್ಷಿಗಳಿಗೆ ಗೂಡು ನಿರ್ಮಿಸುವುದು, ಪ್ರಾಣಿಗಳಿಗೆ ನೀರು ಇಡುವುದು, ರಸ್ತೆಯಲ್ಲಿ ವೇಗದ ಮಿತಿ ಸೂಚಿಸುವುದು, ಅನಗತ್ಯ ಹಾರ್ನ್ ತಪ್ಪಿಸುವುದು, ಬಯಲು ಗ್ರಂಥಾಲಯ ನಿರ್ಮಿಸುವುದು ಸಣ್ಣ ಕ್ರಮಗಳೇ.
ಆದರೆ ಇಂತಹ ಸಣ್ಣ ಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಾಗ ಅವು ಒಂದು ಬದುಕಿನ ಸಂಸ್ಕೃತಿಯಾಗುತ್ತವೆ.
ಪರಿಸರ ಸಂರಕ್ಷಣೆ ಎಂದರೆ ದೊಡ್ಡ ಯೋಜನೆಗಳು, ಬೃಹತ್ ಅಭಿಯಾನಗಳು ಮಾತ್ರವಲ್ಲ. ನಮ್ಮ ಸುತ್ತಲಿನ ಮರವನ್ನು ಉಳಿಸುವುದು, ಪಕ್ಷಿಗೆ ಗೂಡು ಒದಗಿಸುವುದು, ರಸ್ತೆಯಲ್ಲಿ ಒಂದು ಜೀವಿಯ ಸುರಕ್ಷತೆಗಾಗಿ ವೇಗ ಕಡಿಮೆ ಮಾಡುವುದು, ಶಬ್ದ ಮಾಡದೆ ಇರುವುದು, ಸಾರ್ವಜನಿಕ ಪುಸ್ತಕವನ್ನು ಜೋಪಾನವಾಗಿ ಬಳಸುವುದು ಪರಿಸರ ಕಾಳಜಿಯ ಭಾಗವೇ.
ಜರ್ಮನಿಯಲ್ಲಿ ಕಂಡ ಅನುಭವದ ಮುಖ್ಯ ಪಾಠ ಇದೇ.
ಜೀವ ವೈವಿಧ್ಯದಲ್ಲಿ ಜರ್ಮನಿಗಿಂತ ಬಹಳ ಶ್ರೀಮಂತವಾಗಿರುವ ನಮ್ಮ ದೇಶದಲ್ಲಿ ಇಂತಹ ಸಣ್ಣ ಉಪಕ್ರಮಗಳಿಗೆ ಇನ್ನಷ್ಟು ಅವಕಾಶವಿದೆ. ಆದರೆ ಅದಕ್ಕೆ ಸರ್ಕಾರದ ವ್ಯವಸ್ಥೆಯಷ್ಟೇ ಸಾಲದು. ಸಮುದಾಯದ ಪಾಲ್ಗೊಳ್ಳುವಿಕೆಯೂ ಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಸಬೇಕಾಗಿದೆ.
ಒಂದು ದೇಶದ ಪರಿಸರವನ್ನು ಸರ್ಕಾರ ಮಾತ್ರ ಕಾಪಾಡಲು ಸಾಧ್ಯವಿಲ್ಲ. ಅದನ್ನು ಪ್ರತಿದಿನ ಬಳಸುವ ಜನರೂ ಕಾಪಾಡಬೇಕು.
ಜರ್ಮನಿಯಲ್ಲಿ ಕಂಡ ಹಸಿರು, ಪಕ್ಷಿಗಳ ಕಲರವ, ಶಾಂತವಾದ ರಸ್ತೆಗಳು ಮತ್ತು ಮರಗಳ ಮೇಲಿನ ಸಣ್ಣ ಲೋಹದ ಫಲಕಗಳು ಇದೇ ಸರಳ ಸತ್ಯವನ್ನು ನೆನಪಿಸುತ್ತವೆ.